samachara
www.samachara.com
#ಡೀಸೆಲ್‌ಗೇಟ್‌ ಇಫೆಕ್ಸ್‌; ಸಂಜೆಯೊಳಗೆ 100 ಕೋಟಿ ದಂಡ ಕಟ್ಟಲು ಫೋಕ್ಸ್‌ವ್ಯಾಗನ್‌ಗೆ ಎನ್‌ಜಿಟಿ ಸೂಚನೆ
ಸುದ್ದಿ ಸಾರ

#ಡೀಸೆಲ್‌ಗೇಟ್‌ ಇಫೆಕ್ಸ್‌; ಸಂಜೆಯೊಳಗೆ 100 ಕೋಟಿ ದಂಡ ಕಟ್ಟಲು ಫೋಕ್ಸ್‌ವ್ಯಾಗನ್‌ಗೆ ಎನ್‌ಜಿಟಿ ಸೂಚನೆ

ದೋಷಪೂರಿತ ಕಾರುಗಳಿಂದ ಪರಿಸರದ ಮೇಲಾದ ದುಷ್ಪರಿಣಾಮದ ಪರಿಹಾರಕ್ಕಾಗಿ 100 ಕೋಟಿ ರೂಪಾಯಿ ಠೇವಣಿ ಇಡುವಂತೆ ಫೋಕ್ಸ್‌ವ್ಯಾಗನ್‌ ಕಂಪನಿಗೆ ಎನ್‌ಜಿಟಿ ನಿರ್ದೇಶನ ನೀಡಿದೆ.

Team Samachara

ಪರಿಸರಕ್ಕೆ ಹಾನಿ ಉಂಟು ಮಾಡಿದ ಕಾರಣಕ್ಕೆ ಜರ್ಮನ್ ಮೂಲದ ವಾಹನ ತಯಾರಿಕಾ ಸಂಸ್ಥೆ ಫೋಕ್ಸ್‌ವ್ಯಾಗನ್‌ಗೆ 100 ಕೋಟಿ ರೂಪಾಯಿ ದಂಡದ ಠೇವಣಿ ಇಡುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಸೂಚನೆ ನೀಡಿದೆ. ಶುಕ್ರವಾರ ಸಂಜೆ 5 ಗಂಟೆಯೊಳಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದಂಡದ ಠೇವಣಿ ಇಡುವಂತೆ ಎನ್‌ಜಿಟಿ ಆದೇಶಿಸಿದೆ.

ಫೋಕ್ಸ್‌ವ್ಯಾಗನ್‌ ಡೀಸೆಲ್ ಕಾರುಗಳಲ್ಲಿ ಬಳಸಿರುವ ದೋಷಪೂರಿತ ಸಾಧನಗಳಿಂದ ಮಾಲಿನ್ಯ ಹೆಚ್ಚಾಗಿ ಪರಿಸರಕ್ಕೆ ಹಾನಿಯಾಗಿರುವ ಬಗ್ಗೆ ಕಂಪೆನಿಗೆ ಚಾಟಿ ಬೀಸಿದ್ದ ಎನ್‌ಜಿಟಿ 2018ರ ನವೆಂಬರ್ 16ರಂದೇ ಮಾಲಿನ್ಯ ನಿಯಂತ್ರಣ ಮಂಡಳಿಗೆ 100 ಕೋಟಿ ರೂಪಾಯಿ ದಂಡ ಕಟ್ಟುವಂತೆ ಸೂಚಿಸಿತ್ತು.

ಆದರೆ, ಕಂಪನಿ ಈವರೆಗೂ ದಂಡ ಕಟ್ಟಿರಲಿಲ್ಲ. ಗುರುವಾರ ಮತ್ತೆ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ಅವರಿದ್ದ ನ್ಯಾಯಪೀಠವು ಶುಕ್ರವಾರ ಸಂಜೆ 5 ಗಂಟೆಯೊಳಗೆ ದಂಡ ಪಾವತಿಸುವಂತೆ ತಾಕೀತು ಮಾಡಿದೆ.

