samachara
www.samachara.com
ಕಣಿವೆ ರಾಜ್ಯದಲ್ಲಿ ಹಿಮಪಾತ; ಮುನ್ಸೂಚನೆ ನಡುವೆಯೂ ಕೊಚ್ಚಿ ಹೋದ 10 ಮಂದಿ
ಸುದ್ದಿ ಸಾರ

ಕಣಿವೆ ರಾಜ್ಯದಲ್ಲಿ ಹಿಮಪಾತ; ಮುನ್ಸೂಚನೆ ನಡುವೆಯೂ ಕೊಚ್ಚಿ ಹೋದ 10 ಮಂದಿ

ಕಾರ್ಯಾಚರಣೆ ವೇಳೆ ಐದು ಜನರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಅಲ್ಲದೆ ಉಳಿದ ಐದು ಜನರೂ ಸಾವನ್ನಪ್ಪಿರುವ ಸಾಧ್ಯತೆ ಇದ್ದು ಅವರ ಮೃತದೇಹಗಳಿಗಾಗಿ ಹುಟುಕಾಟ ನಡೆಸಲಾಗುತ್ತಿದೆ.

Team Samachara

ಜಮ್ಮು-ಕಾಶ್ಮೀರದ ಕರ್ದುಂಗ್ ಬೆಟ್ಟದ ಸಾಲಿನಲ್ಲಿ ನಡೆದ ಹಿಮಪಾತಕ್ಕೆ ಐವರು ಸಾವನ್ನಪ್ಪಿದ್ದಾರೆ. ಅವರ ಮೃತದೇಹಗಳನ್ನು ಶುಕ್ರವಾರ ಪತ್ತೆ ಹಚ್ಚಲಾಗಿದೆ. ಇನ್ನೂ ಐವರು ಹಿಮದ ಅಡಿಯಲ್ಲಿ ಸಿಲುಕಿರುವ ಶಂಕೆ ಇದ್ದು, ಅವರೆಲ್ಲ ಜೀವಂತವಿರುವ ಸಾಧ್ಯತೆ ಕಡಿಮೆ ಇದೆ. ಸದ್ಯ ಶೋಧಕಾರ್ಯ ಮುಂದುವರಿದಿದೆ.

ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದ ಹಿಮ ಸುರಿಯುತ್ತಿದ್ದು ಹಲವು ಕಡೆಗಳಲ್ಲಿ ಸಾರಿಗೆ ವ್ಯವಸ್ಥೆ ದುಸ್ಥರವಾಗಿದೆ. ಜಮ್ಮು-ಕಾಶ್ಮೀರದ ಲಡಾಕ್‌ನ ಕರ್ದುಂಗ್-ಲಾ ಪಾಸ್ ಪ್ರದೇಶದಲ್ಲಿ ಗುರುವಾರ 17500 ಅಡಿ ಎತ್ತರದಲ್ಲಿ ಸಂಚರಿಸುವಾಗ ಸ್ಕಾರ್ಪಿಯೋ ಕಾರು ಹಿಮದ ರಾಶಿಗಳ ಅಡಿಯಲ್ಲಿ ಸಿಲುಕಿತ್ತು. ಇದರಲ್ಲಿ ಪ್ರಯಾಣಿಸುತ್ತಿದ್ದ ಸುಮಾರು ಹತ್ತು ಜನ ಕಣ್ಮರೆಯಾಗಿದ್ದರು.

ಶುಕ್ರವಾರ ಬೆಳಗ್ಗಿನಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಹಾಗೂ ರಾಜ್ಯ ವಿಪತ್ತು ಪರಿಹಾರ ದಳ (ಎಸ್‌ಡಿಆರ್‌ಎಫ್‌) ಯುದ್ದೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಕಾರ್ಯಾಚರಣೆ ವೇಳೆ ಐದು ಜನರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ.

ಸ್ಕಾರ್ಪಿಯೋ ಕಾರಿನ ಚಾಲಕ ಹಿಮದ ಗೋಡೆಗೆ ಗುದ್ದಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಉತ್ತರ ಲಡಾಕ್‌ನ ಕರ್ದುಂಗ್-ಲಾ ಬೆಟ್ಟದ ರಸ್ತೆ ಶ್ಯೋಕ್ ಮತ್ತು ನುಬ್ರಾ ಕಣಿವೆಗಳ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿದ್ದು, ಕಳೆದ ವರ್ಷ ಜನವರಿಯಲ್ಲಿ ಸ್ವೀಡಿಶ್‌ನ ಇಬ್ಬರು ಸಾಹಸಿಗಳು (ಸ್ಕೀಯರ್) ಇದೇ ಬೆಟ್ಟದ ಸಾಲಿನಲ್ಲಿ ಅಪಘಾತಕ್ಕೀಡಾಗಿದ್ದರು. ಇವರಲ್ಲಿ ಒಬ್ಬರನ್ನು ಮಾತ್ರ ರಕ್ಷಿಸಲಾಗಿತ್ತು. ಇದೇ ವರ್ಷ ಜನವರಿ 3 ರಂದು ಕಾಶ್ಮೀರದ ಫೂಂಚ್ ವಿಭಾಗದ ಸೈನಿಕ ಇಲ್ಲಿನ ಹಿಮಪಾತಕ್ಕೆ ಬಲಿಯಾಗಿದ್ದ.

ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು

ಭಾರತೀಯ ಹವಾಮಾನ ಇಲಾಖೆ ಜನವರಿ 13ರಂದೇ ಜಮ್ಮು-ಕಾಶ್ಮೀರದ ಅನಂತ್‌ ನಾಗ್, ಬುದ್ಗಂ, ಬಾರಮುಲ್ಲಾ, ಬಂಡಿಪೋರಾ, ಗಂಡೆರ್ ಬಲ್, ಕಾರ್ಗಿಲ್, ಕುಲ್ಗಾಂ, ಕುಪ್ವಾರ ಮತ್ತು ಲೇಹ್ ಜಿಲ್ಲೆಗಳಲ್ಲಿ ಭಾರೀ ಹಿಮಪಾತವಾಗಲಿದೆ ಅಲ್ಲದೆ ಫೂಂಚ್, ರಮ್‌ಬನ್, ಕಿಷ್ತ್ವಾರ್ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ಹಿಮಪಾತವಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಅಲ್ಲದೆ ಮುಂದಿನ 24 ಗಂಟೆಗಳ ಕಾಲ ಬೆಟ್ಟದ ಸಾಲಿನ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಗುರುವಾರ ಶ್ರೀನಗರ ಹಾಗೂ ಗುಲ್‌ಮಾರ್ಗ್‌ ಭಾಗದಲ್ಲಿ 15.02 ಎಂಎಂ ಹಿಮಪಾತವಾಗಿದ್ದರೆ, ದಕ್ಷಿಣ ಕಾಶ್ಮೀರದ ಪಹಲ್ಗಮ್, ಕುಪ್ವಾರ ಜಿಲ್ಲೆಗಳಲ್ಲಿ 16.02 ಎಂಎಂ ನಷ್ಟು ಹಿಮಪಾತವಾಗಿದೆ. ಹಿಮಪಾತದಿಂದಾಗಿ ಜಮ್ಮು-ಕಾಶ್ಮೀರದ ಹಲವಾರು ಕಡೆಗಳಲ್ಲಿ ರಸ್ತೆಗಳು ಮುಚ್ಚಿಹೋಗಿದ್ದು, ಸಾರಿಗೆ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ಥವಾಗಿದೆ.