samachara
www.samachara.com
ಉದ್ಯೋಗದ ಕುರಿತು ಸದನ ಸಮಿತಿ ವರದಿ; ಮೋದಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಜೋಷಿ ನಡೆ
ಸುದ್ದಿ ಸಾರ

ಉದ್ಯೋಗದ ಕುರಿತು ಸದನ ಸಮಿತಿ ವರದಿ; ಮೋದಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಜೋಷಿ ನಡೆ

ಸಮಿತಿ ಸದಸ್ಯರ ಆಕ್ಷೇಪಣೆ ಮಧ್ಯೆಯೂ ಎಂ.ಎಂ. ಜೋಷಿ, ಮೋದಿ ಸರಕಾರದ ಬಳಿ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ನೈಜ ವರದಿಯೇ ಇಲ್ಲವೆಂಬ ತೀರ್ಮಾನಕ್ಕೆ ಬಂದಿದೆ.

Team Samachara

2014ರ ನಂತರ ಸೃಷ್ಟಿಯಾದ ಹೊಸ ಉದ್ಯೋಗಗಳೆಷ್ಟು? ಈ ಕುರಿತು ಅಂಕಿ ಅಂಶಗಳು ತಮ್ಮ ಬಳಿಯಲ್ಲಿ ಇಲ್ಲ ಎಂದು ಸದನ ಸಮಿತಿ ಮುಂದೆ ನರೇಂದ್ರ ಮೋದಿ ಸರಕಾರ ಒಪ್ಪಿಕೊಂಡಿದೆ.

ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್‌ ಜೋಷಿ ಈ ಸದನ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕಳೆದ ಆರು ತಿಂಗಳಿನಿಂದ ಈ ಸಮಿತಿಯು ಜಿಡಿಪಿ ಬೆಳವಣಿಗೆ ನಿರ್ಧರಿಸುವ ಸಮಿತಿಯ ವರದಿಯನ್ನು ಪರಿಶೀಲನೆ ನಡೆಸುತ್ತಿತ್ತು. ಇದೀಗ ಉದ್ಯೋಗ ಸೃಷ್ಟಿ ಬಗ್ಗೆ ಚರ್ಚೆಗೆ ಇಳಿದಿದ್ದು, ಇದಕ್ಕೆ ಸಮಿತಿಯಲ್ಲಿರುವ ಕೆಲವು ಬಿಜೆಪಿ ನಾಯಕರೇ ತಕರಾರುಗಳನ್ನು ತೆಗೆದಿದ್ದಾರೆ. ‘ಭಾರತದಲ್ಲಿ ನಿಜವಾಗಿಯೂ ಉದ್ಯೋಗದ ಮಟ್ಟವನ್ನು ಅಳೆಯುವ ವಿಶ್ವಾಸಾರ್ಹ ಕಾರ್ಯವಿಧಾನಗಳು ಇವೆಯೇ’ ಎಂದು ಇವರುಗಳು ಪ್ರಶ್ನಿಸಿದ್ದಾರೆ.

ಆದರೆ, ಸಮಿತಿ ಸದಸ್ಯರ ಆಕ್ಷೇಪಣೆ ಮಧ್ಯೆಯೂ ಜೋಷಿ ಈ ವರದಿಯನ್ನು ಲೋಕಸಭೆಯ ಮುಂದೆ ಇಡಲು ನಿರ್ಧರಿಸಿದ್ದಾರೆ.

ಇದೇ ಮೊದಲ ಬಾರಿಗೆ ಸದನ ಸಮಿತಿಯ ಮೂವರು ಬಿಜೆಪಿ ಸದಸ್ಯರು ಜೋಷಿ ನಿರ್ಧಾರಕ್ಕೆ ಪ್ರತಿರೋಧ ತೋರಿದ್ದು ಈ ಸಂಬಂಧ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ. ಸಮಿತಿಯ ಲೆಕ್ಕಚಾರಕ್ಕೂ ನಿಜವಾದ ಉದ್ಯೋಗ ಸೃಷ್ಟಿಯ ಬೆಳವಣಿಗೆಗೂ ಹೋಲಿಕೆಯಾಗುತ್ತಿಲ್ಲ ಎಂದು ಇವರು ಅಪಸ್ವರ ತೆಗೆದಿದ್ದಾರೆ.

ಕಳೆದೊಂದು ವರ್ಷದಲ್ಲಿ ಪ್ರಧಾನಿ ಮೋದಿ ಮತ್ತು ಸಂಪುಟದ ಕೆಲವು ಹಿರಿಯ ಸಚಿವರು, ಮುದ್ರಾ ಸಾಲದ ಹೆಚ್ಚಳ ಮತ್ತು ಹೊಸ ಇಪಿಎಫ್‌ಒ ನೋಂದಣಿಗಳಿಂದ ಆರೋಗ್ಯಕರ ಉದ್ಯೋಗದ ಬೆಳವಣಿಗೆ ನಡೆಯುತ್ತಿದೆ ಎಂದು ವಾದಿಸಿದ್ದರು. ಇದನ್ನು ಸಮಿತಿ ಅಧ್ಯಕ್ಷ ಮುರಳಿ ಮನೋಹರ್‌ ಜೋಷಿ ತಳ್ಳಿ ಹಾಕಿದೆ. ಇದು ಸಮಿತಿಯ ಇತರ ಬಿಜೆಪಿ ಸದಸ್ಯರನ್ನು ಕೆರಳಿಸಿದೆ.

ಕೇಂದ್ರದ ಲೆಕ್ಕವನ್ನು ಒಪ್ಪದ ಸದನ ಸಮಿತಿ, ನೇರವಾಗಿ ಸಾಂಪ್ರದಾಯಿಕ ವಿಧಾನದಲ್ಲಿ ನಡೆಸಲಾದ ಉದ್ಯೋಗ ಸೃಷ್ಟಿಯ ಸಮೀಕ್ಷೆಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ. ವರದಿಯಲ್ಲಿ ನ್ಯಾಷನಲ್‌ ಸ್ಯಾಂಪಲ್‌ ಸರ್ವೇ ಆರ್ಗನೈಜೇಷನ್‌ (ಎನ್‌ಎಸ್‌ಎನ್‌ಒ)ನ ಮಾಹಿತಿಗಳನ್ನೂ ಸೇರಿಸಲಾಗಿದೆ.

ಸರಕಾರ ಒಪ್ಪಿಕೊಂಡಂತೆ 2011-12ರ ನಂತರ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಯಾವುದೇ ಎನ್‌ಎಸ್‌ಎಸ್‌ಒ ಸಮೀಕ್ಷೆಗಳು ನಡೆದಿಲ್ಲ. ಸಾಮಾನ್ಯವಾಗಿ ಎನ್‌ಎಸ್‌ಎಸ್‌ಒ ಐದು ವರ್ಷಕ್ಕೊಮ್ಮೆ ಸಮೀಕ್ಷೆ ನಡೆಸುತ್ತದೆ. ಇದರಂತೆ 2018ರಲ್ಲಿ ಸಮೀಕ್ಷೆ ನಡೆಸಬೇಕಾಗಿತ್ತು. ಇದನ್ನು 2018ರ ಅಂತ್ಯಕ್ಕೆ ಮೊದಲು ಬಿಡುಗಡೆ ಮಾಡುವುದಾಗಿ ಸರಕಾರ ಹೇಳಿತ್ತು. ಆದರೆ ಇನ್ನೂ ಬಿಡುಗಡೆ ಮಾಡಿಲ್ಲ.

ಮಧ್ಯಂತರ ಅಂದಾಜನ್ನು 2016-17ರಲ್ಲಿ ಲೇಬರ್‌ ಬ್ಯೂರೋ ಸಮೀಕ್ಷೆ ಲೆಕ್ಕ ಹಾಕಿದ್ದು, ಇದನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸರಕಾರ ಅಧಿಕೃತ ತೀರ್ಮಾನ ತೆಗೆದುಕೊಂಡಿದೆ. ಈ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಮಾಹಿತಿಗಳು ಇತ್ತೀಚೆಗೆ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು. ಇದರಲ್ಲಿ ನಿರುದ್ಯೋಗ 2016-17ರಲ್ಲಿ ನಾಲ್ಕು ವರ್ಷಗಳಲ್ಲೇ ಅತಿ ಹೆಚ್ಚಿನದಾಗಿತ್ತು ಎಂದು ತಿಳಿದು ಬಂದಿತ್ತು.

ಇದನ್ನು ಅಧಿಕೃತವಾಗಿ ಸರಕಾರ ಬಹಿರಂಗಗೊಳಿಸಲು ನಿರಾಕರಿಸಿದ್ದರಿಂದ ಕಾರ್ಮಿಕ ಇಲಾಖೆ ಇದನ್ನು ಸದನ ಸಮಿತಿ ಮುಂದೆ ಹಂಚಿಕೊಂಡಿರಲಿಲ್ಲ. ಇನ್ನು ಎನ್ಎಸ್‌ಎಸ್‌ಒ 2011-12ರ ನಂತರ ಯಾವುದೇ ಸಮೀಕ್ಷೆಗಳನ್ನು ನಡೆಸಿಲ್ಲ. ಹಾಗಾಗಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ ಎಂದು ಸದನ ಸಮಿತಿ ಅಧ್ಯಕ್ಷ ಎಂ.ಎಂ. ಜೋಷಿ ಷರಾ ಬರೆದಿದ್ದಾರೆ.

