samachara
www.samachara.com
ಸಿಆರ್‌ಝೆಡ್‌ ನಿಯಮ ಉಲ್ಲಂಘನೆ; ನೀರವ್ ಮೋದಿಯ ಐಷಾರಾಮಿ ಬಂಗಲೆ ಕೆಡವಲು ಆದೇಶ
ಸುದ್ದಿ ಸಾರ

ಸಿಆರ್‌ಝೆಡ್‌ ನಿಯಮ ಉಲ್ಲಂಘನೆ; ನೀರವ್ ಮೋದಿಯ ಐಷಾರಾಮಿ ಬಂಗಲೆ ಕೆಡವಲು ಆದೇಶ

ಮುಂಬೈ ಸಮೀಪದ ಅಲಿಬಾಗ್‌ನಲ್ಲಿ ಸಮುದ್ರ ತೀರದಲ್ಲಿರುವ ನೀರವ್‌ ಮೋದಿಗೆ ಸೇರಿದ ಐಷಾರಾಮಿ ಬಂಗಲೆಯನ್ನು ಕೆಡವುವ ಕೆಲಸ ನಡೆಯುತ್ತಿದೆ...

ಕರಾವಳಿ ಸಂರಕ್ಷಣಾ ವಲಯ (ಸಿಆರ್‌ಝೆಡ್‌) ನಿಯಮ ಉಲ್ಲಂಘನೆಯ ಕಾರಣಕ್ಕೆ ನೀರವ್‌ ಮೋದಿಗೆ ಸೇರಿದ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಬಂಗಲೆ ಸೇರಿ 58 ಕಟ್ಟಡಗಳನ್ನು ನೆಲಸಮಗೊಳಿಸಲು ಬಾಂಬೆ ಹೈಕೋರ್ಟ್‌ ಆದೇಶಿಸಿದೆ.

ಮುಂಬೈ ಸಮೀಪದ ಅಲಿಬಾಗ್‌ನಲ್ಲಿ ಸಮುದ್ರ ತೀರದಲ್ಲಿರುವ ನೀರವ್‌ ಮೋದಿಗೆ ಸೇರಿದ ಐಷಾರಾಮಿ ಬಂಗಲೆಯನ್ನು ಕೆಡವುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಡೆಗೋಡೆಯೊಳಗಿನ 70,000 ಚದರ ಅಡಿ ವಿಸ್ತೀರ್ಣದ ಜಾಗದೊಳಗೆ 33,000 ಚದರ ಅಡಿಯಲ್ಲಿ ನಿರ್ಮಿಸಿರುವ ಐಷಾರಾಮಿ ಬಂಗಲೆ ಇದಾಗಿದೆ. ಸಿಆರ್‌ಝೆಡ್‌ ನಿಯಮ ಉಲ್ಲಂಘಿಸಿ ಈ ಬಂಗೆಲ ನಿರ್ಮಿಸಿರುವುದು ಸಾಬೀತಾಗಿದೆ.

ಮುಂಬೈನಿಂದ 90 ಕಿ.ಮೀ. ದೂರದಲ್ಲಿರುವ ಅಲಿಬಾಗ್‌ ಕಡಲ ತೀರದಲ್ಲಿ ನಿಯಮ ಉಲ್ಲಂಘಿಸಿ ಬಂಗಲೆ, ರೆಸ್ಟೋರಂಟ್‌ಗಳನ್ನು ನಿರ್ಮಿಸಿದ್ದು ಅವನ್ನು ತೆರವುಗೊಳಿಸಲು ಆದೇಶ ನೀಡಬೇಕೆಂದು 2009ರಲ್ಲಿ ಶಂಬುರಾಜೆ ಯುವ ಕ್ರಾಂತಿ ಎಂಬ ಸ್ವಯಂ ಸೇವಾಸಂಸ್ಥೆಯು ಬಾಂಬೆ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿತ್ತು. ವಿಚಾರಣೆ ನಡೆಸಿರುವ ಹೈಕೋರ್ಟ್ ಒಟ್ಟು 58 ಕಟ್ಟಡಗಳನ್ನು ಕೆಡವಲು ಆದೇಶಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಯಘಡ ಜಿಲ್ಲಾಧಿಕಾರಿ ಸೂರ್ಯವಂಶಿ, “58 ಕಟ್ಟಡಗಳು ನಿಯಮ ಬಾಹಿರವಾಗಿ ನಿರ್ಮಿಸಲಾಗಿರುವುದು ಸಾಬೀತಾಗಿದೆ. ಹೈಕೋರ್ಟ್ ಆದೇಶದಂತೆ ಎಲ್ಲಾ ಕಟ್ಟಡಗಳನ್ನೂ ನೆಲಸಮ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

ನೀರವ್‌ ಮೋದಿಗೆ ಸೇರಿದ ಈ ಐಶಾರಾಮಿ ಬಂಗಲೆಯನ್ನು ಕೆಡವುವ ಆದೇಶವನ್ನು ಹಿಂಪಡೆಯುವಂತೆ ಜಾರಿ ನಿರ್ದೇಶನಾಯ ಹೈಕೋರ್ಟ್ ಮೊರೆ ಹೋಗಿತ್ತು. ಅಲ್ಲದೆ ಈ ಕಟ್ಟಡದ ಮೇಲೆ ಉದ್ಯಮಿ ನೀರವ್ ಮೋದಿ ಅಪಾರ ಪ್ರಮಾಣದ ಸಾಲ ಪಡೆದಿದ್ದು ಐಶಾರಾಮಿ ಕಟ್ಟಡವನ್ನು ಕೆಡವದಂತೆ ಮನವಿ ಮಾಡಿತ್ತು. ಆದರೆ ಇದೀಗ ಕಟ್ಟಡದ ಒಳಗಿದ್ದ ಎಲ್ಲಾ ವಸ್ತುಗಳನ್ನು ತೆರವುಗೊಳಿಸಿರುವ ಜಾರಿ ನಿರ್ದೇಶನಾಯ ಬಂಗಲೆಯನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದೆ.

ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೇಹುಲ್ ಚೋಸ್ಕಿ ವಿರುದ್ಧ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,000 ಕೋಟಿ ವಂಚಿಸಿದ ಆರೋಪವಿದೆ. ಬಂಧನ ಭೀತಿಯಲ್ಲಿರುವ ನೀರವ್ ಮೋದಿ ವರ್ಷದ ಹಿಂದೆಯೇ ವಿದೇಶಕ್ಕೆ ಪರಾರಿಯಾಗಿದ್ದಾನೆ. ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕ ತೆರಳುವುದಾಗಿ ಹೇಳಿದ್ದ ಮೇಹುಲ್ ಚೋಸ್ಕಿ ಮೊನ್ನೆ ಆಂಟಿಗ್ವಾ ದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ.