samachara
www.samachara.com
ಮೇಘಾಲಯ ಗಣಿ ದುರಂತ : ತಿಂಗಳ ನಂತರ ಒಂದು ಮೃತದೇಹ ಪತ್ತೆ
ಸುದ್ದಿ ಸಾರ

ಮೇಘಾಲಯ ಗಣಿ ದುರಂತ : ತಿಂಗಳ ನಂತರ ಒಂದು ಮೃತದೇಹ ಪತ್ತೆ

ಕಳೆದ ಡಿ.13 ರಂದು ಮೇಘಾಲಯದ ಲುಮ್ತಾರಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗಾಗಿ 20 ಕಾರ್ಮಿಕರು ನದಿಯ ಸಮೀಪದಲ್ಲೇ 350 ಅಡಿ ಆಳದಲ್ಲಿ ಕೆಲಸ ಆರಂಭಿಸಿದ್ದರು, ಈ ಸಂದರ್ಭದಲ್ಲಿ ಗಣಿಯೊಳಗೆ ಏಕಾಏಕಿ ನೀರು ನುಗ್ಗಿದ ಪರಿಣಾಮ ದುರಂತ ನಡೆದು ಹೋಗಿದೆ.

Team Samachara

ಮೇಘಾಲಯದ ಕಲ್ಲಿದ್ದಲಿನ ಗಣಿಯಲ್ಲಿ ದುರಂತ ಸಂಭವಿಸಿ ಒಂದು ತಿಂಗಳ ನಂತರ ಎನ್‌ಡಿಆರ್‌ಎಫ್ ಹಾಗೂ ನೌಕಾದಳ ಸಿಬ್ಬಂದಿಗಳು ಓರ್ವ ಕಾರ್ಮಿಕನ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ ಡಿ.13 ರಂದು ಮೇಘಾಲಯದ ಪೂರ್ವ ಜೈಂತಿಯಾ ಹಿಲ್ಸ್ ಜಿಲ್ಲೆಯ ಲುಮ್ತಾರಿ ಪ್ರದೇಶದಲ್ಲಿ ಬದುಕಿಗಾಗಿ ಗಣಿಗಾರಿಕೆ ನಡೆಸಿಲು 20 ಕಾರ್ಮಿಕರು ನದಿಯ ಸಮೀಪದಲ್ಲೇ 350 ಅಡಿ ಆಳದಲ್ಲಿ ಇಳಿದು ಕೆಲಸ ಶುರು ಮಾಡಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕರಿದ್ದ ಪ್ರದೇಶಕ್ಕೆ ಏಕಾಏಕಿ ನೀರು ನುಗ್ಗಿದ ಪರಿಣಾಮ ದುರಂತ ಸಂಭವಿಸಿದೆ. ನೀರು ಗಣಿ ಪ್ರದೇಶದ ಒಳಗೆ ನುಗ್ಗುತ್ತಿದ್ದಂತೆ 5 ಜನ ಕಾರ್ಮಿಕರು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಒಳಗೆ ಸಿಲುಕಿದ್ದ ಉಳಿದ 15 ಜನರ ಪರಿಸ್ಥಿತಿ ಏನು ಎಂಬುದು ಈವರೆಗೆ ತಿಳಿದಿಲ್ಲ.

ಕಳೆದ 35 ದಿನಗಳಿಂದ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಯುತ್ತಲೇ ಇದೆ. ನೀರಿನ ಅಡಿಯಲ್ಲಿ ವಸ್ತುಗಳನ್ನು ಗುರುತಿಸುವ ಯುಡಬ್ಲ್ಯುಆರ್‌ಓವಿ ಯಂತ್ರದ ಸಹಾಯದಿಂದ ಇಂದು ಓರ್ವನ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಉಳಿದವರ ದೇಹಕ್ಕಾಗಿ ಶೋಧನಾ ಕಾರ್ಯ ಮುಂದುವರೆದಿದೆ. ಆದರೆ 350 ಅಡಿ ಆಳದ ಗಣಿ ಪ್ರದೇಶದಲ್ಲಿ ಕೋಟ್ಯಾಂತರ ಲೀಟರ್ ನೀರು ಶೇಖರಣೆಯಾಗಿದೆ. ಅಷ್ಟೂ ನೀರನ್ನು ಹೊರತೆಗೆಯುವ ಕೆಲಸ ನಡೆಯುತ್ತಲೇ ಇದೆಯಾದರೂ ಈವರೆಗೆ ಮುಗಿದಿಲ್ಲ ಎಂದು ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಗಳು ತಿಳಿಸಿದ್ದಾರೆ.

ಜೈಂತಿಯಾ ಹಿಲ್ಸ್ ಗಣಿ ದುರಂತಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲಿ ಕಾರ್ಮಿಕರ ಮೃತದೇಹವನ್ನು ಗಣಿಯಿಂದ ಹೊರ ತೆಗೆಯಬೇಕು ಎಂದು ಮೇಘಾಲಯ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.

ರಕ್ಷಣಾ ಕಾರ್ಯಾಚರಣೆಯ ಕುರಿತು ಪ್ರತಿಕ್ರಿಯಿಸಿರುವ ಮೇಘಾಲಯ ಉಪ ಮುಖ್ಯಮಂತ್ರಿ ಪ್ರಿಸ್ಟೋನ್ ಟೈನೋಸಂಗ್, "ಕಳೆದ ಒಂದು ತಿಂಗಳಿಂದ ಈ ಕ್ಷಣದ ವರೆಗೆ ಮೃತದೇಹಗಳ ಪತ್ತೆಗಾಗಿ ತಜ್ಞರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾವು ಅವರ ಅಭಿಪ್ರಾಯವನ್ನು ತಿಳಿದುಕೊಳ್ಳುವವರೆಗೆ ಏನೂ ಹೇಳಲು ಸಾಧ್ಯವಿಲ್ಲ. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಸುಪ್ರೀಂ ಕೋರ್ಟ್‌ಗೆ ವಿಸ್ಕೃತ ವರದಿ ಸಲ್ಲಿಸಲಾಗುವುದು" ಎಂದಿದ್ದಾರೆ.