ಜೋಷಿ ಮಾತ್ರವಲ್ಲದೆ ಈ ಹಿಂದೆ ಹಣಕಾಸು ಕಾರ್ಯದರ್ಶಿ, ಮುಖ್ಯ ಸಂಖ್ಯಾಶಾಸ್ತ್ರಜ್ಞ, ಬ್ಯಾಂಕಿಂಗ್‌ ಕಾರ್ಯದರ್ಶಿ, ಕಾರ್ಮಿಕ ಕಾರ್ಯದರ್ಶಿ ಮತ್ತು ಮಾಜಿ ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ನಿಜಾವಧಿಯ ಉದ್ಯೋಗಗಳ ಮಾಹಿತಿಯೇ ಇಲ್ಲ ಎಂದು ಒಪ್ಪಿಕೊಂಡಿದ್ದರು.

ಇನ್ನೊಂದು ಕಡೆಯಲ್ಲಿ ಸಮಿತಿಯ ವರದಿಗೆ ಸದಸ್ಯರಾದ ರಾಜೀವ್‌ ಪ್ರತಾಪ್‌ ರೂಡಿ, ನಿಶಿಕಾಂತ್‌ ದುಬೆ, ರಮೇಶ್‌ ಬಿಧುರಿ ಕಳೆದ ವಾರ ಭಿನ್ನಸ್ವರವೆತ್ತಿ ಪತ್ರ ಬರೆದಿದ್ದರು. ಇದರಲ್ಲಿ ಅವರು ಸಮಿತಿ ‘ಅದರ ವ್ಯಾಪ್ತಿ ಮೀರಿದೆ’ ಎಂದಿದ್ದರು. ಈ ಮೂಲಕ ಜೋಷಿ ವರದಿಗೆ ವಿರೋಧ ವ್ಯಕ್ತಪಡಿಸುವ ಮೂಲಕ ಸರಕಾರಕ್ಕೆ ಯಾವುದೇ ಹಾನಿಯಾಗುವುದನ್ನು ತಡೆಯಲು ಇವರುಗಳು ಯತ್ನಿಸಿದ್ದರು.

ಸಾಮಾನ್ಯವಾಗಿ ವರದಿ ತಯಾರಿಸುವಾಗ ಸಮಿತಿಯ ಎಲ್ಲರ ಒಪ್ಪಿಗೆ ಪಡೆದೇ ತಯಾರಿಸಲಾಗುತ್ತದೆ. ಆದರೆ ಈ ಬಾರಿ ಜೋಷಿ ಇವರುಗಳ ಒಪ್ಪಿಗೆ ಪಡೆಯದೇ ವರದಿ ಸಿದ್ಧಪಡಿಸಿದ್ದಾರೆ. ಅಪಸ್ವರ ತೆಗೆದ ಬಿಜೆಪಿ ನಾಯಕರ ಪತ್ರಗಳನ್ನು ಅನುಬಂಧದಲ್ಲಿ ಸೇರಿಸಿ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲು ಹೊರಟಿದ್ದಾರೆ. ಇದು ಸರಕಾರವನ್ನು ಕೆರಳಿಸಿದೆ ಮಾತ್ರವಲ್ಲ ಇಕ್ಕಟ್ಟಿನಲ್ಲಿಯೂ ಸಿಲುಕಿಸಿದೆ.

ಈ ಹಿಂದೆಯೂ ನಿರಂತರವಾಗಿ ಮೋದಿ ಸರಕಾರದ ಎಪಿಎಫ್‌ಒ ಡಾಟಾವನ್ನು ಒಪ್ಪಿಕೊಳ್ಳಲು ಜೋಷಿ ನಿರಾಕರಿಸಿದ್ದರು. ಬದಲಿಗೆ ಉದ್ಯೋಗ ಸೃಷ್ಟಿ ಮತ್ತು ಆದಾಯ ಏರಿಕೆಗೆ ಸಂಬಂಧಿಸಿದಂತೆ 'ಸಮಗ್ರ’ ಮತ್ತು ‘ನೈಜ ಸಮಯ ಸಮೀಕ್ಷೆಯ ಡೇಟಾ’ ಪಡೆದುಕೊಂಡಿದ್ದೇವೆ ಎಂದು ಪ್ರತಿಪಾದಿಸುತ್ತಾ ಬಂದಿದ್ದರು.

ಕೃಪೆ: ದಿ ವೈರ್‌