“ಈ ಪ್ರಕರಣದಲ್ಲಿ ಯಾವುದೇ ತಡೆಯಾಜ್ಞೆ ಇಲ್ಲದಿದ್ದರೂ ಕಂಪನಿ ನ್ಯಾಯಾಧಿಕರಣದ ಆದೇಶ ಪಾಲಿಸದಿರುವುದು ಏಕೆ? ದಂಡ ಪಾವತಿಸಲು ನಾವು ಮತ್ತೆ ಹೆಚ್ಚಿನ ಸಮಯಾವಕಾಶ ನೀಡಲು ಸಾಧ್ಯವಿಲ್ಲ” ಎಂದು ನ್ಯಾಯಪೀಠದ ಸದಸ್ಯ ನ್ಯಾಯಮೂರ್ತಿ ಎಸ್‌.ಪಿ. ವಾಂಗ್ಡಿ ಹೇಳಿದ್ದಾರೆ.

ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಫೋಕ್ಸ್‌ವ್ಯಾಗನ್ ದೋಷಪೂರಿತ ಡೀಸೆಲ್ ಕಾರುಗಳಿಂದ ನಿಗದಿತ ಮಾನದಂಡಕ್ಕಿಂತ 5 ರಿಂದ 9 ಪಟ್ಟು ಹೆಚ್ಚು ನೈಟ್ರಸ್ ಆಕ್ಸೈಡ್ (ಎನ್ಒಎಕ್ಸ್) ವಾತಾವರಣ ಸೇರುತ್ತಿದೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ತಜ್ಞರ ಸಮಿತಿ ಹೇಳಿತ್ತು. ಭಾರತದಲ್ಲಿ ಕಂಪನಿಯ 3.27 ಲಕ್ಷ ಕಾರುಗಳಲ್ಲಿ ದೋಷವಿರುವುದಾಗಿ ಸಮಿತಿ ತಿಳಿಸಿತ್ತು.

2015ರಲ್ಲಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ‘ಡೀಸೆಲ್ ಗೇಟ್’ ಹಗರಣದಲ್ಲಿ ಫೋಕ್ಸ್‌ವ್ಯಾಗನ್‌ ಡೀಸೆಲ್ ಕಾರುಗಳಲ್ಲಿ ದೋಷವಿರುವುದು ಪತ್ತೆಯಾಗಿತ್ತು. ಅಮೆರಿಕ ನಿಗದಿ ಮಾಡಿದ್ದ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಉಲ್ಲಂಘಿಸಿ ಕಂಪನಿ ಅಲ್ಲಿ ಡೀಸೆಲ್ ಕಾರುಗಳನ್ನು ಬಿಡುಗಡೆ ಮಾಡಿರುವುದು ಡೀಸೆಲ್ ಗೇಟ್ ಹಗರಣದಿಂದ ಬೆಳಕಿಗೆ ಬಂದಿತ್ತು.

ವಾಸ್ತವವಾಗಿ ಜಾಗತಿಕ ಮಾಲಿನ್ಯ ನಿಯಂತ್ರಣ ಮಾನದಂಡಕ್ಕಿಂತ 40 ಪಟ್ಟು ಹೆಚ್ಚಿನ ನೈಟ್ರಸ್ ಆಕ್ಸೈಡ್ ಅನ್ನು ಈ ಕಾರುಗಳು ಬಿಡುತ್ತಿದ್ದವು ಎಂಬುದು ಆ ವೇಳೆ ಪತ್ತೆಯಾಗಿತ್ತು. ಇದಕ್ಕೆ ದೋಷಪೂರಿತ ಸಾಫ್ಟ್‌ವೇರ್‌ ಕಾರಣ ಎನ್ನಲಾಗಿತ್ತು. ಇದಾದ ಬಳಿಕ ಭಾರತದಲ್ಲಿ ಮಾರಾಟವಾಗಿದ್ದ 3.24 ಲಕ್ಷದ ದೋಷಪೂರಿತ ಕಾರುಗಳನ್ನು ಕಂಪೆನಿ ವಾಪಸ್‌ ಪಡೆದಿತ್ತು.

