samachara
www.samachara.com
ರೆಸಾರ್ಟ್‌ ರಾಜಕೀಯ ನಾಟಕದಲ್ಲಿ ಸ್ಟಂಟ್; ಗಣಿನಾಡ ‘ಜನಸೇವಕ’ರ ಮಾರಾಮಾರಿ?
ಸುದ್ದಿ ಸಾರ

ರೆಸಾರ್ಟ್‌ ರಾಜಕೀಯ ನಾಟಕದಲ್ಲಿ ಸ್ಟಂಟ್; ಗಣಿನಾಡ ‘ಜನಸೇವಕ’ರ ಮಾರಾಮಾರಿ?

ಬಳ್ಳಾರಿ ಜಿಲ್ಲೆಯ ಕಾಂಗ್ರಸ್‌ ಶಾಸಕರ ಮಾರಾಮಾರಿ ರೆಸಾರ್ಟ್‌ ರಾಜಕೀಯ ನಾಟಕ ರಂಗೇರುವಂತೆ ಮಾಡಿದೆ.

Team Samachara

ರೆಸಾರ್ಟ್‌ ರಾಜಕೀಯ ನಾಟಕ ನೋಡುತ್ತಿರುವ ರಾಜ್ಯದ ಜನತೆಗೆ ಕಾಂಗ್ರೆಸ್‌ ಶಾಸಕರು ಮತ್ತಷ್ಟು ಮನರಂಜನೆ ನೀಡುತ್ತಿದ್ದಾರೆ! ರಾಜಕೀಯ ನಾಟಕದ ರೆಸಾರ್ಟ್‌ ಅಂಕದಲ್ಲಿ ಗಣಿನಾಡಿನ ಶಾಸಕರು ಮಾರಾಮಾರಿ ನಡೆಸುವ ಮೂಲಕ ರೋಚಕ ಸನ್ನಿವೇಶಗಳನ್ನು ಸೃಷ್ಟಿಸುತ್ತಿದ್ದಾರೆ.

ರೆಸಾರ್ಟ್‌ ಸೇರಿ ಲಜ್ಜೆಗೆಟ್ಟ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್‌ ಶಾಸಕರು ಪರಸ್ಪರ ಹಲ್ಲೆ ನಡೆಸಿಕೊಂಡಿರುವುದಾಗಿ ವರದಿಯಾಗಿದೆ. ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಬಳ್ಳಾರಿ ಶಾಸಕರಾದ ಆನಂದ್‌ ಸಿಂಗ್, ಭೀಮನಾಯ್ಕ ಹಾಗೂ ಜೆ.ಎನ್. ಗಣೇಶ್ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಶನಿವಾರ ತಡರಾತ್ರಿ ಗುಂಡಿನ ಮತ್ತಿನಲ್ಲಿದ್ದ ಶಾಸಕರು ಗಣಿ ವಿಚಾರವಾಗಿ ಮಾತಿಗೆ ಮಾತು ಬೆಳೆಸಿ ಗಾಜಿನ ಬಾಟಲ್‌ಗಳಿಂದ ಬಡಿದಾಡಿಕೊಂಡಿದ್ದಾರೆ. ಆನಂದ್‌ಸಿಂಗ್‌ ಮೇಲೆ ಬಾಟಲಿಯಿಂದ ಹೊಡೆಯಲಾಗಿದೆ ಎನ್ನಲಾಗಿದೆ. ಆದರೆ, ಘಟನೆ ನಡೆದಿರುವುದನ್ನು ಕಾಂಗ್ರೆಸ್‌ ನಾಯಕರು ಖಚಿತ ಪಡಿಸುವ ಲಕ್ಷಣಗಳು ಕಾಣುತ್ತಿಲ್ಲ!

Also read: ‘ಎಲ್ಲೂ ನೈತಿಕತೆ ಇಲ್ಲ’; ಆಹಾ, ರಾಜಕೀಯದಲ್ಲಿ ಲಜ್ಜೆಗೆಟ್ಟವರ ಸೊಬಗ ನೋಡಾ!

ಶನಿವಾರ ವಿಧಾನಸೌಧದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ಮಿನರಲ್ ಫಂಡ್ ಕುರಿತ ಸಭೆಯಲ್ಲಿ ಈ ಶಾಸಕರು ಪಾಲ್ಗೊಂಡಿದ್ದರು. ರಾತ್ರಿ ರೆಸಾರ್ಟಿಗೆ ವಾಪಸ್ ಆಗಿದ್ದ ಈ ಶಾಸಕರು ಇದೇ ವಿಚಾರವಾಗಿ ಜಗಳವಾಡಿದ್ದಾರೆ. ಇದು ಮಾರಾಮಾರಿಗೆ ತಿರುಗಿದೆ ಎನ್ನಲಾಗಿದೆ.

ತನ್ನ ಶಾಸಕರನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳುವ ಅನಿವಾರ್ಯಕ್ಕೆ ಬಿದ್ದಿರುವ ಕಾಂಗ್ರೆಸ್‌ ರೆಸಾರ್ಟ್‌ ರಾಜಕೀಯಕ್ಕೆ ಶರಣು ಹೋಗಿದೆ. ಈ ಹಿಂದೆ ಶತ್ರು ಪಾಳಯದಲ್ಲಿದ್ದ ಬಳ್ಳಾರಿ ಶಾಸಕರು ಈಗ ಒಂದೇ ಪಕ್ಷದಲ್ಲಿದ್ದಾರೆ. ಹೀಗಾಗಿ ಹಳೆಯ ಸಿಟ್ಟಿನ ಕಾರಣಕ್ಕೆ ಮಾರಾಮಾರಿ ನಡೆದಿರಲೂಬಹುದು.

ತಾವು ಜನರಿಂದ ಆರಿಸಿಬಂದಿರುವ ಜನಪ್ರತಿನಿಧಿಗಳು, ಜನ ನಮಗೆ ಅಧಿಕಾರ ಕೊಟ್ಟಿರುವುದು ಅವರ ಸೇವೆ ಮಾಡಲು ಎಂಬುದನ್ನು ಎಂದೋ ಮರೆತಿರುವ ಶಾಸಕರು ಮಾರಾಮರಿ ನಡೆಸುವುದು ಆಶ್ಚರ್ಯದ ವಿಚಾರವೇನೂ ಅಲ್ಲ. ಆದರೆ, ಸರಕಾರ ಉರುಳಿಸುವ ಬಿಜೆಪಿ ತಂತ್ರದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್‌ ತನ್ನ ಶಾಸಕರನ್ನು ರೆಸಾರ್ಟ್‌ನಲ್ಲಿ ಗುಡ್ಡೆ ಹಾಕಿಕೊಂಡಿರ ಸಂದರ್ಭದಲ್ಲೂ ಈ 'ಜನಸೇವಕ'ರು ಮಾರಾಮಾರಿ ನಡೆಸುತ್ತಾರೆ ಎಂದರೆ ಇವರ ಹೊಣೆಗೇಡಿತನ ಎಂಥದ್ದು ಎಂಬುದು ಅರ್ಥವಾಗುತ್ತದೆ.