samachara
www.samachara.com
ಮಾಯಾವತಿ ಸ್ತ್ರೀಕುಲಕ್ಕೆ ಕಪ್ಪು ಚುಕ್ಕೆ ಎಂದ ಬಿಜೆಪಿ ಶಾಸಕಿ ಸಾಧನಾ ಸಿಂಗ್
ಸುದ್ದಿ ಸಾರ

ಮಾಯಾವತಿ ಸ್ತ್ರೀಕುಲಕ್ಕೆ ಕಪ್ಪು ಚುಕ್ಕೆ ಎಂದ ಬಿಜೆಪಿ ಶಾಸಕಿ ಸಾಧನಾ ಸಿಂಗ್

ಕೆಲೋಕಸಭಾ ಚುನಾವಣೆಗಾಗಿ ಎಸ್‌ಪಿ-ಬಿಎಸ್‌ಪಿ ಪಕ್ಷಗಳು ಈಗ ಒಂದಾಗಿರುವುದರಿಂದ ಬಿಜೆಪಿ ಮಾಯಾವತಿ ಅವರನ್ನು ಗುರಿಯಾಗಿಸಿಕೊಂಡು ಟೀಕೆಗೆ ಇಳಿದಿದೆ.

Team Samachara

"ಅಧಿಕಾರಕ್ಕಾಗಿ ತನ್ನ ಘನತೆಯನ್ನೇ ಮಾರಿಕೊಂಡಿರುವ ಬಿಎಸ್‌ಪಿ ನಾಯಕಿ ಮಾಯಾವತಿ ಸ್ತ್ರೀಕುಲಕ್ಕೇ ಕಪ್ಪು ಚುಕ್ಕೆ ಇದ್ದಂತೆ" ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕಿ ಸಾಧನಾ ಸಿಂಗ್‌ ಹೇಳಿರುವ ಮಾತಿಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಹೇಳಿಕೆಗೆ ವಿವರಣೆ ಕೇಳಿ ಮಹಿಳಾ ಆಯೋಗ ಸಾಧನಾ ಸಿಂಗ್‌ ಅವರಿಗೆ ನೋಟಿಸ್‌ ನೀಡಲು ಮುಂದಾಗಿದೆ. “ರಾಜಕೀಯ ಮುಖಂಡರು ಇಂಥ ಹೇಳಿಕೆ ನೀಡುವುದು ಖಂಡನೀಯ. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ವಿವರಣೆ ಕೇಳಿ ಸೋಮವಾರ ಸಾಧನಾ ಸಿಂಗ್‌ ಅವರಿಗೆ ನೋಟಿಸ್‌ ಕಳಿಸಲಾಗುವುದು” ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.

"ಮಾಯಾವತಿ ಅಧಿಕಾರಕ್ಕಾಗಿ ಸ್ತೀಕುಲದ ಘನತೆಯನ್ನೇ ಮಾರಾಟಕ್ಕಿಟ್ಟಿದ್ದಾರೆ. ಆತ್ಮಗೌರವದ ಪರಿಜ್ಞಾನವಿಲ್ಲದ ಮಾಯಾವತಿ ತಮ್ಮ ಮೇಲೆ ನಡೆದ ದೌರ್ಜನ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳದೆ ಅಧಿಕಾರಕ್ಕಾಗಿ ಎಲ್ಲಕ್ಕೂ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಶನಿವಾರ ನಡೆದ ಸಮಾವೇಶದಲ್ಲಿ ಸಾಧನಾ ಹೇಳಿದ್ದರು.

"ದ್ರೌಪದಿ ಪ್ರತೀಕಾರ ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದ್ದಳು. ಆದರೆ, ಮಾಯಾವತಿ ಅಧಿಕಾರಕ್ಕಾಗಿ ತನ್ನ ಘನತೆಯನ್ನು ಮಾರಿಕೊಂಡಿದ್ದಾರೆ. ಮಾಯಾವತಿ ಅವರ ಈ ನಡೆಯನ್ನು ನಾವು ಖಂಡಿಸುತ್ತೇವೆ. ಅಧಿಕಾರಕ್ಕಾಗಿ ಅವರು ತಮ್ಮ ಮೇಲೆ ನಡೆದ ದೌರ್ಜನ್ಯವನ್ನೇ ಮರೆತಿದ್ದಾರೆ" ಎಂದಿದ್ದರು ಸಾಧನಾ.

