samachara
www.samachara.com
ಮೇಘಾಲಯ ಕಲ್ಲಿದ್ದಲು ಗಣಿ ದುರಂತ : 42 ದಿನಗಳ ನಂತರ ಒಂದು  ಮೃತದೇಹ ಮೇಲಕ್ಕೆ
ಸುದ್ದಿ ಸಾರ

ಮೇಘಾಲಯ ಕಲ್ಲಿದ್ದಲು ಗಣಿ ದುರಂತ : 42 ದಿನಗಳ ನಂತರ ಒಂದು ಮೃತದೇಹ ಮೇಲಕ್ಕೆ

ನೀರು ತುಂಬಿರುವ 370ಅಡಿ ಆಳದ ಗಣಿಯೊಳಗಿಂದ ಕೊಳೆತ ಸ್ಥಿತಿಯಲ್ಲಿರುವ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ.

ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ ನಾಪತ್ತೆಯಾಗಿದ್ದ 15 ಗಣಿ ಕಾರ್ಮಿಕರ ಹುಡುಕಾಟದ ಕಾರ್ಯಾಚರಣೆ ನಡೆಸುತ್ತಿರುವ ಎನ್‌ಡಿಆರ್‌ಎಫ್ ಹಾಗೂ ನೌಕಾದಳ ಸಿಬ್ಬಂದಿ ಬುಧವಾರ ಒಂದು ಮೃತದೇಹವನ್ನು ಗಣಿಯಾಳದಿಂದ ಮೇಲಕ್ಕೆ ಎತ್ತಿದ್ದಾರೆ.

ಹುಡುಕಾಟ ನಡೆಸುತ್ತಿರುವ ಸಿಬ್ಬಂದಿಗೆ ಕಳೆದ ವಾರ ನೀರಿನಾಳದಲ್ಲಿ ಮೃತದೇಹವಿರುವುದು ಆರ್‌ಒವಿ ಸಾಧನದ ಮೂಲಕ ಗೊತ್ತಾಗಿತ್ತು. ನೀರು ತುಂಬಿರುವ 370ಅಡಿ ಆಳದ ಗಣಿಯೊಳಗಿಂದ ಕೊಳೆತ ಸ್ಥಿತಿಯಲ್ಲಿರುವ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ.

ಕಳೆದ ವರ್ಷ ಡಿಸೆಂಬರ್‌ 13 ರಂದು ಮೇಘಾಲಯದ ಪೂರ್ವ ಜೈಂತಿಯಾ ಹಿಲ್ಸ್ ಜಿಲ್ಲೆಯ ಲುಮ್ತಾರಿ ಪ್ರದೇಶದಲ್ಲಿ ಕಲ್ಲಿದ್ದಲು ಸಂಗ್ರಹಕ್ಕೆ 20 ಕಾರ್ಮಿಕರು ನದಿಯ ಸಮೀಪದಲ್ಲೇ ಇದ್ದ 350 ಅಡಿ ಆಳದ ಗಣಿಗೆ ಇಳಿದಿದ್ದರು. ಗಣಿಯೊಳಗೆ ನೀರು ನುಗ್ಗಿ ಕಾರ್ಮಿಕರು ಅಪಾಯಕ್ಕೆ ಸಿಲುಕಿದ್ದರು. 5 ಮಂದಿ ಕಾರ್ಮಿಕರು ಅಲ್ಲಿಂದ ಪಾರಾಗಿ ಬರಲು ಯಶಸ್ವಿಯಾಗಿದ್ದರು. ಆದರೆ ಒಳಗೆ ಸಿಲುಕಿದ್ದ ಉಳಿದ 15 ಜನ ಗಣಿಯೊಳಗೆ ನಾಪತ್ತೆಯಾಗಿದ್ದರು.

ನೀರಿನಿಂದಾಗಿ ಕಾರ್ಯಾಚರಣೆಗೆ ಅಡ್ಡಿ

ಗಣಿಯೊಳಗೆ ಹುಡುಕಾಟದ ಕಾರ್ಯಾಚರಣೆ ನಡೆಸಲು ನೀರು ತುಂಬಿರುವುದು ಅಡ್ಡಿಯಾಗುತ್ತಿದೆ. ಗಣಿಯಿಂದ ನೀರನ್ನು ಹೊರತೆಗೆಯುವ ಕೆಲಸ ನಡೆಯುತ್ತಲೇ. ಆದರೆ, ನೀರನ್ನು ಪೈಪ್‌ಗಳ ಮೂಲಕ ಹೊರಗೆ ತೆಗೆದರೂ ಮತ್ತೆ ಗಣಿಯಲ್ಲಿ ನೀರು ಶೇಖರಣೆಯಾಗುತ್ತಿದೆ. ನೀರಿನ ಅಡಿಯಲ್ಲಿ ವಸ್ತುಗಳನ್ನು ಗುರುತಿಸುವ ಆರ್‌ಓವಿ ಯಂತ್ರದ ಸಹಾಯದಿಂದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಗಣಿಯೊಳಗಿನ ಸಲ್ಫರ್‌ನಿಂದ ಮೃತದೇಹಗಳು ಬೇಗ ಕೊಳೆಯುತ್ತವೆ. ಆರ್‌ಓವಿ ಯಂತ್ರಗಳು ನೀರಿನಡಿ ಕೆಲವು ಮೂಳೆಗಳನ್ನು ಗುರುತಿಸಿವೆ. ಮೃತಪಟ್ಟಿರುವ 15 ಕಾರ್ಮಿಕರ ಕುಟುಂಬಗಳ ಪೈಕಿ ನಾಲ್ಕು ಕುಟುಂಬಗಳು ಅಂತ್ಯ ಸಂಸ್ಕಾರ ನೆರವೇರಿಸಲಾದರೂ ತಮ್ಮವರ ಮೃತದೇಹವನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

ಕಾರ್ಯಾಚರಣೆ ನಿಲ್ಲಿಸದಂತೆ ತಾಕೀತು ಮಾಡಿದ್ದ ಸುಪ್ರೀಂಕೋರ್ಟ್ ಥಾಯ್ಲೆಂಡ್‌ನಲ್ಲಿ ಮಕ್ಕಳ ಫುಟ್‌ಬಾಲ್ ತಂಡ ಗುಹೆಯೊಳಗಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಬಂದ ರೀತಿ ಗಣಿ ಕಾರ್ಮಿಕರೂ ಪಾರಾಗುವ ಸಾಧ್ಯತೆ ಇದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗಳನ್ನು ಯುದ್ಧೋಪಾದಿಯಲ್ಲಿ ನಡೆಸಿ ಎಂದು ಆದೇಶಿಸಿತ್ತು. ಆದರೆ, ಗಣಿಯೊಳಗೆ ಕಾರ್ಮಿಕರು ಸಿಲುಕಿ 42 ದಿನಗಳು ಕಳೆದಿದ್ದು ಅವರು ಬದುಕಿರುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗುತ್ತಿದೆ.