samachara
www.samachara.com
ಭವ್ಯ ಗದ್ದುಗೆಗೆ ‘ಸರಳ ಜೀವಿ’; ಅಮೃತ ಶಿಲಾ ಮಂಟಪದಲ್ಲಿ ಶತಾಯುಷಿ ಅಂತ್ಯಕ್ರಿಯೆಗೆ ಸಿದ್ಧತೆ
ಸುದ್ದಿ ಸಾರ

ಭವ್ಯ ಗದ್ದುಗೆಗೆ ‘ಸರಳ ಜೀವಿ’; ಅಮೃತ ಶಿಲಾ ಮಂಟಪದಲ್ಲಿ ಶತಾಯುಷಿ ಅಂತ್ಯಕ್ರಿಯೆಗೆ ಸಿದ್ಧತೆ

ಸ್ವಾಮೀಜಿ ಹುಟ್ಟೂರು ವೀರಾಪುರ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಸಚಿವ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದ್ದಾರೆ.

Team Samachara

ತಮ್ಮ ಭಕ್ತಾಭಿಮಾನಿಗಳಿಂದ ‘ಸರಳ ಜೀವಿ’ ಎಂದು ಕರೆಸಿಕೊಳ್ಳುತ್ತಿದ್ದ ಶಿವಕುಮಾರ ಸ್ವಾಮೀಜಿಯ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಠದ ಆವರಣದಲ್ಲಿ ಅಮೃತ ಶಿಲೆಯಿಂದ ನಿರ್ಮಾಣವಾಗಿರುವ ಭವ್ಯ ಗದ್ದುಗೆಯಲ್ಲಿ ನಡೆಯಲಿದೆ. ಸ್ವಾಮೀಜಿ ಅಂತ್ಯಕ್ರಿಯೆಗೆ ಮಠದ ಆವರಣದಲ್ಲಿ ಈ ಹಿಂದೆಯೇ ನಿರ್ಮಾಣವಾಗಿರುವ ಗದ್ದುಗೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಸಿದ್ಧಗಂಗಾ ಮಠದ ಹಿಂದಿನ ಪೀಠಾಧೀಶರಾಗಿದ್ದ ಉದ್ಧಾನ ಶಿವಯೋಗಿಗಳ ಗದ್ದುಗೆಯ ಸಮೀಪದಲ್ಲೇ 37 ವರ್ಷಗಳ ಹಿಂದೆಯೇ ಈ ಭವ್ಯ ಗದ್ದುಗೆಗೆ ಶಿಲಾನ್ಯಾಸ ನಡೆದಿತ್ತು. ಎರಡು ವರ್ಷಗಳ ಹಿಂದೆ ಈ ಗದ್ದುಗೆ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಅಂದಹಾಗೆ ಈ ಗದ್ದುಗೆಯ ನಿರ್ಮಾಣಕ್ಕೆ ತಲುಲಿದ ವೆಚ್ಚ 3 ಕೋಟಿ ರೂಪಾಯಿ.

ಸಿದ್ಧಗಂಗಾ ಮಠದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಮೃತ ಶಿಲೆಯ ಭವ್ಯ ಗದ್ದುಗೆ
ಸಿದ್ಧಗಂಗಾ ಮಠದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಮೃತ ಶಿಲೆಯ ಭವ್ಯ ಗದ್ದುಗೆ

Also read: 1908- 2019 ‘ವ್ಯಕ್ತಿ’ಚಿತ್ರ: ವೀರಾಪುರದ ಶಿವಣ್ಣ- ಕಾಯಕಯೋಗಿ- ನಡೆದಾಡುವ ‘ದೇವರು’

ಅಮೃತ ಶಿಲೆಯ ಭವನದ ಒಳಭಾಗದ ಗದ್ದುಗೆಯ ಗರ್ಭಗುಡಿಯೊಳಗೆ ಈ ಹಿಂದೆಯೇ ಎಸಿ ಅಳವಡಿಸಲಾಗಿದೆ. ನೆಲ ಹಾಗೂ ಗೋಡೆಗಳಿಗೂ ಅಮೃತ ಶಿಲೆಯ ಫಲಕಗಳನ್ನು ಅಳವಡಿಸಲಾಗಿದೆ. ಒಳಭಾಗದ ಗದ್ದುಗೆಯ ದ್ವಾರವನ್ನು ಕಪ್ಪುಶಿಲೆಯಿಂದ ಕೆತ್ತಲಾಗಿದೆ. ಈ ದ್ವಾರದ ಕಲಾ ಕುಸುರಿಯಲ್ಲಿ ಶರಣರು, ಶಿವಯೋಗಿಗಳ ಶಿಲ್ಪಗಳ ಜತೆಗೆ ತಲೆಬಾಗಿಲಿನ ಮೇಲೆ ಶಿವಕುಮಾರ ಸ್ವಾಮೀಜಿ ಕುಳಿತಿರುವ ಶಿಲ್ಪ ಕೆತ್ತಲಾಗಿದೆ.