ಸಮಾಜವಾದಿ ಪಕ್ಷದ ಕಾರ್ಯಕರ್ತರು ಲಖನೌನ ಅತಿಥಿಗೃಹದಲ್ಲಿದ್ದ ಮಾಯಾವತಿ ಅವರ ಮೇಲೆ 1995ರಲ್ಲಿ ಹಲ್ಲೆ ನಡೆಸಿದ್ದರು. ಈ ಘಟನೆಯು ಎಸ್‌ಪಿ–ಬಿಎಸ್‌ಪಿ ಪಕ್ಷಗಳ ನಡುವೆ ಸುಮಾರು ಎರಡು ದಶಕ ಕಾಲ ಹಗೆಗೆ ಕಾರಣವಾಗಿತ್ತು. ಲೋಕಸಭಾ ಚುನಾವಣೆಗಾಗಿ ಎಸ್‌ಪಿ-ಬಿಎಸ್‌ಪಿ ಪಕ್ಷಗಳು ಈಗ ಒಂದಾಗಿರುವುದರಿಂದ ಬಿಜೆಪಿ ಮಾಯಾವತಿ ಅವರನ್ನು ಗುರಿಯಾಗಿಸಿಕೊಂಡು ಟೀಕೆಗೆ ಇಳಿದಿದೆ.

ಸಾಧನಾ ಹೇಳಿಕೆಯನ್ನು ವಿರೋಧಿಸಿರುವ ಬಿಎಸ್‌ಪಿ ಮುಖಂಡ ಸತೀಶ್‌ಚಂದ್ರ ಮಿಶ್ರ, "ಎಸ್‌ಪಿ–ಬಿಎಸ್‌ಪಿ ಮೈತ್ರಿಯನ್ನು ಬಿಜೆಪಿ ನಾಯಕರು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಧನಾ ಅವರ ಈ ಕೀಳುಮಟ್ಟದ ಹೇಳಿಕೆಯೇ ಇದಕ್ಕೆ ಸಾಕ್ಷಿ. ಸಾಧನಾ ಭಾಷೆ ಅವರ ಮನಃಸ್ಥಿತಿಯನ್ನು ತೋರುತ್ತದೆ" ಎಂದಿದ್ದಾರೆ.

ಬಿಜೆಪಿ ಶಾಸಕಿಯ ಹೇಳಿಕೆಯನ್ನು ಖಂಡಿಸಿರುವ ಎಸ್‌ಪಿ ನಾಯಕ ಅಖಿಲೇಶ್ ಯಾದವ್, "ಮಾಯಾವತಿ ಅವರನ್ನು ಅಪಮಾನಿಸಿದರೆ ಅದು ನನಗೆ ಮಾಡಿದ ಅಪಮಾನ. ದೇಶದ ಮಹಿಳೆಯರ ಘನತೆಗೆ ಧಕ್ಕೆ ತರುವಂಥ ಮಾತನಾಡಿದ್ದಾರೆ ಸಾಧನಾ. ಎಸ್‌ಪಿ-ಬಿಎಸ್‌ಪಿ ಮೈತ್ರಿ ಬಿಜೆಪಿಗೆ ಎಷ್ಟರ ಮಟ್ಟಿಗೆ ಸೋಲಿನ ಭೀತಿಯನ್ನು ತಂದೊಡ್ಡಿದೆ ಎಂಬುದನ್ನು ಅವರ ಮಾತುಗಳೇ ಸ್ಪಷ್ಟಪಡಿಸುತ್ತಿವೆ" ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಕೂಡಾ ಬಿಜೆಪಿ ಶಾಸಕಿಯ ಹೇಳಿಕೆಯನ್ನು ಖಂಡಿಸಿದೆ. ಆಡಳಿತ ಪಕ್ಷದ ಶಾಸಕಿಯಾಗಿರುವ ಸಾಧನಾ ಹೇಳಿಕೆ ಕೀಳು ಅಭಿರುಚಿಯಿಂದ ಕೂಡಿದ್ದು ಎಂದು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ ತಿಳಿಸಿದ್ದಾರೆ.