samachara
www.samachara.com
ಪತ್ರಕರ್ತನ ಹತ್ಯೆ ಪ್ರಕರಣ: ‘ದೇವಮಾನವ’ನಿಗೆ ಜೀವನಪೂರ್ತಿ ಜೈಲೇ ಗತಿ!
ಸುದ್ದಿ ಸಾರ

ಪತ್ರಕರ್ತನ ಹತ್ಯೆ ಪ್ರಕರಣ: ‘ದೇವಮಾನವ’ನಿಗೆ ಜೀವನಪೂರ್ತಿ ಜೈಲೇ ಗತಿ!

ರಾಮ್ ರಹೀಮ್ ಆಶ್ರಮದಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂಬ ಅನಾಮಧೇಯ ಪತ್ರವೊಂದು ‘ಪೂರ್ ಸಚ್’ ಪತ್ರಿಕಾ ಕಚೇರಿ ತಲುಪಿತ್ತು. ಈ ಕುರಿತು ತನಿಖೆ ನಡೆಸಿದ್ದ ಪತ್ರಕರ್ತ ರಾಮಚಂದ್ರ ಛತ್ರಪತಿ, ರಹೀಮನ ಮುಖವಾಡ ಹರಿದಿದ್ದರು.

Team Samachara

ಪತ್ರಕರ್ತ ರಾಮಚಂದ್ರ ಛತ್ರಪತಿ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಹಾಗೂ ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್‌ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

2002ರ ಪ್ರಕರಣದ ಬಗ್ಗೆ 16 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಜ.11 ರಂದು ಸಿಂಗ್‌ ಹಾಗೂ ಆತನ ಮೂವರು ಸಹಚರರು ದೋಷಿಗಳು ಎಂದು ಘೋಷಿಸಿತ್ತು. ಈ ಸಂದರ್ಭದಲ್ಲಿ ಶಿಕ್ಷೆಯ ಪ್ರಮಾಣವನ್ನು ಜ.17 ರಂದು ಘೋಷಿಸುವುದಾಗಿ ಹೇಳಿತ್ತು. ಅದರಂತೆ ಇಂದು ಶಿಕ್ಷೆಯನ್ನು ಘೋಷಿಸಿರುವ ಸಿಬಿಐ ವಿಶೇಷ ನ್ಯಾಯಾಲಯ ರಾಮ್ ರಹೀಮ್ ಸಿಂಗ್‌ ಹಾಗೂ ಆತನ ಮೂವರು ಸಹಚರರಾದ ಕುಲ್ದೀಪ್ ಸಿಂಗ್, ನಿರ್ಮಲ್ ಸಿಂಗ್ ಹಾಗೂ ಕೃಷ್ಣ ಲಾಲ್‌ಗೂ ಜೀವಾವಧಿ ಶಿಕ್ಷೆ ನೀಡಿದೆ.

51 ವರ್ಷದ ರಾಮ್ ರಹೀಮ್ ಸಿಂಗ್‌ ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದು, ರೋಹ್ಟಕ್‌ನ ಸುನಾರಿ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಆತನ ಮೂವರು ಸಹಚರರನ್ನು ಅಂಬಾಲ ಜೈಲಿನಲ್ಲಿ ಇಡಲಾಗಿದೆ.

ಏನಿದು ಪ್ರಕರಣ ..?