ಫೋಕ್ಸ್‌ವ್ಯಾಗನ್‌ ಡೀಸೆಲ್ ಕಾರುಗಳಿಂದ 2016ರಲ್ಲಿ 48.678 ಟನ್ ನೈಟ್ರಸ್ ಆಕ್ಸೈಡ್ ಬಿಡುಗಡೆಯಾಗಿತ್ತು ಎಂದು ಎನ್‌ಜಿಟಿ ನೇಮಿಸಿದ್ದ ನಾಲ್ಕು ಮಂದಿ ತಜ್ಞರ ಸಮಿತಿ ಹೇಳಿತ್ತು. ದೆಹಲಿಯನ್ನು ಆಧಾರವಾಗಿಟ್ಟುಕೊಂಡು ಅಧ್ಯಯನ ನಡೆಸಿದ್ದ ತಜ್ಞರ ಸಮಿತಿಯು, “ಫೋಖ್ಸ್‌ವ್ಯಾಗನ್ ಡೀಸೆಲ್ ಕಾರುಗಳಿಂದಾದ ಮಾಲಿನ್ಯದಿಂದ ಆಗಿರುವ ಆರೋಗ್ಯ ಹಾನಿ ಅಂದಾಜು 171.34 ಕೋಟಿ ರೂಪಾಯಿಯಷ್ಟು” ಎಂದು ವರದಿ ನೀಡಿತ್ತು. ಅಲ್ಲದೆ ಆಗಿರುವ ಹಾನಿಯನ್ನು ಸರಿಪಡಿಸಲು ಕಂಪನಿಯಿಂದ ಮಧ್ಯಂತರ ಪರಿಹಾರಕ್ಕಾಗಿ ದಂಡ ವಸೂಲಿ ಮಾಡಬೇಕು ಎಂದು ಶಿಫಾರಸು ಮಾಡಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎನ್‌ಜಿಟಿ , “ಮಾನದಂಡಗಳನ್ನು ಪಾಲಿಸದೆ ಪರಿಸರಕ್ಕೆ ಹಾನಿ ಉಂಟು ಮಾಡಿರುವ ಕಂಪನಿ ಮಧ್ಯಂತರ ಪರಿಹಾರವಾಗಿ 100 ಕೋಟಿ ರೂಪಾಯಿ ದಂಡ ಕಟ್ಟಬೇಕು” ಎಂದು ಆದೇಶ ನೀಡಿತ್ತು. ಆದರೆ, ಕಂಪನಿ ಈವರೆಗೆ ಈ ಆದೇಶ ಪಾಲಿಸದಿರುವುದರಿಂದ ಶುಕ್ರವಾರ ಸಂಜೆಯೊಳಗೆ ದಂಡ ಕಟ್ಟುವಂತೆ ಎನ್‌ಜಿಟಿ ಕಂಪನಿಗೆ ನಿರ್ದೇಶನ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿಯ ವಕ್ತಾರರು, “ಫೋಕ್ಸ್‌ವ್ಯಾಗನ್ ಸಮೂಹವು ಭಾರತದಲ್ಲಿ ಜಾರಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಾನದಂಡಗಳಿಗೆ ಅನುಗುಣವಾಗಿಯೇ ಕಾರುಗಳನ್ನು ತಯಾರು ಮಾಡಿದೆ. ಎನ್‌ಜಿಟಿ ಆದೇಶವನ್ನು ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇವೆ. ಆದಾಗ್ಯೂ ಎನ್‌ಜಿಟಿ ನಿರ್ದೇಶನ ನೀಡಿರುವಂತೆ ದಂಡ ಠೇವಣಿ ಇರಿಸಲು ಕಂಪನಿ ಸಿದ್ಧವಿದೆ” ಎಂದಿದ್ದಾರೆ.