samachara
www.samachara.com
ನರೋಡಾ ಪಟಿಯಾ ಹತ್ಯಾಕಾಂಡ; 4 ಪ್ರಮುಖ ಆರೋಪಿಗಳಿಗೆ ಸುಪ್ರೀಂ ಜಾಮೀನು
ಸುದ್ದಿ ಸಾರ

ನರೋಡಾ ಪಟಿಯಾ ಹತ್ಯಾಕಾಂಡ; 4 ಪ್ರಮುಖ ಆರೋಪಿಗಳಿಗೆ ಸುಪ್ರೀಂ ಜಾಮೀನು

ಗುಜರಾತ್‌ನ ನರೋಡಾ ಪಟಿಯಾ ಹತ್ಯಾಕಾಂಡ ಪ್ರಕರಣದ ನಾಲ್ಕು ಮಂದಿ ಪ್ರಮುಖ ಆರೋಪಿಗಳಿಗೆ ಸುಪ್ರೀಂಕೋರ್ಟ್ ಇಂದು ಜಾಮೀನು ನೀಡಿದೆ.

Team Samachara

2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಯಿಂದಾಗಿ 97 ಜನ ಮುಸ್ಲಿವರ ಮಾರಣ ಹೋಮಕ್ಕೆ ಕಾರಣವಾದ ನರೋಡಾ ಪಟಿಯಾ ಹತ್ಯಾಕಾಂಡ ಪ್ರಕರಣದ ನಾಲ್ಕು ಮಂದಿ ಪ್ರಮುಖ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿದೆ.

ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಉಮೇಶ್ ಬಾಯ್ ಬರ್ವದ್, ರಾಜ್ ಕುಮಾರ್, ಹರ್ಷದ್ ಹಾಗೂ ಪ್ರಕಾಶ್ ಬಾಯ್ ಅವರಿಗೆ ಗುಜರಾತ್ ಹೈಕೋರ್ಟ್ ಕಳೆದ ವರ್ಷ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಸುಪ್ರೀಮ್ ಕೋರ್ಟ್ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಎ.ಎಂ. ವಾಲೀಕರ್ ಹೈಕೋರ್ಟ್ ನೀಡಿರುವ ತೀರ್ಪು ವಿವಾದಾಸ್ಪದವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಪ್ರಕರಣದ ನಾಲ್ಕು ಜನ ಪ್ರಮುಖ ಆರೋಪಿಗಳಿಗೆ ಜಾಮೀನು ನೀಡಿ ಆದೇಶಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಜೂನ್ 25 ರಂದು ತೀರ್ಪು ನೀಡಿದ್ದ ಹೈಕೋರ್ಟ್ ನರೋಡಾ ಪಟಿಯಾ ಹತ್ಯಾಕಾಂಡ ಪ್ರಕರಣದಲ್ಲಿ ಬಿಜೆಪಿ ಪಕ್ಷದ ಮಾಜಿ ಸಚಿವ ಮಾಯಾ ಕೊಡ್ನಾಣಿ ಸೇರಿದಂತೆ 18 ಜನರನ್ನು ಖುಲಾಸೆಗೊಳಿಸಿತ್ತು. ಆದರೆ 16 ಜನರ ಮೇಲೆ ದೋಷಾರೋಪ ಸಾಬೀತಾಗಿದೆ ಎಂದು ತಿಳಿಸಿತ್ತು. ನರೋಡಾ ಪಟಿಯಾ ಹತ್ಯಾಕಾಂಡದ ಕ್ರೌರ್ಯವನ್ನು ತೀವ್ರವಾಗಿ ಖಂಡಿಸಿದ್ದ ನ್ಯಾಯಾಲಯ ಇದು ಕ್ಷಮಾಪಣೆಗೆ ಅರ್ಹವಾದ ಪ್ರಕರಣವಲ್ಲ ಎಂದು ಅಭಿಪ್ರಾಯಪಟ್ಟಿತ್ತು.

"ಈ ಪ್ರಕರಣದಲ್ಲಿ ಬಲಿಪಶುಗಳಾದ ಜನರ ದುಖಃವನ್ನು ನ್ಯಾಯಾಲಯ ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲ. ಈ ಗಲಭೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೋಮು ಸೌಹಾರ್ದತೆಯನ್ನು ಹಾಳುಗೆಡವಿದೆ. ಇಂತಹ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಉದಾರ ವರ್ತನೆ ತೋರುವುದು ಸಮಾಜದ ವಿರುದ್ಧವಾದ ನಡೆಯಾಗುತ್ತದೆ. ಹೀಗಾಗಿ ಈ ಹೀನ ಹತ್ಯಾಕಾಂಡದ ಆರೋಪಿಗಳಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅರ್ಹವಾಗಿದೆ" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಏನಿದು ಪಟಿಯಾ ಹತ್ಯಾಕಾಂಡ?

2002ರ ಏಪ್ರಿಲ್ 27 ರಂದು ಗೋದ್ರಾ ರೈಲಿಗೆ ಬೆಂಕಿ ಬಿದ್ದಿತ್ತು. ಇದರಲ್ಲಿ 59ಕ್ಕೂ ಹೆಚ್ಚು ಹಿಂದೂಗಳು ಸಾವನ್ನಪ್ಪಿದ್ದರು. ಇದೇ ಕಾರಣಕ್ಕೆ ಆರಂಭವಾದ ಗೋದ್ರಾ ಹಿಂಸಾಚಾರ ದೇಶ ಎಂದೂ ಮರೆಯಲಾಗದ ಕೋಮು ದಳ್ಳುರಿಯ ಅಧ್ಯಾಯವಾಗಿ ಉಳಿದಿದೆ. ಈ ಹಿಂಸಾಚಾರದ ಅತಿದೊಡ್ಡ ಭಾಗವೇ ನರೋಡಾ ಪಟಿಯಾ ಹತ್ಯಾಕಾಂಡ.

ಗೋಧ್ರಾ ರೈಲಿಗೆ ಬೆಂಕಿ ಬಿದ್ದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ ಮರುದಿನ ಅಂದರೆ 2002 ಫೆಬ್ರವರಿ 28 ರಂದು ದಾಳಿಕೋರರ ತಂಡವೊಂದು ಮುಸ್ಲಿಮರ ಸಂಖ್ಯೆ ಅಧಿಕವಾಗಿದ್ದ ನರೋಡಾ ಪಟಿಯಾ ಪ್ರದೇಶಕ್ಕೆ ನುಗ್ಗಿತ್ತು. ಕಣ್ಣಿಗೆ ಕಂಡವರನ್ನೆಲ್ಲಾ ಕೊಲೆ ಮಾಡಲಾಯಿತು. ಮಹಿಳೆಯರ ಅತ್ಯಾಚಾರಗಳು ನಡೆದವು. ನರೋಡಾ ಪಟಿಯಾ ಭಾಗದಲ್ಲೇ ಸುಮಾರು 97 ಜನ ಮುಸ್ಲಿಮರ ಕಗ್ಗೊಲೆಯಾಗಿತ್ತು.