samachara
www.samachara.com
ಚೀನಾ ನಿರ್ಮಿಸುತ್ತಿರುವ ವಿದ್ಯುತ್ ಸ್ಥಾವರಕ್ಕೆ ಪಾಕಿಸ್ತಾನದಿಂದಲೇ ಶುರುವಾಯ್ತು ಅಪಸ್ವರ..
ಸುದ್ದಿ ಸಾರ

ಚೀನಾ ನಿರ್ಮಿಸುತ್ತಿರುವ ವಿದ್ಯುತ್ ಸ್ಥಾವರಕ್ಕೆ ಪಾಕಿಸ್ತಾನದಿಂದಲೇ ಶುರುವಾಯ್ತು ಅಪಸ್ವರ..

ಸಿಪಿಇಸಿ ಅಡಿ ಪಾಕಿಸ್ತಾನದಲ್ಲಿ ಚೀನಾ ನಿರ್ಮಿಸುತ್ತಿರುವ 1,320 ಮೆಗಾ ವ್ಯಾಟ್ ಸಾಮರ್ಥ್ಯದ ‘ರಹೀಮ್ ಯಾರ್ ಖಾನ್’ ಉಷ್ಣ ವಿದ್ಯುತ್ ಸ್ಥಾವರದ ಯೋಜನೆಯನ್ನು ಮುಂದುವರಿಸದಿರಲು ಪಾಕಿಸ್ತಾನ ಸರಕಾರ ನಿರ್ಧರಿಸಿದೆ.

Team Samachara

ಚೀನಾ-ಪಾಕಿಸ್ತಾನ್ ಎಕಾನಮಿಕ್ ಕಾರಿಡರ್ (ಸಿಪಿಇಸಿ) ಅಡಿಯಲ್ಲಿ ಪಾಕಿಸ್ತಾನದಲ್ಲಿ ಚೀನಾ ನಿರ್ಮಿಸುತ್ತಿರುವ 1,320 ಮೆಗಾ ವ್ಯಾಟ್ ಸಾಮರ್ಥ್ಯದ ‘ರಹೀಮ್ ಯಾರ್ ಖಾನ್’ ಉಷ್ಣ ವಿದ್ಯುತ್ ಸ್ಥಾವರದ ಯೋಜನೆಯನ್ನು ಮುಂದುವರಿಸದಿರಲು ಪಾಕಿಸ್ತಾನ ಸರಕಾರ ನಿರ್ಧರಿಸಿದೆ.

ಮಾಜಿ ಪ್ರಧಾನಿ ನವಾಜ್ ಷರೀಫ್ ಕಾಲದಲ್ಲಿ ಚೀನಾ ಜೊತೆಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದದ ಆಧಾರದ ಮೇಲೆ ಈ ಸ್ಥಾವರ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಆದರೆ, ಈ ಸ್ಥಾವರದಿಂದ ಉತ್ಪಾದಿಸಲು ಉದ್ದೇಶಿಸಲಾಗಿರುವ ವಿದ್ಯುತ್ ಸ್ಥಳೀಯ ವಿದ್ಯುತ್ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಈ ಸ್ಥಾವರವನ್ನು ಸಿಪಿಇಸಿ ಪಟ್ಟಿಯಿಂದ ಕೈಬಿಡುವಂತೆ ಚೀನಾ ಮನವೋಲಿಸಲು ಪಾಕಿಸ್ತಾನದ ಅಧಿಕಾರಿಗಳು ಮುಂದಾಗಿದ್ದಾರೆ.

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ರಹೀಮ್ ಯಾರ್ ಖಾನ್ ಉಷ್ಣ ವಿದ್ಯುತ್ ಸ್ಥಾವರ
ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ರಹೀಮ್ ಯಾರ್ ಖಾನ್ ಉಷ್ಣ ವಿದ್ಯುತ್ ಸ್ಥಾವರ

ಪಾಕಿಸ್ತಾನದ ಯೋಜನಾ ಮತ್ತು ಅಭಿವೃದ್ಧಿ ಮಂತ್ರಿ ಮುಖ್ದುಮ್ ಖುಸ್ರೋ ಬಕ್ತಿಯಾರ್ ಕಳೆದ ತಿಂಗಳು ನಡೆದ 8ನೇ ಜಂಟಿ ಸಹಕಾರ ಸಮಿತಿಯಲ್ಲಿ ರಹೀಮ್ ಯಾರ್ ಖಾನ್ ವಿದ್ಯುತ್ ಸ್ಥಾವರವನ್ನು ಸಿಪಿಇಸಿ ಪಟ್ಟಿಯಿಂದ ಹೊರಗಿಡುವ ಕುರಿತು ಪ್ರಸ್ತಾಪಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕ್‌ ಸಂಪುಟ ಸದಸ್ಯರೊಬ್ಬರು, “ಸಾರ್ವಜನಿಕ ಹಣ ಪೋಲಾಗುವುದು ನಮಗೆ ಇಷ್ಟವಿಲ್ಲ. ಈಗಾಗಲೇ ದೇಶದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಎಲ್ಲಾ ಯೋಜನೆಗಳನ್ನು ವಿವರವಾಗಿ ಪರಿಶೀಲಿಸಲಾಗುತ್ತಿದೆ. ಏಕೆಂದರೆ ಹಣವನ್ನು ಕಳಪೆ ಕೆಲಸಗಳಿಗೆ ಉಪಯೋಗಿಸಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.

ಆದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಕಳೆದ ಸರಕಾರದ ಅವಧಿಯಲ್ಲಿ ಆರಂಭಿಸಲಾದ 400 ಕ್ಕೂ ಹೆಚ್ಚು ಸಾರ್ವಜನಿಕ ಅಭಿವೃದ್ಧಿ ಯೋಜನೆಗಳನ್ನು ತೆಗದುಹಾಕಿದ್ದಾರೆ. ಇದೊಂದು ರಾಜಕೀಯ ದುರುದ್ದೇಶಪೂರಿತ ನಿರ್ಧಾರ ಎಂದು ಸರಕಾರಿ ವಲಯದಲ್ಲಿ ಮಾತುಗಳು ಕೇಳಿಬರುತ್ತವೆ.