samachara
www.samachara.com
ಬಿಜೆಪಿ ಮಡಿಲ ಕೆಂಡ ‘ಶತ್ರು’ಘ್ನ ಸಿನ್ಹ ಪಕ್ಷ ಸೇರಲು ಆಹ್ವಾನಿಸಿದ ಆರ್‌ಜೆಡಿ
ಸುದ್ದಿ ಸಾರ

ಬಿಜೆಪಿ ಮಡಿಲ ಕೆಂಡ ‘ಶತ್ರು’ಘ್ನ ಸಿನ್ಹ ಪಕ್ಷ ಸೇರಲು ಆಹ್ವಾನಿಸಿದ ಆರ್‌ಜೆಡಿ

ಬಿಜೆಪಿ ತೊರೆದರೆ ತಮ್ಮ ಪಕ್ಷ ಸೇರುವಂತೆ ಶತ್ರುಘ್ನ ಸಿನ್ಹ ಅವರಿಗೆ ಆರ್‌ಜೆಡಿ ಮುಖಂಡರು ಆಹ್ವಾನ ನೀಡಿದ್ದಾರೆ. ಆದರೆ, ಸಿನ್ಹ ತಮ್ಮ ಮುಂದಿನ ನಡೆಯನ್ನು ಇನ್ನೂ ಬಹಿರಂಗ ಪಡಿಸಿಲ್ಲ.

ಬಿಜೆಪಿಗೆ ಸದ್ಯ ಮಡಿಲ ಕೆಂಡವಾಗಿರುವ ಸಂಸದ ಶತ್ರುಘ್ನ ಸಿನ್ಹ ಅವರಿಗೆ ರಾಷ್ಟ್ರೀಯ ಜನತಾ ದಳದಿಂದ (ಆರ್‌ಜೆಡಿ) ಪಕ್ಷ ಸೇರಲು ಆಹ್ವಾನ ಬಂದಿದೆ. ಸಿನ್ಹ ಪಕ್ಷ ಸೇರಲು ಬಯಸಿದರೆ ಆರ್‌ಜೆಡಿ ಅವರನ್ನು ಸ್ವಾಗತಿಸುತ್ತದೆ ಎಂದು ಪಕ್ಷದ ಮುಖಂಡ ತೇಜ್ ಪ್ರತಾಪ್‌ ಯಾದವ್‌ ತಿಳಿಸಿದ್ದಾರೆ.

"ನಾನು ಶತ್ರುಘ್ನ ಸಿನ್ಹ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಬಿಜೆಪಿ ತೊರೆಯುವ ಮನಸ್ಸು ಮಾಡಿರುವ ಅವರು ನಮ್ಮ ಪಕ್ಷ ಸೇರಬಹುದು. ಈ ಬಗ್ಗೆ ಸಿನ್ಹ ಅವರೊಂದಿಗೂ ಮಾತನಾಡಿದ್ದೇನೆ" ಎಂದು ತೇಜ್‌ ಪ್ರತಾಪ್‌ ಯಾದವ್‌ ಹೇಳಿದ್ದಾರೆ.

ಕಳೆದ ವರ್ಷ ತಮ್ಮ ವೈವಾಹಿಕ ಬದುಕಿನ ಏಳುಬೀಳುಗಳ ಬಳಿಕ ಪಕ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಸಕ್ರಿಯರಾಗಿರುವ ತೇಜ್‌ ಪ್ರತಾಪ್‌ ಯಾದವ್‌ ಬಿಹಾರದಲ್ಲಿ ಪಕ್ಷ ಸಂಘಟಿಸುವ ಕೆಲಸಕ್ಕೆ ಒತ್ತು ನೀಡುತ್ತಿದ್ದಾರೆ. ಪಕ್ಷ ಸಂಘಟನೆಯ ಮುಂದುವರಿದ ಭಾಗವಾಗಿಯೇ ಬಿಜೆಪಿಯ ಭಿನ್ನದನಿ ಶತ್ರುಘ್ನ ಸಿನ್ಹ ಅವರನ್ನು ಆರ್‌ಜೆಡಿಗೆ ಸೆಳೆಯುವ ಪ್ರಯತ್ನಗಳು ನಡೆದಿವೆ.

ತೃಣಮೂಲ ಕಾಂಗ್ರೆಸ್‌ ಕಳೆದ ವಾರ ಕೋಲ್ಕತ್ತದಲ್ಲಿ ಆಯೋಜಿಸಿದ್ದ ಯುನೈಟೆಡ್‌ ಇಂಡಿಯಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಶತ್ರುಘ್ನ ಸಿನ್ಹ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ತಮ್ಮ ಹೇಳಿಕೆಗಾಗಿ ಬಿಜೆಪಿ ಪಕ್ಷದಿಂದ ಹೊರಹಾಕಿದರೂ ಅಂಜುವುದಿಲ್ಲ ಎಂದು ಸಿನ್ಹ ಹೇಳಿದ್ದರು.

ಈಗಾಗಲೇ ಬಿಜೆಪಿ ತೊರೆಯುವ ಸೂಚನೆ ನೀಡಿರುವ ಶತ್ರುಘ್ನ ಸಿನ್ಹ ತಮ್ಮ ಮುಂದಿನ ನಡೆಯೇನು ಎಂಬುದನ್ನು ಇನ್ನೂ ಗುಟ್ಟಾಗಿಯೇ ಇಟ್ಟಿದ್ದಾರೆ. ಆರ್‌ಜೆಡಿ ಪಕ್ಷದ ಆಹ್ವಾನದ ಬಗ್ಗೆ ಸಿನ್ಹ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

"ವಸಂತ ಪಂಚಮಿ ಹಬ್ಬ ಬರುತ್ತಿದೆ. ಅಷ್ಟರ ಹೊತ್ತಿಗೆ ಎಲ್ಲವೂ ಸ್ಪಷ್ಟವಾಗಲಿದೆ. ಈ ನಡುವೆ ನನ್ನ ರಾಜಕೀಯ ಜೊತೆಗಾರರು ಯಾರು - ಮಮತಾ ಬ್ಯಾನರ್ಜಿ ಅಥವಾ ಅರವಿಂದ ಕೇಜ್ರಿವಾಲ್‌ - ಎಂಬುದು ಗೊತ್ತಾಗಲಿದೆ. ಎಲ್ಲೇ ಇದ್ದರೂ ರಾಜಕೀಯ ಮೈತ್ರಿಯಲ್ಲಿ ಗೌರವ ಸಿಗುವ ಜಾಗದಲ್ಲಿರಬೇಕು" ಎಂದಿದ್ದಾರೆ ಸಿನ್ಹ.