samachara
www.samachara.com
ಸಂತಾಪ ಸಾಗರಕ್ಕೆ ಸಾಕ್ಷಿಯಾದ ಸಿದ್ಧಗಂಗೆ; ಶತಾಯುಷಿ ನಾಳೆ ಮಣ್ಣಿಗೆ
ಸುದ್ದಿ ಸಾರ

ಸಂತಾಪ ಸಾಗರಕ್ಕೆ ಸಾಕ್ಷಿಯಾದ ಸಿದ್ಧಗಂಗೆ; ಶತಾಯುಷಿ ನಾಳೆ ಮಣ್ಣಿಗೆ

ಮಠದ ಶಾಲೆಯ ವಿದ್ಯಾರ್ಥಿಗಳು ಸ್ವಾಮೀಜಿಯ ಅಗಲಿಕೆಗೆ ಕಣ್ಣೀರಾದರು. ಹಲವು ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತರು.

Team Samachara

ತುಮಕೂರಿನ ಸಿದ್ಧಗಂಗಾ ಮಠದ ಆವರಣ ಮಠದ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಮಠದ ಭಕ್ತಸಾಗರದಿಂದ ತುಂಬಿ ಹೋಗಿದೆ. ಮಧ್ಯಾಹ್ನ ಶಿವಕುಮಾರ ಸ್ವಾಮೀಜಿ ನಿಧನರಾಗಿರುವ ಸುದ್ದಿ ಖಚಿತವಾಗುತ್ತಿದ್ದಂತೆ ಮಠದ ಆವರಣಕ್ಕೆ ಹರಿದು ಬಂದ ವಿದ್ಯಾರ್ಥಿಗಳು ಹಾಗೂ ಭಕ್ತರು ಸ್ವಾಮೀಜಿಗೆ ಕಣ್ಣೀರಿನ ಅಂತಿಮ ನಮನ ಸಲ್ಲಿಸಿದರು.

ಹಳೇ ಮಠದಿಂದ ಸ್ವಾಮೀಜಿ ಪಾರ್ಥಿಕ ಶರೀರವನ್ನು ಮಠದ ಆವರಣದಲ್ಲಿರುವ ವಜ್ರಮಹೋತ್ಸವ ಭವನದ ಹೊರಾಂಗಣದ ವೇದಿಕೆಗೆ ಮೆರವಣಿಗೆ ಮೂಲಕ ತರಲಾಯಿತು. ಈ ಮಠದ ಶಾಲೆಯ ವಿದ್ಯಾರ್ಥಿಗಳು ಸ್ವಾಮೀಜಿಯ ಅಗಲಿಕೆಗೆ ಕಣ್ಣೀರಾದರು. ಹಲವು ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತರು. ಮಠದ ವಿದ್ಯಾರ್ಥಿಗಳ ಅಳು ಹಾಗೂ ಭಕ್ತರ ಜಯ ಘೋಷಗಳೊಡನೆ ಸ್ವಾಮೀಜಿ ಪಾರ್ಥಿವ ಶರೀರವನ್ನು ವೇದಿಕೆಗೆ ತಂದು ಹವಾನಿಯಂತ್ರಿತ ಗಾಜಿನ ಬಾಕ್ಸ್‌ಗೆ ಇಡಲಾಯಿತು.

ರಾಜ್ಯಪಾಲ ವಜೂಬಾಯ್‌ ವಾಲಾ ಸ್ವಾಮೀಜಿಯ ಅಂತಿಮ ದರ್ಶನ ಪಡೆದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್‌, ಗೃಹ ಸಚಿವ ಎಂ.ಬಿ. ಪಾಟೀಲ್‌, ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ರಾಜಕಾರಣಿಗಳ ದಂಡು ಸ್ವಾಮೀಜಿ ಪಾರ್ಥಿವ ಶರೀರದ ಬಳಿಯೇ ಬೀಡುಬಿಟ್ಟಿದೆ.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವು ಮಠಗಳ ಸ್ವಾಮೀಜಿಗಳು ಸಿದ್ಧಗಂಗೆಯಲ್ಲಿ ಸೇರಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಯವರೆಗೂ ವೇದಿಕೆಯಲ್ಲೇ ಸಾರ್ವಜನಿಕರ ದರ್ಶನಕ್ಕಾಗಿ ಪಾರ್ಥಿವ ಶರೀರ ಇಡಲಾಗಿದೆ.

ನಾಳೆ ಸಂಜೆ 4.30ಕ್ಕೆ ಮಠದ ಆವರಣದಲ್ಲಿ ಸ್ವಾಮೀಜಿ ಅಂತ್ಯಕ್ರಿಯೆ ನಡೆಯಲಿದೆ. ಉದ್ಧಾನ ಶಿವಯೋಗಿಗಳ ಗದ್ದುಗೆಯ ಪಕ್ಕದಲ್ಲೇ ಸ್ವಾಮೀಜಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಠದ ಆವರಣಕ್ಕೆ ಬರುವ ಮಾರ್ಗಗಳಲ್ಲಿ ಬ್ಯಾರಿಕೇಡ್‌ ಲೈನ್‌ ಹಾಕಲಾಗಿದ್ದು, ಅಂತಿಮ ದರ್ಶನಕ್ಕಾಗಿ ಬರುವವರು ಸರದಿ ಸಾಲಿನಲ್ಲಿ ಸಾಗುವಂತೆ ವ್ಯವಸ್ಥೆ ಮಾಡಲಾಗಿದೆ. ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಕ್ಯಾತ್ಸಂದ್ರದ ಸಿದ್ಧಗಂಗಾ ಮಠಕ್ಕೆ ಬರುತ್ತಿದ್ದಾರೆ.

ತುಮಕೂರಿನ ಮುಖ್ಯ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಎಪಿಎಂಪಿ, ಜೂನಿಯರ್‌ ಕಾಲೇಜಿನಿಂದ ಕ್ಯಾತ್ಸಂದ್ರಕ್ಕೆ 100ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಿಡಲಾಗಿದೆ. ಬೇರೆ ಬೇರೆ ನಗರಗಳಿಂದ ತುಮಕೂರಿಗೆ ಸಂಚರಿಸುವ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ.

ಚಿತ್ರಕೃಪೆ: ಪ್ರಜಾವಾಣಿ