samachara
www.samachara.com
ಅಡ್ವಾಣಿ, ಜೋಶಿ ಚುನಾವಣೆಗೆ ಸ್ಪರ್ಧಿಸುವುದು ಅವರಿಗೆ ಬಿಟ್ಟಿದ್ದು ಎಂದ ಬಿಜೆಪಿ
ಸುದ್ದಿ ಸಾರ

ಅಡ್ವಾಣಿ, ಜೋಶಿ ಚುನಾವಣೆಗೆ ಸ್ಪರ್ಧಿಸುವುದು ಅವರಿಗೆ ಬಿಟ್ಟಿದ್ದು ಎಂದ ಬಿಜೆಪಿ

ಅಡ್ವಾಣಿ ಹಾಗೂ ಜೋಶಿ ಸೇರಿದಂತೆ 75 ವರ್ಷ ದಾಟಿರುವ ಹಿರಿಯರ ಚುನಾವಣಾ ನಿರ್ಧಾರವನ್ನು ಅವರಿಗೇ ಬಿಡಲು ಬಿಜೆಪಿ ಮುಂದಾಗಿದೆ.

Team Samachara

ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಸೇರಿದಂತೆ ಪಕ್ಷ ಹಿರಿಯರು ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಥಿಸುವುದು ಅವರ ಇಚ್ಚೆಗೆ ಬಿಟ್ಟ ವಿಚಾರ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

75 ವರ್ಷ ದಾಟಿದವರಿಗೆ ಸಚಿವ ಸ್ಥಾನ ಸೇರಿದಂತೆ ಸರಕಾರದಲ್ಲಿ ಜವಾಬ್ದಾರಿಯುತ ಹುದ್ದೆ ನೀಡದಿರಲು ಬಿಜೆಪಿ ಈ ಹಿಂದೆಯೇ ನಿರ್ಧರಿಸಿದೆ. ಹೀಗಾಗಿ 2014ರ ಚುನಾವಣೆಯಲ್ಲಿ ಗೆದ್ದು ಬಂದ ಅಡ್ವಾಣಿ ಮತ್ತು ಜೋಶಿ ಅವರಿಗೆ ಪಕ್ಷ ಹಿರಿಯ ಮಾರ್ಗದರ್ಶಕರ ಹೆಸರಿಟ್ಟು ಅವರನ್ನು ಸಕ್ರಿಯ ರಾಜಕಾರಣದಿಂದ ದೂರವೇ ಇಟ್ಟಿದೆ.

ವಯೋಮಿತಿ ಇರುವುದು ಸಚಿವ ಸ್ಥಾನ ಹಾಗೂ ಜವಾಬ್ದಾರಿಯುತ ಹುದ್ದೆಗಳಿಗಷ್ಟೇ. ಆ ನಿಯಮ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅನ್ವಯವಾಗದು. ಮುಂದಿನ ಮೂರು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಈ ಹಿರಿಯರು ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎಂಬುದನ್ನು ಅವರೇ ನಿರ್ಧರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

75 ವರ್ಷ ದಾಟಿದ ಹಿರಿಯ ನಾಯಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಪಕ್ಷ ಅವಕಾಶ ಮಾಡಿಕೊಡುತ್ತದೆಯೇ ಎಂಬ ಪ್ರಶ್ನೆ ಮೂಡಿತ್ತು. ಆದರೆ ಈ ಪ್ರಶ್ನೆಗೆ ಬಿಜೆಪಿ ಪೂರ್ಣ ವಿರಾಮ ಹಾಕಿದೆ. 91 ವರ್ಷದ ಅಡ್ವಾನಿ ಹಾಗೂ 84 ವರ್ಷದ ಜೋಶಿ ರಾಜಕೀಯ ಭವಿಷ್ಯವನ್ನು ಅವರೇ ನಿರ್ಧರಿಸಲಿದ್ದಾರೆ ಎಂದು ಪಕ್ಷ ಹೇಳಿದೆ. ಆದರೆ, ಪಕ್ಷದ ನಿರ್ಧಾರದಂತೆ ನಡೆದುಕೊಳ್ಳಲು ಜೋಶಿ ನಿರ್ಧರಿಸಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ಆರೋಗ್ಯ ಸಮಸ್ಯೆ ಕಾರಣಕ್ಕೆ ಸುಷ್ಮಾ ಸ್ವರಾಜ್ ಹಾಗೂ ಉಮಾ ಭಾರತಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಆದರೆ, ಅಡ್ವಾಣಿ ಹಾಗೂ ಜೋಶಿ ಸೇರಿದಂತೆ 75 ವರ್ಷ ದಾಟಿರುವ ಹಿರಿಯರ ಚುನಾವಣಾ ನಿರ್ಧಾರವನ್ನು ಅವರಿಗೇ ಬಿಡಲು ಪಕ್ಷ ಮುಂದಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾನಿ ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ವಾರಣಾಸಿ ಕ್ಷೇತ್ರವನ್ನು ನರೇಂದ್ರ ಮೋದಿಗೆ ಬಿಟ್ಟುಕೊಟ್ಟಿದ್ದ ಜೋಶಿ ಕಾನ್‌ಪುರ ಕ್ಷೇತ್ರದಿಂದ ಸ್ಫರ್ಧಿಸಿ ಗೆಲುವು ಸಾಧಿಸಿದ್ದರು. 2014ರಲ್ಲಿ ಬಿಜೆಪಿ ಬಹುಮತದೊಂದಿಗೆ ಗೆದ್ದಾಗ ಅಡ್ವಾನಿ, ಜೋಶಿ ಸೇರಿದಂತೆ ಹಿರಿಯರಿಗೆ ಪ್ರಮುಖ ಸ್ಥಾನಗಳು ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ. ವಯೋಮಿತಿಯ ಕಾರಣ ನೀಡಿ ಪಕ್ಷ ಅವರನ್ನು ಸಚಿವ ಸ್ಥಾನದಿಂದ ದೂರವೇ ಇಟ್ಟಿತ್ತು.

