samachara
www.samachara.com
ಆನಂದ್‌ಸಿಂಗ್‌ ಮೇಲೆ ಹಲ್ಲೆ ಪ್ರಕರಣ;  ಗಣೇಶ್‌ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕಾಂಗ್ರೆಸ್‌
ಸುದ್ದಿ ಸಾರ

ಆನಂದ್‌ಸಿಂಗ್‌ ಮೇಲೆ ಹಲ್ಲೆ ಪ್ರಕರಣ; ಗಣೇಶ್‌ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕಾಂಗ್ರೆಸ್‌

ಜೆ.ಎನ್‌. ಗಣೇಶ್ ವಿರುದ್ಧ ಮತ್ತೆ ಕಾನೂನಿನ ಪ್ರಕಾರ ರೌಡಿಶೀಟ್ ತೆರೆಯುವುದಾಗಿ ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಈಗಲ್ಟನ್ ರೆಸಾರ್ಟ್‍ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ರಾತ್ರೋರಾತ್ರಿ ಸುದ್ದಿಯಾಗಿದ್ದ ರೌಡಿಶೀಟರ್ ಕುಖ್ಯಾತಿಯ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್ ವಿರುದ್ಧ ದಾಖಲಾಗಿರುವ ಪ್ರಕರಣಗಳು ಮರುಜೀವ ಪಡೆಯುತ್ತಿವೆ. ಆನಂದ್ ಸಿಂಗ್ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಸಿರುವ ಹೈಕಮಾಂಡ್ ಗಣೇಶ್‌ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಗಣೇಶ್ ವಿರುದ್ಧ ಮತ್ತೆ ಕಾನೂನಿನ ಪ್ರಕಾರ ರೌಡಿಶೀಟ್ ತೆರೆಯುವುದಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಈ ಮೂಲಕ ಆಡಳಿತ ಪಕ್ಷದ ಶಾಸಕನೊಬ್ಬನ ವಿರುದ್ದ ರೌಡಿಶೀಟ್‌ ತೆರೆದ ಮೊದಲ ಅಪಖ್ಯಾತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಲಿದೆ.

ಕಾಂಗ್ರೆಸ್‍ನ ಈ ನಡೆಯನ್ನು ಸ್ವಾಗತಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್, ಕಾನೂನಿನ ಮುಂದೆ ಎಲ್ಲರೂ ಒಂದೇ. ಇಂದಿರಾಗಾಂಧಿಯನ್ನೇ ಬಿಡದಿರುವ ಈ ದೇಶದಲ್ಲಿ ಇನ್ನು ಗಣೇಶ್ ಯಾವ ಲೆಕ್ಕ ಎನ್ನುವ ಮೂಲಕ ಕಾಂಗ್ರೆಸ್‍ಗೆ ಬಿಸಿ ಮುಟ್ಟಿಸಿದ್ದಾರೆ.

ಶನಿವಾರ ರಾತ್ರಿ ರಾಮನಗರ ಸಮೀಪದ ಬಿಡದಿ ಬಳಿ ಇರುವ ಈಗಲ್ಟನ್ ರೆಸಾರ್ಟ್‍ನಲ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ಪರಸ್ಪರ ಬಡಿದಾಡಿಕೊಂಡಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಕಾಂಗ್ರೆಸ್‍ಗೆ ಭಾರೀ ಮುಜುಗರ ಸೃಷ್ಟಿಸಿತ್ತು. ಆಪರೇಷನ್ ಕಮಲ ತಡೆಯಲು ಹೋಗಿ ಶಾಸಕರನ್ನು ರೆಸಾರ್ಟ್‍ನಲ್ಲಿ ಕೂಡಿ ಹಾಕಿದ್ದ ಕಾಂಗ್ರೆಸ್‍ಗೆ ಈ ಪ್ರಕರಣ ಏನೋ ಮಾಡಲು ಹೋಗಿ ಇನ್ನೇನು ಮಾಡಿದರು ಎಂಬಂತಾಗಿತ್ತು.

Also read: ರೆಸಾರ್ಟ್‌ ರಾಜಕೀಯ ನಾಟಕದಲ್ಲಿ ಸ್ಟಂಟ್; ಗಣಿನಾಡ ‘ಜನಸೇವಕ’ರ ಮಾರಾಮಾರಿ?

ಎಂ.ಬಿ. ಪಾಟೀಲ್ ಹೇಳಿದ್ದೇನು?

ಶಾಸಕ ಆನಂದ್‍ಸಿಂಗ್ ಅವರ ವಿರುದ್ಧ ಹಲ್ಲೆ ನಡೆಸಿದ ಕಂಪ್ಲಿ ಶಾಸಕ ಗಣೇಶ್ ವರ್ತನೆಯಿಂದ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ ಎಂಬುದನ್ನು ಒಪ್ಪಿಕೊಂಡ ಎಂ.ಬಿ. ಪಾಟೀಲ್‌, ಕೊಲೆ ಯತ್ನದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗುವುದು. ಜಾಮೀನು ಪಡೆಯಲು ಅವರೇನೇ ಪ್ರಯತ್ನ ಮಾಡಬಹುದು. ಆದರೆ ಕೊಲೆ ಪ್ರಯತ್ನವಾದ್ದರಿಂದ ಅವರಿಗೆ ಜಾಮೀನು ಸಿಗುವುದಿಲ್ಲ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದರು.

ಘಟನೆಗೆ ಕಾರಣರಾದ ಗಣೇಶ್ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ವಿಷಯದಲ್ಲಿ ಯಾವ ಅನುಮಾನವೂ ಬೇಡ ಎಂದ ಅವರು, ಮುಂದೇನಾಗಲಿದೆ ಎಂಬುದನ್ನು ನೀವೇ ನೋಡುತ್ತೀರಿ. ಘಟನೆ ಸಾರ್ವಜನಿಕ ವಲಯಕ್ಕೆ ತಪ್ಪು ಸಂದೇಶ ರವಾನಿಸಿದೆ. ಪಕ್ಷಕ್ಕೂ ಮುಜುಗರ ಉಂಟು ಮಾಡಿದೆ. ಹೀಗಿರುವಾಗ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳದೆ ಇರಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯಾರು ಗಣೇಶ್ ?

'ಮುಂಗೋಪಿ' ಗಣೇಶ್ ಹಲ್ಲೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2005ರಲ್ಲಿ ಚಪ್ಪರದಹಳ್ಳಿ ನಗರಸಭೆ ಸದಸ್ಯ ಚಿದಾನಂದ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ಐಪಿಸಿ 324/ 323/ 504 ಹಾಗೂ 506 ಕಲಂ ಅಡಿ ಪ್ರಕರಣ ದಾಖಲಾಗಿತ್ತು.

2006ರಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಐಪಿಸಿ 143/ 147/ 323 /353/ 504 ಕಲಂ ಅಡಿ ಪ್ರಕರಣ ದಾಖಲಾಗಿತ್ತು. ಹಲ್ಲೆ ಮತ್ತಿತರ ಪ್ರಕರಣಗಳಿಂದ ಗಣೇಶ್‌ ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿದ್ದರು. ಈ ಸಂಬಂಧ ಅವರ ವಿರುದ್ಧ 2006 ರಲ್ಲಿ ರೌಡಿಶೀಟ್ ತೆರೆಯಲಾಗಿತ್ತು. ನಂತರ 2015ರಲ್ಲಿ ರೌಡಿಶೀಟ್‌ನಿಂದ ಅವರ ಹೆಸರನ್ನು ತೆಗೆದುಹಾಕಲಾಗಿತ್ತು.