ಸ್ವಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ತನ್ನ ಆಶ್ರಮದಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂಬ ಅನಾಮಧೇಯ ಪತ್ರವೊಂದು 2002 ರಲ್ಲಿ ಹರಿಯಾಣ ರಾಜ್ಯದ ಸಿರ್ಸಾ ನಗರದ ಸ್ಥಳೀಯ ಪತ್ರಿಕೆ 'ಪೂರ್ ಸಚ್' ಕಚೇರಿ ತಲುಪಿತ್ತು. ಈ ಪತ್ರದ ಆಧಾರ ಮೇಲೆ ತನಿಖೆ ನಡೆಸಿದ ಪತ್ರಿಕೆಯ ಸಂಪಾದಕ ರಾಮಚಂದ್ರ ಛತ್ರಪತಿ ಮಹಿಳೆಯರ ವಿರುದ್ಧ ರಾಮ್ ರಹೀಮ್ ನಡೆಸುತ್ತಿದ್ದ ಲೈಂಗಿಕ ಹಗರಣವನ್ನು ಮೊದಲ ಬಾರಿಗೆ ಬೆಳಕಿಗೆ ತಂದಿದ್ದರು. ಅಲ್ಲದೆ ಈ ಕುರಿತು ಸಾಲು ಸಾಲು ವರದಿಗಳನ್ನು ಪ್ರಕಟಿಸುವ ಮೂಲಕ ರಾಮ್ ರಹೀಮ್‌ನ ಕೆಂಗಣ್ಣಿಗೆ ಗುರಿಯಾಗಿದ್ದರು.

ರಾಮಚಂದ್ರ ಛತ್ರಪತಿ ತನ್ನ ‘ಪೂರ್ ಸಚ್’ ಪತ್ರಿಕೆಯಲ್ಲಿ ರಾಮ್ ರಹೀಮನ ಅನಾಚಾರಗಳನ್ನು ಬಯಲಿಗೆ ಎಳೆಯುತ್ತಿದ್ದಂತೆ ಆತನ ಕೊಲೆಗೆ ಆಜ್ಞೆಯಾಗಿತ್ತು. ಸಿಂಗ್‌ ಆಜ್ಞೆಯಂತೆ ಆತನ ಸಹಚರರಾದ ಕುಲ್ದೀಪ್ ಸಿಂಗ್, ನಿರ್ಮಲ್ ಸಿಂಗ್ ಹಾಗೂ ಕೃಷ್ಣ ಲಾಲ್ 2002 ಅಕ್ಟೋಬರ್‌ ನಲ್ಲಿ ಪತ್ರಕರ್ತ ರಾಮಚಂದ್ರ ಛತ್ರಪತಿ ಅವರನ್ನು ಮನೆಯ ಮುಂದೆಯೇ ಗುಂಡಿಟ್ಟು ಕೊಂದಿದ್ದರು. ಕೊಲೆ 2002 ರಲ್ಲಿ ನಡೆದಿದ್ದರೂ ಪ್ರಕರಣ ದಾಖಲಾಗಿದ್ದು ಮಾತ್ರ 2003 ರಲ್ಲಿ. ಪತ್ರಕರ್ತನ ಕೊಲೆಗೆ ಸಂಬಂಧಿಸಿದ ಪ್ರಾಮಾಣಿಕ ತನಿಖೆಗಾಗಿ ಹರಿಯಾಣ ರಾಜ್ಯ ಸರಕಾರ ಪ್ರಕರಣವನ್ನು 2006 ರಲ್ಲಿ ಸಿಬಿಐಗೆ ವಹಿಸಿತ್ತು.

ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ರಾಮ್ ರಹೀಮ್‌ನನ್ನು ಪ್ರಮುಖ ಅಪರಾಧಿ ಹಾಗೂ ಆತನ ಇತರೆ ಮೂರು ಮಂದಿ ಸಹಚರರು ತಪ್ಪಿತಸ್ಥರು ಎಂದು ದೋಷಾರೋಪ ಹೊರಿಸಿತ್ತು. ಸಿಬಿಐ ತನಿಖೆಯನ್ನು ಪರಾಮರ್ಶಿಸಿದ ಪಂಚಕುಲಾ ನ್ಯಾಯಾಲಯ ಜನವರಿ 11 ರಂದು ಪ್ರಕರಣದಲ್ಲಿ ರಾಮ್ ರಹೀಮ್ ಹಾಗೂ ಆತನ ಮೂವರು ಸಹಚರರು ಅಪರಾಧಿಗಳು ಎಂದು ಘೋಷಿಸಿತ್ತು. ಇದೀಗ ಅವರುಗಳಿಗೆ ಜೀವಾವಧಿ ಶಿಕ್ಷೆಯನ್ನೂ ಘೋಷಿಸಲಾಗಿದೆ.