ಅಡ್ವಾಣಿ, ಜೋಶಿ ಮಾತ್ರವಲ್ಲದೆ ಶಾಂತಕುಮಾರ್, ಬಿ.ಸಿ. ಖಂಡೂರಿ ಅವರಿಗೂ ಸಚಿವ ಸ್ಥಾನ ನಿರಾಕರಿಸಲಾಗಿತ್ತು. 75 ವರ್ಷ ಧಾಟಿದವರಿಗೆ ಮಂತ್ರಿಗಿರಿ ಇಲ್ಲ ಎಂದು ಪಕ್ಷ ಸ್ಪಷ್ಟಪಡಿಸಿತ್ತು. ಅಲ್ಲದೆ ಅಡ್ವಾನಿ ಮತ್ತು ಜೋಶಿ ಅವರಿಗೆ ‘ಮಾರ್ಗದರ್ಶಕ’ ಹುದ್ದೆ ನೀಡಿ ಕೈ ತೊಳೆದುಕೊಂಡಿತ್ತು.

ಅಡ್ವಾಣಿ ಲೋಕಸಭಾ ಸ್ಪೀಕರ್‌ ಅಥವಾ ರಾಷ್ಟ್ರಪತಿ ಹುದ್ದೆಗೆ ಏರಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. ಸುಮಿತ್ರಾ ಮಹಾಜನ್ ಅವರನ್ನು ಸ್ಪೀಕರ್‌ ಮಾಡಿದರೆ, ಕೋವಿಂದ್‌ ಅವರನ್ನು ಪಕ್ಷ ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಿತ್ತು. ಪಕ್ಷದ ಈ ನಡೆಗಳು ಸಹಜವಾಗಿಯೇ ಅಡ್ವಾಣಿ ಬೆಂಬಲಿಗರಿಗೆ ಪಕ್ಷದ ಬಗ್ಗೆಯೇ ಬೇಸರ ಉಂಟಾಗುವಂತೆ ಮಾಡಿತ್ತು.

ನರೇಂದ್ರ ಮೋದಿ ಪ್ರಧಾನಿ ಹುದ್ದೆ ಅಲಂಕರಿಸಿದ ದಿನದಿಂದ ಪಕ್ಷದಲ್ಲಿ ಹಿರಿಯರನ್ನು ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಈ ಆರೋಪಕ್ಕೆ ತಕ್ಕಂತೆ ಆಗಿಂದಾಗ್ಗೆ ಪಕ್ಷದ ಹಿರಿಯ ಮುಖಂಡರು ಮೋದಿ ಆಡಳಿತ ವೈಖರಿಯ ಕುರಿತು ಮಾತಿನ ಚಾಟಿ ಬೀಸುತ್ತಲೇ ಇದ್ದಾರೆ. ಸಂಸತ್ತಿನ ಅಂದಾಜು ಸಮಿತಿ ಮುಖ್ಯಸ್ಥರಾಗಿರುವ ಮುರಳಿ ಮನೋಹರ ಜೋಶಿ ಸರಕಾರದ ನೀತಿಗಳನ್ನು ಅನೇಕ ಬಾರಿ ನೇರಾನೇರ ಟೀಕಿಸಿದ್ದಾರೆ. ಅಡ್ವಾಣಿಯೂ ಹಲವಾರು ಕಡೆಗಳಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೀನಾಯವಾಗಿ ಸೋಲನುಭವಿಸಿದ ನಂತರ ಪಕ್ಷದ ಹಿರಿಯರಾದ ಜೋಶಿ, ಅಡ್ವಾಣಿ ಹಾಗೂ ಯಶವಂತ್ ಸಿನ್ಹಾ ಪಕ್ಷದಲ್ಲಿನ ತಮ್ಮ ಜವಾಬ್ದಾರಿ ಏನು ಎಂದು ಪ್ರಶ್ನಿಸಿ ಪತ್ರ ಬರೆದದ್ದು ದೊಡ್ಡ ಮಟ್ಟದಲ್ಲಿ ಸದ್ದಾಗಿತ್ತು. ಇನ್ನು ಚಿತ್ರನಟ, ಸಂಸದ ಶತ್ರುಘ್ನ ಸಿನ್ಹಾ ಬಿಜೆಪಿಗೆ ಮಗ್ಗುಲ ಮುಳ್ಳಾಗಿರುವುದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಎತ್ತಿ ತೋರಿಸುವಂತಿದೆ.