samachara
www.samachara.com
ರೂ. 22,00,00,00,000 = ಭಾರತದ ಈ 9 ಜನರ ದಿನದ ದುಡಿಮೆಯ ಒಟ್ಟು ಮೊತ್ತ
ಸುದ್ದಿ ಸಾರ

ರೂ. 22,00,00,00,000 = ಭಾರತದ ಈ 9 ಜನರ ದಿನದ ದುಡಿಮೆಯ ಒಟ್ಟು ಮೊತ್ತ

2018ರಲ್ಲಿ ಕೋಟ್ಯಧಿಪತಿಗಳ ಆಸ್ತಿಯಲ್ಲಿ ಶೇಕಡಾ 39 ಏರಿಕೆಯಾಗಿದ್ದರೆ, ತಳಮಟ್ಟದಲ್ಲಿರುವ ಶೇಕಡಾ 50ರಷ್ಟು ಜನರ ಆದಾಯದಲ್ಲಿ ಕೇವಲ ಶೇಕಡಾ 3ರಷ್ಟು ಏರಿಕೆಯಾಗಿದೆ.

Team Samachara

ದೇಶದಲ್ಲಿ ಅತಿ ಸಣ್ಣ ಪ್ರಮಾಣದಲ್ಲಿರುವವರು ಕೋಟ್ಯಧಿಪತಿಗಳು. ಆದರೆ 2018ರಲ್ಲಿ ಇವರು ಸಂಪಾದಿಸಿರುವ ಆಸ್ತಿ ಮಾತ್ರ ಬೆಚ್ಚಿ ಬೀಳಿಸುವಂತಿದೆ. ಭಾರತದ ಜನಸಂಖ್ಯೆಯ ಶೇಕಡಾ 1ರಷ್ಟಿರುವ ಇವರುಗಳು 2018ರಲ್ಲಿ ಪ್ರತಿದಿನ 2,200 ಕೋಟಿ ರೂಪಾಯಿಗಳಂತೆ ಆದಾಯ ಸಂಪಾದಿಸಿದ್ದಾರೆ ಎಂದು ಆಕ್ಸ್‌ಫಾಮ್ ಹೇಳಿದೆ.

2018ರಲ್ಲಿ ಕೋಟ್ಯಧಿಪತಿಗಳ ಆಸ್ತಿಯಲ್ಲಿ ಶೇಕಡಾ 39 ಏರಿಕೆಯಾಗಿದ್ದರೆ, ತಳಮಟ್ಟದಲ್ಲಿರುವ ಶೇಕಡಾ 50ರಷ್ಟು ಜನರ ಆದಾಯದಲ್ಲಿ ಕೇವಲ ಶೇಕಡಾ 3ರಷ್ಟು ಏರಿಕೆಯಾಗಿದೆ. ಇದು ಭಾರತವೊಂದರ ಕಥೆಯಲ್ಲ. ಜಗತ್ತಿನಾದ್ಯಂತ ಇದೇ ಪರಿಸ್ಥಿತಿ ಇದೆ.

ಜಾಗತಿಕ ಮಟ್ಟದಲ್ಲಿ ಕೋಟ್ಯಧಿಪತಿಗಳ ಆಸ್ತಿ ಶೇಕಡಾ 12ರಷ್ಟು ಏರಿಕೆಯಾಗಿದ್ದರೆ, ಬಡವರ ಆದಾಯದಲ್ಲಿ ಶೇಕಡಾ 11ರಷ್ಟು ಇಳಿಕೆಯಾಗಿದೆ. ಭಾರತದಲ್ಲಿರುವ ಶೇಕಡಾ 10ರಷ್ಟು ಅಂದರೆ ಸುಮಾರು 13.6 ಕೋಟಿ ಬಡವರು ಕಳೆದ 15 ವರ್ಷಗಳಿಂದ ಸಾಲದಲ್ಲೇ ಇದ್ದಾರೆ ಎಂಬುದನ್ನೂ ಇದು ಹೇಳುತ್ತಿದೆ.

“ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ನಡುವೆ ಏರಿಕೆಯಾಗುತ್ತಿರುವ ಈ ಅಸಮಾನತೆಯ ಅಂತರ ನೈತಿಕವಾಗಿ ಅತಿರೇಕದ್ದು.” ಎಂದು ಆಕ್ಸ್‌ಫಾಮ್‌ ಇಂಟರ್‌ನ್ಯಾಷನಲ್‌ ವ್ಯವಸ್ಥಾಪಕ ನಿರ್ದೇಶಕಿ ವಿನ್ನಿ ಬ್ಯಾನ್ಯಿಮಾ ತಿಳಿಸಿದ್ದಾರೆ. ಮಾತ್ರವಲ್ಲ, “ಇದು ಸಾಮಾಜಿಕ ಮತ್ತು ದೇಶದ ಗಣತಂತ್ರ ವ್ಯವಸ್ಥೆ ಕುಸಿದಿರುವುದರ ದ್ಯೋತಕ.” ಎಂದು ಅವರು ಹೇಳಿದ್ದಾರೆ.

ವಿಶ್ವದ ಅರ್ಧದಷ್ಟು ಅಂದರೆ 380 ಕೋಟಿ ಜನರ ಬಳಿಯಲ್ಲಿರುವಷ್ಟು ಸಂಪತ್ತು ಕೇವಲ 26 ಜನರ ಬಳಿಯಲ್ಲಿದೆ. ಕಳೆದೊಂದು ವರ್ಷದಲ್ಲಿ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಆಸ್ತಿಯಲ್ಲಿ 112 ಬಿಲಯನ್‌ ಡಾಲರ್‌ ಏರಿಕೆ ಕಂಡಿದ್ದು, ಈತನ ಸಂಪತ್ತಿನ ಶೇಕಡಾ 1 ಭಾಗ 1.15 ಕೋಟಿ ಜನರಿರುವ ಇಥಿಯೋಪಿಯಾದಂಥ ದೇಶದ ಆರೋಗ್ಯ ಬಜೆಟ್‌ಗೆ ಸಮ ಎಂದು ಅವರು ತಿಳಿಸಿದ್ದಾರೆ.

