samachara
www.samachara.com
ಟ್ರೇಡ್‌ ವಾರ್‌ಗೆ ನೆಲಕಚ್ಚಿದ ಡ್ರ್ಯಾಗನ್‌, 28 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಚೀನಾ ಜಿಡಿಪಿ
ಸುದ್ದಿ ಸಾರ

ಟ್ರೇಡ್‌ ವಾರ್‌ಗೆ ನೆಲಕಚ್ಚಿದ ಡ್ರ್ಯಾಗನ್‌, 28 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಚೀನಾ ಜಿಡಿಪಿ

ಜಿಡಿಪಿ ಕುಸಿತವಾಗಿರುವ ಈ ಹೊತ್ತಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವುದರ ಜತೆ ಜತೆಗೇ ಸಾಲದ ಮಟ್ಟ ಕೈ ಮೀರಿ ಹೋಗದಂತೆಯೂ ಚೀನಾ ಎಚ್ಚರಿಕೆ ವಹಿಸಬೇಕು ಎಂದು ಅರ್ಥಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ.

Team Samachara

ವಿಶ್ವದ ಎರಡು ಬೃಹತ್‌ ಆರ್ಥಿಕ ಶಕ್ತಿಗಳಾದ ಅಮೆರಿಕಾ ಮತ್ತು ಚೀನಾ ಪರಸ್ಪರ ಕಚ್ಚಾಡಿಕೊಂಡಿದ್ದರ ಪರಿಣಾಮ ಈಗ ಕಾಣಿಸಿಕೊಂಡಿದೆ. ನಾಗಾಲೋಟದಲ್ಲಿ ಮುಂದುವರಿಯುತ್ತಿದ್ದ ಚೀನಾದ ಅಭಿವೃದ್ಧಿಗೆ ಎರಡು ದೇಶಗಳ ನಡುವಿನ ಟ್ರೇಡ್‌ ವಾರ್‌ ಮಗ್ಗಲು ಮುಳ್ಳಾಗಿದೆ. ಇದರಿಂದಾಗಿ ಕಳೆದ 28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದ ನಿವ್ವಳ ಉತ್ಪನ್ನ ದರ ಶೇಕಡಾ 6.6ಕ್ಕೆ ಕುಸಿದಿದೆ. 1990ರ ನಂತರ ಚೀನಾದ ಆರ್ಥಿಕತೆ ಈ ಮಟ್ಟಕ್ಕೆ ಕುಸಿತವಾಗಿರುವುದು ಇದೇ ಮೊದಲು.

ಹಲವು ಆರ್ಥಿಕ ಮುನ್ಸೂಚನೆ ಮಾಹಿತಿಗಳ ಜತೆ ಈ ಮಾಹಿತಿಯನ್ನು ಚೀನಾ ಸೋಮವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದರಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ ದೊಡ್ಡ ಮಟ್ಟಕ್ಕೆ ಆರ್ಥಿಕ ಚಟುವಟಿಕಗಳು ಕುಸಿತವಾಗಿರುವುದು ತಿಳಿದು ಬಂದಿದೆ. ಇದೇ ಅವಧಿಯಲ್ಲಿ ಚೀನಾ ಮತ್ತು ಅಮೆರಿಕಾ ವ್ಯಾಪಾರ ಯುದ್ಧದಲ್ಲಿ ತೊಡಗಿದ್ದವು ಎಂಬುದು ಗಮನಾರ್ಹ.

ಇದೇ ವೇಳೆ ಚೀನಾದ ನೀತಿಗಳಿಂದಾಗಿ ಅಮೆರಿಕಾದ ಐಫೋನ್‌ ತಯಾರಿಕಾ ಸಂಸ್ಥೆ ಆಪಲ್‌ ಮತ್ತು ಯುರೋಪ್‌ನ ಕಾರ್‌ ಉತ್ಪಾದಕರು, ಆಸ್ಟ್ರೇಲಿಯಾದ ಖನಿಜ ರಫ್ತುದಾರರ ಮೇಲೂ ಪರಿಣಾಮ ಬೀರಿದೆ.