ವಿಡಿಯೋ ಕಾನ್ಫರೆನ್ಸ್ ವಿಚಾರಣೆ

ಹಳೆಯ ಪ್ರಕರಣದಲ್ಲಿ ಜೈಲಿನಲ್ಲಿರುವ ರಾಮ್‌ ರಹೀಮ್‌ ಸಿಂಗ್‌ನ ಆರೋಗ್ಯ ಹಾಗೂ ಕೆಲವು ರಕ್ಷಣಾ ಸಂಬಂಧಿ ಕಾರಣಗಳಿಂದಾಗಿ ಹರಿಯಾಣ ಪೊಲೀಸರ ಕೋರಿಕೆಯ ಮೇರೆಗೆ ನ್ಯಾಯಾಲಯ ಆತನ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಸಿತ್ತು. ಇಂದಿನ ತೀರ್ಪನ್ನು ಸಹ ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್ ಮೂಲಕವೇ ನೀಡಲಾಗಿದೆ.

ಕಳೆದ ಬಾರಿ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಘೋಷಣೆಯಾದಾಗ ದೊಡ್ಡ ಮಟ್ಟದ ಗಲಭೆಯಾಗಿತ್ತು. ಆತನ ಸಾಕು ಮಗಳು ಹನಿಪ್ರೀತ್ ಅಣತಿಯಂತೆ ರಹೀಮನ ಅನುಯಾಯಿಗಳು ಪಂಚಕುಲಾದಲ್ಲಿ ದೊಡ್ಡ ಮಟ್ಟದ ದೊಂಬಿಯನ್ನು ಸೃಷ್ಟಿಸಿದ್ದರು. ಈ ಗಲಭೆಯನ್ನು ನಿಯಂತ್ರಣಕ್ಕೆ ತರುವುದಕ್ಕೆ ಪೊಲೀಸರು ಹರಸಾಹಸ ಪಡಬೇಕಾಗಿತ್ತು. ಇದರಿಂದ ಸಾಕಷ್ಟು ಪ್ರಮಾಣದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಹೀಗಾಗಿ ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಪಂಚಕುಲಾ ವಿಶೇಷ ಸಿಬಿಐ ನ್ಯಾಯಾಲಯದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ನ್ಯಾಯಾಲಯದ ಆವರಣದ ಸುತ್ತ ಮುಳ್ಳಿನ ತಂತಿ ಬೇಲಿಯನ್ನು ಹಾಕಿ ಸಾರ್ವಜನಿಕರಿಗೆ ನ್ಯಾಯಾಲಯದ ಆವರಣದ ಒಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ತೀವ್ರ ನಿಗಾ ವಹಿಸಿದ್ದರು. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಅಧಿಕ ಸಂಖ್ಯೆಯಲ್ಲಿ ಮೀಸಲು ಪೊಲೀಸ್‌ ಪಡೆಯನ್ನೂ ನ್ಯಾಯಾಲಯದ ಆವರಣದಲ್ಲಿ ನಿಯೋಜಿಸಲಾಗಿತ್ತು. ಜತೆಗೆ ಪಂಜಾಬ್‌ ಮತ್ತು ಹರ್ಯಾಣ ಸೇರಿದಂತೆ ರಾಮ್‌ ರಹೀಮ್‌ ಸಿಂಗ್‌ ಅನುಯಾಯಿಗಳಿರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ಈ ಬಾರಿ ತೀರ್ಪು ಪ್ರಕಟವಾದ ಬೆನ್ನಿಗೆ ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.