ಶೇಕಡಾ 1ರಷ್ಟಿರುವ ಭಾರತದ ಶ್ರೀಮಂತರು ದೇಶದ ಶೇಕಡಾ 51.53ರಷ್ಟು ಆಸ್ತಿ ಹೊಂದಿದ್ದರೆ, ಶೇಕಡಾ 10ರಷ್ಟಿರುವ ಶ್ರೀಮಂತರು ಬರೋಬ್ಬರಿ ಶೇಕಡಾ 77.74ರಷ್ಟು ಆಸ್ತಿ ಹೊಂದಿದ್ದಾರೆ. ಇದಕ್ಕೆ ಪ್ರತಿಯಾಗಿ ತಳಮಟ್ಟದಲ್ಲಿರುವ ಶೇಕಡಾ 60ರಷ್ಟು ಜನರು ಕೇವಲ ಶೇಕಡಾ 4.8ರಷ್ಟು ಆಸ್ತಿಯ ಒಡೆಯರಾಗಿದ್ದಾರೆ.

ಭಾರತದ ಶ್ರೀಮಂತ 9 ಜನರಾದ ಮುಖೇಶ್‌ ಅಂಬಾನಿ, ಅಜೀಂ ಪ್ರೇಮ್‌ಜಿ, ಲಕ್ಷ್ಮೀ ಮಿತ್ತಲ್, ಹಿಂದೂಜಾ ಕುಟುಂಬ, ಪಲ್ಲೊಂಜಿ ಮಿಸ್ತ್ರಿ, ಶಿವ ನಡಾರ್, ಗೋದ್ರೆಜ್‌ ಕುಟುಂಬ, ದಿಲೀಪ್‌ ಸಾಂಘ್ವಿ ಮತ್ತು ಕುಮಾರ್‌ ಮಂಗಲಂ ಬಿರ್ಲಾ ಅವರುಗಳ ಆಸ್ತಿ ತಳಮಟ್ಟದಲ್ಲಿರುವ ಶೇಕಡಾ 50ರಷ್ಟು ಬಡ ಜನರ ಆಸ್ತಿಗೆ ಸಮ ಎಂದು ವರದಿ ವಿವರಿಸಿದೆ. "ಸರಕಾರಗಳು ಸಾರ್ವಜನಿಕ ಸೇವೆಗಳಾದ ಶಿಕ್ಷಣ, ಆರೋಗ್ಯಕ್ಕೆ ಕನಿಷ್ಠ ಹಣವನ್ನು ಮೀಸಲಿಡುವ ಮೂಲಕ ಹೇಗೆ ಅಸಮಾನತೆಗೆ ಕಾರಣವಾಗಿವೆ ಎಂಬುದನ್ನು ವರದಿ ವಿವರಿಸುತ್ತದೆ. ಇನ್ನೊಂದು ಕಡೆ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿಲ್ಲ ಎಂಬುದನ್ನೂ ಇದು ತಿಳಿಸುತ್ತದೆ," ಎಂದು ಆಕ್ಸ್‌ಫಾಮ್‌ ಭಾರತದ ಸಿಇಒ ಅಮಿತಾಬ್‌ ಬೆಹರ್‌ ಹೇಳಿದ್ದಾರೆ.

ಒಂದೊಮ್ಮೆ ಭಾರತದಲ್ಲಿರುವ ಶೇಕಡಾ 1ರಷ್ಟು ಶ್ರೀಮಂತರ ಮೇಲೆ ಶೇಕಡಾ 0.5ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿದ್ದೇ ಆದಲ್ಲಿ ಸರಕಾರದ ಆರೋಗ್ಯ ಸೇವೆಗಳ ಹೂಡಿಕೆಯನ್ನು ಶೇಕಡಾ 50ರಷ್ಟು ಏರಿಕೆ ಮಾಡಬಹುದು. ರಾಜ್ಯ ಮತ್ತು ಕೇಂದ್ರ ಸರಕಾರ ವೈದ್ಯಕೀಯ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ, ಕುಡಿಯುವ ನೀರು ಸರಬರಾಜಿಗೆ ವ್ಯಯ ಮಾಡುತ್ತಿರುವ ಹಣ ಕೇವಲ 2.08 ಲಕ್ಷ ಕೋಟಿ ರೂಪಾಯಿ ಆಗಿದ್ದು ಇದು ಭಾರತದ ಅತಿ ಶ್ರೀಮಂತ ವ್ಯಕ್ತಿ ಮುಖೇಶ್‌ ಅಂಬಾನಿಯ ಆಸ್ತಿ (2.8 ಲಕ್ಷ ಕೋಟಿ ರೂಪಾಯಿ) ಗಿಂತಲೂ ಕಡಿಮೆ ಮೊತ್ತ.

ಕ್ರೆಡಿಟ್‌ ಸೂಸ್ಸೆ ವೆಲ್ತ್ ಡಾಟಾ ಬುಕ್‌ ಮತ್ತು ಫೋರ್ಬ್ಸ್‌ ಬಿಲಿಯನೇರ್‌ ಪಟ್ಟಿ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.