ಜಿಡಿಪಿ ಕುಸಿತವಾಗಿರುವ ಈ ಹೊತ್ತಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವುದರ ಜತೆ ಜತೆಗೇ ಸಾಲದ ಮಟ್ಟ ಕೈ ಮೀರಿ ಹೋಗದಂತೆಯೂ ಚೀನಾ ಎಚ್ಚರಿಕೆ ವಹಿಸಬೇಕು ಎಂದು ಅರ್ಥಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ.

“ಅಮೆರಿಕಾ-ಚೀನಾ ಟ್ರೇಡ್‌ ವಾರ್‌ ಮತ್ತು ತಂತ್ರಜ್ಞಾನ ವಲಯದ ಕುಸಿತದ ಸಾಧನೆಯ ಹಿನ್ನೆಲೆಯಲ್ಲಿ ಜಿಡಿಪಿ ಶೇಕಡಾ 6.8ಕ್ಕೆ ಕುಸಿತವಾಗಿರುವುದು ನಿರಾಶಾದಾಯಕ ಮತ್ತು ಹೆಚ್ಚು ಚಿಂತೆಯನ್ನುಂಟು ಮಾಡಿದೆ,” ಎಂದು ಮಿಝುಹೋ ಬ್ಯಾಂಕ್‌ನ ಏಷ್ಯಾ ವಿಭಾಗದ ಆರ್ಥಿಕತೆ ಮತ್ತು ತಂತ್ರಗಾರಿಕೆ ವಿಭಾಗದ ಮುಖ್ಯಸ್ಥ ವಿಷ್ಣು ವರಥನ್‌ ಅಲ್‌ಜಝೀರಾಗೆ ಪ್ರತಿಕ್ರಿಯೆ ನೀಡಿದ್ದಾರೆ.

ಆದರೆ ಈ ಕುಸಿತದ ನಡುವೆಯೂ ಚೀನಾದ ಮಟ್ಟಿಗೆ ಒಂದಷ್ಟು ಆಶಾದಾಯಕ ಬೆಳವಣಿಗೆಗಳೂ ನಡೆದಿವೆ. ವಿಶ್ವದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೀನಾದ ಕೈಗಾರಿಕೆಗಳು ಶೇಕಡಾ 5.3ರ ಬೆಳವಣಿಗೆಯ ನಿರೀಕ್ಷೆಯನ್ನು ಮೀರಿ ಶೇಕಡಾ 5.7ರಷ್ಟು ಅಭಿವೃದ್ಧಿ ದಾಖಲಿಸಿವೆ. ಚಿಲ್ಲರೆ ಮಾರಾಟ ಕ್ಷೇತ್ರವೂ ನಿರೀಕ್ಷೆಗೂ ಮೀರಿ ಶೇಕಡಾ 8.2 ಅಭಿವೃದ್ಧಿ ದರವನ್ನು ದಾಖಲಿಸಿದೆ.

ಈ ಹಿಂದೆ ಅಮೆರಿಕಾ ಚೀನಾದ 250 ಬಿಲಿಯನ್‌ ಡಾಲರ್‌ ಮೌಲ್ಯದ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿತ್ತು. ಇದು ಚೀನಾದ ಅಭಿವೃದ್ಧಿ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿತ್ತು. ಇದೀಗ ಇದೇ ಜನವರಿ 30ರಂದು ಎರಡೂ ದೇಶಗಳು ವಾಷಿಂಗ್ಟನ್‌ನಲ್ಲಿ ಮತ್ತೆ ಸಭೆ ಸೇರಲಿದ್ದು ಇದರಲ್ಲಿ ಅಮೆರಿಕಾ ಮತ್ತು ಚೀನಾ ನಡುವಿನ ವ್ಯಾಪಾರ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ ಇದೆ.