samachara
www.samachara.com
ಸಚಿವ ಸ್ಥಾನ ಕೊಡದಿದ್ದರೆ ಮಧ್ಯಪ್ರದೇಶಕ್ಕೂ ಕರ್ನಾಟಕದ್ದೇ ಗತಿ: ಬಿಎಸ್‌ಪಿ ಶಾಸಕಿ ಎಚ್ಚರಿಕೆ
ಸುದ್ದಿ ಸಾರ

ಸಚಿವ ಸ್ಥಾನ ಕೊಡದಿದ್ದರೆ ಮಧ್ಯಪ್ರದೇಶಕ್ಕೂ ಕರ್ನಾಟಕದ್ದೇ ಗತಿ: ಬಿಎಸ್‌ಪಿ ಶಾಸಕಿ ಎಚ್ಚರಿಕೆ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ರಚಿಸಲು ಬಹುಜನ ಸಮಾಜವಾದಿ ಪಕ್ಷ ಸಹಾಯ ಮಾಡಿದೆ. ಹೀಗಾಗಿ ಪಕ್ಷದ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು ಎಂದು ಶಾಸಕಿ ರಮಾಬಾಯಿ ಸಿಂಗ್ ಒತ್ತಾಯಿಸಿದ್ದಾರೆ.

ಮಧ್ಯಪ್ರದೇಶದ ಕಮಲ್‌ನಾಥ್ ಸರಕಾರದಲ್ಲಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಶಾಸಕರಿಗೆ ಸಚಿವ ಸ್ಥಾನ ಸಿಗದಿದ್ದರೆ ಇಲ್ಲಿನ ಸರಕಾರಕ್ಕೂ ಕರ್ನಾಟಕದ ಸಮ್ಮಿಶ್ರ ಸರಕಾರದ ಪರಿಸ್ಥಿತಿ ಎದುರಾಗಲಿದೆ ಎಂದು ಬಿಎಸ್‌ಪಿ ಶಾಸಕಿ ರಮಾಬಾಯಿ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಬಿಎಸ್‌ಪಿ ಶಾಸಕರಿಗೆ ಸಚಿವ ಸ್ಥಾನ ಕೊಡದಿದ್ದರೆ ಕರ್ನಾಟಕದಲ್ಲಿ ನಿರ್ಮಾಣವಾಗಿರುವಂತಹ ಅತಂತ್ರ ರಾಜಕೀಯ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ರಮಾಬಾಯಿ ಮುನ್ಸೂಚನೆ ನೀಡಿದ್ದಾರೆ.

ಮಧ್ಯಪ್ರದೇಶದ ದಮೋಹ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶುಕ್ರವಾರ ಮಾತನಾಡಿರುವ ರಮಾಬಾಯಿ ಸಿಂಗ್, “ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ರಚಿಸಲು ಬಹುಜನ ಸಮಾಜವಾದಿ ಪಕ್ಷ ಸಹಾಯ ಮಾಡಿದೆ. ಹೀಗಾಗಿ ಪಕ್ಷದ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು. ಸಚಿವ ಸ್ಥಾನ ನೀಡಿದರೆ ಉತ್ತಮ ಕೆಲಸ ನಿರ್ವಹಿಸುತ್ತೇವೆ. ಇಲ್ಲದಿದ್ದರೂ ನಾವು ಒಳ್ಳೆಯ ಕೆಲಸವನ್ನೇ ಮಾಡುತ್ತೇವೆ. ನಾವು ಸಚಿವರಿಗಿಂತ ದೊಡ್ಡವರು. ಸರಕಾರ ರಚನೆಗೆ ನಾವೇ ಕಾರಣ” ಎಂದಿದ್ದಾರೆ.

“ಮಧ್ಯಪ್ರದೇಶದಲ್ಲಿ ಸಧೃಡ ಸರಕಾರ ನಿರ್ಮಾಣವಾಗಲು ಎಲ್ಲರನ್ನೂ ಖುಷಿಪಡಿಸಬೇಕು. ನಮಗೆ ಸಚಿವ ಸ್ಥಾನ ನೀಡದಿದ್ದರೆ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಹೀಗಾಗಿ ಬಿಎಸ್‌ಪಿ ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು” ಎಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಕಮಲ್‌ನಾಥ್ ನೇತೃತ್ವದಲ್ಲಿ ಮಧ್ಯಪ್ರದೇಶದಲ್ಲಿ ಸರಕಾರ ರಚನೆಯಾದಾಗಿನಿಂದ ಬಿಎಸ್‌ಪಿ ಪಕ್ಷದ ಶಾಸಕರು ತಾವೂ ಸಚಿವ ಸ್ಥಾನದ ಆಕಾಂಕ್ಷಿಗಳೇ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಬಿಜೆಪಿ 109 ಸ್ಥಾನಗಳಿಗೆ ತೃಪ್ತಿಪಟ್ಟಿತ್ತು. 230 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಸರಕಾರ ರಚಿಸಲು 116 ಸ್ಥಾನಗಳ ಬಹುಮತ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ 2 ಸ್ಥಾನಗಳಲ್ಲಿ ಜಯಗಳಿಸಿರುವ ಬಹುಜನ ಸಮಾಜವಾದಿ ಪಕ್ಷ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿತ್ತು.