samachara
www.samachara.com
ವಜಾಗೊಂಡರೂ ನಿಲ್ಲದ ಸಿಬಿಐ ಕಂಪನ: ಸಿವಿಸಿ ವರದಿ ಬಹಿರಂಗಕ್ಕೆ ಖರ್ಗೆ ಆಗ್ರಹ
ಸುದ್ದಿ ಸಾರ

ವಜಾಗೊಂಡರೂ ನಿಲ್ಲದ ಸಿಬಿಐ ಕಂಪನ: ಸಿವಿಸಿ ವರದಿ ಬಹಿರಂಗಕ್ಕೆ ಖರ್ಗೆ ಆಗ್ರಹ

ತಮ್ಮ ಎರಡು ಪುಟಗಳ ಪತ್ರದಲ್ಲಿ ಖರ್ಗೆ, ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾರನ್ನು ತೆಗೆದು ಹಾಕಲು ಏನೆಲ್ಲಾ ಘಟನೆಗಳು ನಡೆದವು ಎಂಬುದನ್ನು ದಾಖಲೆ ಸಮೇತ ಹೊರಹಾಕುವಂತೆ ಕೇಳಿಕೊಂಡಿದ್ದಾರೆ.

Team Samachara

ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕರಾಗಿದ್ದ ಅಲೋಕ್‌ ಕುಮಾರ್ ವರ್ಮಾ ವರ್ಗಾವಣೆಗೆ ಕಾರಣವಾಗಿದ್ದ ವಿವಾದಿತ ಕೇಂದ್ರ ವಿಚಕ್ಷಣ ಸಮಿತಿ (ಸಿವಿಸಿ) ವರದಿಯನ್ನು ಬಹಿರಂಗಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಪತ್ರ ಬರೆದಿದ್ದಾರೆ.

ಮಾತ್ರವಲ್ಲದೆ ಜನವರಿ 10ರಂದು ನಡೆದ ಉನ್ನತಾಧಿಕಾರವಿರುದ ನೇಮಕಾತಿ ಸಮಿತಿ ಸಭೆಯ ನಡಾವಳಿಗಳನ್ನೂ ಸಾರ್ವಜನಿಕರ ಮುಂದಿಡುವಂತೆ ಕೇಳಿಕೊಂಡಿದ್ದಾರೆ. ಇದರ ಜತೆಗೆ ಸಿಬಿಐ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್‌ ವರದಿಯನ್ನೂ ಸಾರ್ವಜನಿಕಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.

ಜನವರಿ 10ರಂದು ನಡೆದ ನೇಮಕಾತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸುಪ್ರಿಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೋಯಿ ಪ್ರತಿನಿಧಿ ನ್ಯಾ. ಎ.ಕೆ. ಸಿಕ್ರಿ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಭಾಗವಹಿಸಿದ್ದರು. ಸಭೆಯಲ್ಲಿ ಅಲೋಕ್‌ ಕುಮಾರ್‌ ವರ್ಮಾರನ್ನು ವರ್ಗಾವಣೆ ಮಾಡುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಇದನ್ನು ಖರ್ಗೆ ವಿರೋಧಿಸಿದ್ದರೆ, ಸಿಕ್ರಿ ಮತ್ತು ಮೋದಿ ಬೆಂಬಲಿಸಿದ್ದರು. ಹೀಗಾಗಿ 2:1ರ ಆದೇಶದಂತೆ ಅಲೋಕ್‌ ವರ್ಮಾ ಅವರನ್ನು ಸಿಬಿಐನಿಂದ ಅಗ್ನಿಶಾಮಕ, ನಾಗರಿಕ ರಕ್ಷಣೆ ಮತ್ತು ಗೃಹ ರಕ್ಷಕ ದಳದ ಡೈರಕ್ಟರ್‌ ಜನರಲ್‌ ಹುದ್ದೆಗೆ ವರ್ಗ ಮಾಡಲಾಗಿತ್ತು.

ಈ ಸಭೆಯ ನಡಾವಳಿಗಳು ಜತೆಗೆ ಸಿವಿಸಿ ಮತ್ತು ನ್ಯಾಯಮೂರ್ತಿ. ಎ.ಕೆ. ಪಟ್ನಾಯಕ್‌ ವರದಿಯನ್ನು ಬಹಿರಂಗಗೊಳಿಸುವ ಮೂಲಕ, ಈ ಪ್ರಕರಣದಲ್ಲಿ ಅವರದ್ದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾರ್ವಜನಿಕರಿಗೆ ಸಾಧ್ಯವಾಗುತ್ತದೆ ಎಂದು ಖರ್ಗೆ ಪತ್ರದಲ್ಲಿ ವಿವರಿಸಿದ್ದಾರೆ.

ಸದ್ಯ ಸಿಬಿಐ ಸಂಸ್ಥೆಯನ್ನು ಹಂಗಾಮಿ ನಿರ್ದೇಶಕರು ಮುನ್ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೂರ್ಣ ಕಾಲಿಕ ನಿರ್ದೇಶಕರನ್ನು ನೇಮಕ ಮಾಡಲು ತಡಮಾಡದೆ ನೇಮಕಾತಿ ಸಮಿತಿ ಸಭೆ ಕರೆಯುವಂತೆಯೂ ಅವರು ಒತ್ತಾಯಿಸಿದ್ದಾರೆ.

ತಮ್ಮ ಎರಡು ಪುಟಗಳ ಪತ್ರದಲ್ಲಿ ಖರ್ಗೆ, ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾರನ್ನು ತೆಗೆದು ಹಾಕಲು ಏನೆಲ್ಲಾ ಘಟನೆಗಳು ನಡೆದವು ಎಂಬುದನ್ನು ದಾಖಲೆ ಸಮೇತ ಹೊರಹಾಕುವಂತೆ ಕೇಳಿಕೊಂಡಿದ್ದಾರೆ. ಜತೆಗೆ ಸರ್ಕಾರದ ದುರುಪಯೋಗದ ಕ್ರಮಗಳು ನ್ಯಾಯಾಂಗಕ್ಕೆ ನೇರವಾಗಿ ಮುಜುಗರವನ್ನುಂಟು ಮಾಡುತ್ತಿವೆ ಎಂದು ಸರಕಾರವನ್ನು ಎಚ್ಚರಿಸಿದ್ದಾರೆ.

ಚಿತ್ರ ಕೃಪೆ: ನ್ಯೂಸ್‌ಜಿಜ್