samachara
www.samachara.com
ಸಿ-ವೋಟರ್‌ ಚುನಾವಣಾ ಪೂರ್ವ ಸಮೀಕ್ಷೆ; ಯಾರ್ಯಾರಿಗೆ ಎಷ್ಟೆಷ್ಟು ಸ್ಥಾನ?
ಸುದ್ದಿ ಸಾರ

ಸಿ-ವೋಟರ್‌ ಚುನಾವಣಾ ಪೂರ್ವ ಸಮೀಕ್ಷೆ; ಯಾರ್ಯಾರಿಗೆ ಎಷ್ಟೆಷ್ಟು ಸ್ಥಾನ?

ಈ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಓಲೈಸುವುದು ಅನಿವಾರ್ಯ. ಯಾಕೆಂದರೆ...

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್‌ ಆಗಲಿವೆ ಎಂಬ ಸುಳಿವನ್ನು ಸಿ- ವೋಟರ್‌ ಸಮೀಕ್ಷೆ ನೀಡಿದೆ. ಇತರೆ ಪಕ್ಷಗಳು 143 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕೇಂದ್ರದ ಅಧಿಕಾರದ ಗದ್ದುಗೆಗೆ ಏರುವವರು ಯಾವು ಎಂಬುದನ್ನು ಈ ಬಾರಿ ನಿರ್ಧರಿಸಲಿವೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 233, ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟ 167 ಸ್ಥಾನಗಳಲ್ಲಿ ಗೆಲ್ಲಲಿವೆ ಎಂದು ಸಮೀಕ್ಷೆ ಹೇಳಿದೆ. ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ ಸ್ಪಷ್ಟಬಹುಮತಕ್ಕೆ ಬೇಕಾದ 273 ಸ್ಥಾನಗಳನ್ನು ಯಾವೊಂದು ಮೈತ್ರಿಕೂಟವೂ ಈ ಬಾರಿ ಗೆಲ್ಲುವುದು ಕಷ್ಟ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ ಪಕ್ಷ 266 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಇಬ್ಬರು ನಾಮನಿರ್ದೇಶಿಕ ಸದಸ್ಯರೂ ಸೇರಿದಂತೆ ಕಳೆದ ಬಾರಿ ಎನ್‌ಡಿಎ ಮೈತ್ರಿಕೂಟದ ಒಟ್ಟು ಸದಸ್ಯರ ಸಂಖ್ಯೆ 305. ಆದರೆ, ಈ ಬಾರಿ ಎನ್‌ಡಿಎ ಸಂಖ್ಯೆ 233ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ.

Also read: ಮೂಡ್‌ ಆಫ್‌ ದಿ ನೇಷನ್: ಎಸ್‌ಪಿ- ಬಿಎಸ್‌ಪಿ ‘ಕೈ’ ಹಿಡಿದರೆ ಈ ಬಾರಿ ‘ಕಮಲ’ ಅರಳವುದು ಕಷ್ಟ

ಕಳೆದ ಬಾರಿ 64 ಸ್ಥಾನಗಳಿಗೆ ತೃಪ್ತಿ ಪಟ್ಟಿಕೊಂಡಿದ್ದ ಯುಪಿಎ ಮೈತ್ರಿಕೂಟ ಈ ಬಾರಿ 167 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಬಾರಿ ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿತ್ತು. ಈ ಬಾರಿ ಯುಪಿಎ ಸಂಖ್ಯೆ ವೃದ್ಧಿಸಲಿದ್ದು ಸರಕಾರ ರಚಿಸುವ ಅವಕಾಶವೂ ಸಿಗಬಹುದು ಎನ್ನಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೆ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಬಿಜೆಪಿ ಗೆಲುವು ಕಷ್ಟವಿದೆ. ಕರ್ನಾಟಕದಲ್ಲೂ ಬಿಜೆಪಿ 11 ಸ್ಥಾನಗಳಲ್ಲಷ್ಟೇ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

ಚುನಾವಣಾ ಪೂರ್ವ ಸಮೀಕ್ಷೆಗಳು ಈ ಬಾರಿ ಬಿಜೆಪಿ ಸ್ಥಾನಗಳು ಕಡಿಮೆಯಾಗುವ ಮುನ್ಸೂಚನೆ ನೀಡುತ್ತಿವೆ. ಪ್ರಾದೇಶಿಕ ಪಕ್ಷಗಳು ಈ ಬಾರಿ ನಿರ್ಣಾಯಕವಾಗಲಿದ್ದು, ಸರಕಾರ ರಚಿಸುವ ಎನ್‌ಡಿಎ ಅಥವಾ ಯುಪಿಎ ಮೈತ್ರಿಕೂಟಗಳು ಈ ಪ್ರಾದೇಶಿಕ ಪಕ್ಷಗಳನ್ನು ಓಲೈಸುವುದು ಅನಿವಾರ್ಯವಾಗಲಿದೆ.