samachara
www.samachara.com
ಮುದ್ರಾ ಯೋಜನೆಯಲ್ಲೇ 11 ಸಾವಿರ ಕೋಟಿ ‘ಬ್ಯಾಡ್ ಲೋನ್‌’; ಎಚ್ಚರಿಸಿದ ಆರ್‌ಬಿಐ
ಸುದ್ದಿ ಸಾರ

ಮುದ್ರಾ ಯೋಜನೆಯಲ್ಲೇ 11 ಸಾವಿರ ಕೋಟಿ ‘ಬ್ಯಾಡ್ ಲೋನ್‌’; ಎಚ್ಚರಿಸಿದ ಆರ್‌ಬಿಐ

ಮುದ್ರಾ ಯೋಜನೆಯಡಿ ವಿತರಣೆಯಾಗುವ ಸಾಲಕ್ಕೂ ಕಡಿವಾಣ ಅಗತ್ಯ ಎಂದು ಆರ್‌ಬಿಐ ಕೇಂದ್ರ ಹಣಕಾಸು ಇಲಾಖೆಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಸರಕಾರದ ಯೋಜನೆಗಳ ಸಾಲ ವಿತರಣೆಯಲ್ಲೂ ಕಠಿಣ ಕ್ರಮಗಳನ್ನು ವಹಿಸುವ ಅಗತ್ಯವಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಹಣಕಾಸು ಇಲಾಖೆಗೆ ಎಚ್ಚರಿಕೆ ನೀಡಿದೆ. ಮುದ್ರಾ ಯೋಜನೆಯಲ್ಲಿ ಬಾಕಿ ಉಳಿದಿರುವ ಸಾಲದ ಮೊತ್ತ ಹೆಚ್ಚಾಗುತ್ತಿರುವ ಬಗ್ಗೆ ಆರ್‌ಬಿಐ ಆತಂಕ ವ್ಯಕ್ತಪಡಿಸಿದೆ.

ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ 2015ರಲ್ಲಿ ಆರಂಭವಾದ ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ಯಡಿ 11 ಸಾವಿರ ಕೋಟಿ ರೂಪಾಯಿ ಮರು ಪಾವತಿಯಾಗದ ಸಾಲ ಬಾಕಿ ಉಳಿದಿದೆ ಎಂದು ಆರ್‌ಬಿಐ ಹೇಳಿದೆ.

ಮುದ್ರಾ ಯೋಜನೆಯ ಸಾಲ ವಿತರಣೆಯ ಮೇಲೆ ನಿಯಂತ್ರಣ ಹೇರದಿದ್ದರೆ ಇದು ದೊಡ್ಡ ಮಟ್ಟದಲ್ಲಿ ಮರುಪಾವತಿಯಾದ ಸಾಲವಾಗಿ (ಎನ್‌ಪಿಎ) ಬೆಳೆಯಲಿದೆ ಎಂದು ಆರ್‌ಬಿಐ ಹಣಕಾಸು ಸಚಿವಾಲಯಕ್ಕೆ ಎಚ್ಚರಿಕೆ ನೀಡಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

2017-18ನೇ ಸಾಲಿನಲ್ಲಿ ಮುದ್ರಾ ಯೋಜನೆಯಡಿ 2.53 ಲಕ್ಷ ಕೋಟಿ ರೂಪಾಯಿ ಸಾಲ ವಿತರಣೆಯಾಗಿದೆ. ಇದರಲ್ಲಿ ಶೇಕಡ 40ರಷ್ಟು ಮಹಿಳಾ ಉದ್ಯಮಿಗಳಿಗೆ ವಿತರಿಸಿದ್ದರೆ, ಶೇಕಡ 33ರಷ್ಟನ್ನು ಸಾಮಾಜಿಕ ಉದ್ಯಮ ವರ್ಗದಡಿ (ಸೋಶಿಷಲ್‌ ಕೆಟಗರಿ) ವಿತರಿಸಲಾಗಿದೆ. 2017-18ನೇ ಸಾಲಿನಲ್ಲಿ ಒಟ್ಟು 4.81 ಕೋಟಿ ಸಣ್ಣ ಉದ್ದಿಮೆದಾರರಿಗೆ ಮುದ್ರಾ ಯೋಜನೆಯಡಿ ಸಾಲ ವಿತರಣೆಯಾಗಿದೆ. ಮುದ್ರಾ ಯೋಜನೆಯಡಿ ಪಡೆಯುವ ಸಾಲಕ್ಕೆ ಶೇಕಡ 8ರಿಂದ 12ರಷ್ಟು ಬಡ್ಡಿ ವಿಧಿಸಲಾಗುತ್ತಿದೆ.

2015ರ ಏಪ್ರಿಲ್‌ 8ರಂದು ಜಾರಿಗೆ ಬಂದ ಮುದ್ರಾ ಯೋಜನೆಯಡಿ ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆದಾರರಿಗೆ ಸಾರ್ವಜನಿಕ ಬ್ಯಾಂಕ್‌ಗಳ ಮೂಲಕ ಗರಿಷ್ಠ 10 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತಿದೆ. 'ಶಿಶು' ವರ್ಗದಡಿ ಗರಿಷ್ಠ 50 ಸಾವಿರ ರೂಪಾಯಿ, 'ಕಿಶೋರ್' ವರ್ಗದಡಿ ಕನಿಷ್ಠ 50 ಸಾವಿರದಿಂದ ಗರಿಷ್ಠ 5 ಲಕ್ಷ ರೂಪಾಯಿ ಹಾಗೂ 'ತರುಣ್‌' ವರ್ಗದಡಿ ಕನಿಷ್ಠ 5 ಲಕ್ಷದಿಂದ ಗರಿಷ್ಠ 10 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತಿದೆ.

ದೊಡ್ಡ ಮೊತ್ತದ ಸಾಲ ವಿತರಣೆಯ ಹಾಗೂ ಮರುಪಾವತಿಯಾಗದ ಸಾಲಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ನೀಡಿರುವ ಈ ಎಚ್ಚರಿಕೆ ಮಹತ್ವದ್ದಾಗಿದೆ. 2016-17ರಲ್ಲಿ 1.80 ಲಕ್ಷ ಕೋಟಿ ಹಾಗೂ 2015-16ರಲ್ಲಿ 1.37 ಲಕ್ಷ ಕೋಟಿ ರೂಪಾಯಿ ಮುದ್ರಾ ಯೋಜನೆಯಿಂದ ವಿತರಣೆಯಾಗಿದೆ ಎಂದು ಸರಕಾರ ಹೇಳಿದೆ. ಈ ಪೈಕಿ 11 ಸಾವಿರ ಕೋಟಿ ಮರುಪಾವತಿಯಾಗದೆ ಇರುವುದು ಆತಂಕಕಾರಿ ಬೆಳವಣಿಗೆ ಎಂದು ಆರ್‌ಬಿಐ ತಿಳಿಸಿದೆ.