ಸ್ವಾಮೀಜಿ ಬದುಕಿದ್ದಾಗಲೇ ಭವ್ಯವಾಗಿ ನಿರ್ಮಾಣ ಮಾಡಲಾಗಿದ್ದ ಗದ್ದುಗೆಯಲ್ಲಿ ಇಂದು ಸಂಜೆ 5 ಗಂಟೆಗೆ ಸ್ವಾಮೀಜಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಅಂತಿಮ ದರ್ಶನಕ್ಕೆ ಇಟ್ಟಿರುವ ಪಾರ್ಥಿವ ಶರೀರವನ್ನು ಸಂಜೆ 4 ಗಂಟೆಯ ವೇಳೆಗೆ ಮೆರವಣಿಗೆಯಲ್ಲಿ ಈ ಭವ್ಯ ಗದ್ದುಗೆಗೆ ತರಲಾಗುತ್ತದೆ. ಬಳಿಕ ಗದ್ದುಗೆಯಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಮೆಟ್ಟಿಲುಗಳ ಮೇಲಿಟ್ಟು ಪೂಜೆ ಮಾಡಿ ನಂತರ ಲಿಂಗಾಯತ ಸಂಪ್ರದಾಯದಂತೆ ಗದ್ದುಗೆಯೊಳಗೆ ಪಾರ್ಥಿವ ಶರೀರವನ್ನಿಟ್ಟು ವಿಭೂತಿ ಹಾಗೂ ಬಿಲ್ವಪತ್ರೆಯಿಂದ ಮುಚ್ಚಲಾಗುತ್ತದೆ.

ಸ್ವಾಮೀಜಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯುವ ಗದ್ದುಗೆಯ ಸ್ಥಳ
ಸ್ವಾಮೀಜಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯುವ ಗದ್ದುಗೆಯ ಸ್ಥಳ

ಸ್ವಾಮೀಜಿ ಅಂತಿಮ ದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಇಮದೂ ಸಹ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಸಿದ್ಧಗಂಗಾ ಮಠ ಹಾಗೂ ಕ್ಯಾತ್ಸಂದ್ರ ಜನ ಜಂಗುಳಿಯಿಂದ ಕಿಕ್ಕಿರಿದಿದೆ. ತುಮಕೂರಿನ ಬೀದಿ ಬೀದಿಗಳಲ್ಲಿ ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಸಂತಾಪ ಸೂಚಿಸಿದ ಬ್ಯಾನರ್‌ಗಳನ್ನು ಹಾಕಲಾಗಿದೆ.

ಸ್ವಾಮೀಜಿ ಹುಟ್ಟೂರು ವೀರಾಪುರ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಸಚಿವ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದ್ದಾರೆ.

Also read: ವೀರಾಪುರದಲ್ಲೊಂದು ಸುತ್ತು: ಹುಟ್ಟಿದೂರಲ್ಲೇ ಶತಾಯುಷಿಯ ಕುರುಹುಗಳಿಲ್ಲ

ಶಿವಕುಮಾರ ಸ್ವಾಮೀಜಿ ನಿಧನದ ಕಾರಣಕ್ಕೆ ರಾಜ್ಯ ಸರಕಾರ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮೂರು ದಿನಗಳ ಶೋಕ ಆಚರಿಸುತ್ತಿದೆ. ಆದರೆ, ಚಿತ್ರದುರ್ಗದ ಸಾಣೇಹಳ್ಳಿ ಮಠ ಪೂರ್ವ ನಿಗದಿಯಾಗಿದ್ದ ಶರಣರ ನಾಟಕವನ್ನು ರದ್ದುಗೊಳಿಸದಿರಲು ನಿರ್ಧರಿಸಿದೆ.

“ಹೊಳಲ್ಕೆರೆಯಲ್ಲಿ ಇಂದು ನಡೆಯಬೇಕಿದ್ದ ಶಿವಸಂಚಾರ ತಂಡದ ‘ಅಕ್ಕ ನಾಗಲಾಂಬಿಕೆ’ ನಾಟಕ ಪ್ರದರ್ಶನವನ್ನು ರದ್ದು ಮಾಡಿಲ್ಲ. ಇದೂ ಶರಣರ ಕುರಿತ ನಾಟಕವಾಗಿರುವುದರಿಂದ ನಾಟಕದ ಆರಂಭದಲ್ಲಿ ಸ್ವಾಮೀಜಿಗೆ ಸಂತಾಪ ಸೂಚಿಸಿ ನಾಟಕ ನಡೆಸಲು ನಿರ್ಧರಿಸಲಾಗಿದೆ” ಎಂದು ಮಠದ ಆಡಳಿತ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.