samachara
www.samachara.com
ರಾಷ್ಟ್ರ ವಿರೋಧಿ ಘೋಷಣೆ ಪ್ರಕರಣ; ಕನ್ಹಯ್ಯ ವಿರುದ್ಧ 1,200 ಪುಟಗಳ ಚಾರ್ಚ್‌ಶೀಟ್‌
ಸುದ್ದಿ ಸಾರ

ರಾಷ್ಟ್ರ ವಿರೋಧಿ ಘೋಷಣೆ ಪ್ರಕರಣ; ಕನ್ಹಯ್ಯ ವಿರುದ್ಧ 1,200 ಪುಟಗಳ ಚಾರ್ಚ್‌ಶೀಟ್‌

ದೇಶ ವಿರೋಧಿ ಘೋಷಣೆ ಪ್ರಕರಣದಲ್ಲಿ ಪಟಿಯಾಲ ಹೌಸ್‌ ಕೋರ್ಟ್‌ಗೆ ದೆಹಲಿ ಪೊಲೀಸರು ಸೋಮವಾರ 1,200 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ 3 ವರ್ಷಗಳ ಹಳೆಯ ಪ್ರಕರಣದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಸೇರಿದಂತೆ 8 ಜನರ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಕೆಯಾಗಿದೆ.

ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್‌ಗೆ 1,200 ಪುಟಗಳ ಚಾರ್ಜ್‌ಶೀಟ್‌ ಅನ್ನು ಪೊಲೀಸರು ಸೋಮವಾರ ಸಲ್ಲಿಸಿದ್ದಾರೆ. ಭಾರತದ ಸಂಸತ್ ಮೇಲೆ ದಾಳಿ ನಡೆಸಿದ ಆರೋಪ ಎದುರಿಸುತ್ತಿದ್ದ ಉಗ್ರ ಅಫ್ಜಲ್ ಗುರುನನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ 2016ರಲ್ಲಿ ಜೆಎನ್‌ಯು ಆವರಣದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಅಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಗಂಭೀರ ಆರೋಪ ಕನ್ಹಯ್ಯ ಮೇಲಿದೆ.

ಕನ್ಹಯ್ಯ ಸೇರಿದಂತೆ 8 ಮಂದಿ ವಿದ್ಯಾರ್ಥಿಗಳು ಆ ಕಾರ್ಯಕ್ರಮದಲ್ಲಿ ರಾಷ್ಟ್ರವಿರೋಧಿ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆಂಬ ಆರೋಪದ ಮೇಲೆ ಕನ್ಹಯ್ಯ ಮತ್ತು ಇತರೆ 7 ಜನ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. 3 ವರ್ಷಗಳ ಕಾಲ ಈ ಪ್ರಕರಣದ ವಿಚಾರಣೆ ನಡೆಸಿರುವ ಪೊಲೀಸರು ಈಗ ನ್ಯಾಯಾಲಯಕ್ಕೆ ಚಾರ್ಚ್‌ಶೀಟ್ ಸಲ್ಲಿಸಿದ್ದಾರೆ.

“ಕಮ್ಯುನಿಸ್ಟ್ ಪಕ್ಷದ ನಾಯಕ ಡಿ. ರಾಜ ಅವರ ಪುತ್ರಿ ಸೇರಿದಂತೆ ದೋಷಾರೋಪ ಪಟ್ಟಿಯಲ್ಲಿ 36 ಜನರ ವಿರುದ್ಧ ಆರೋಪ ಮಾಡಲಾಗಿದೆ. ಇವರು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ್ದಕ್ಕೆ ಪೊಲೀಸರ ಬಳಿ ಸಾಕಷ್ಟು ಸಾಕ್ಷ್ಯಗಳಿವೆ. ಅಲ್ಲದೆ, ಇದನ್ನು ಕಂಡ ಪ್ರತ್ಯಕ್ಷದರ್ಶಿಗಳು ಇದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆಯ ತನಿಖೆಗಾಗಿ ಪೊಲೀಸರ ಒಂದು ತಂಡ ಬೇರೆ ರಾಜ್ಯಗಳಿಗೂ ಭೇಟಿ ನೀಡಿ ತನಿಖೆ ನಡೆಸಿತ್ತು” ಎಂದು ದೆಹಲಿಯ ಪೊಲೀಸ್‌ ಕಮಿಷನರ್ ಅಮೂಲ್ಯ ಪಟ್ನಾಯಕ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ಹಯ್ಯ, “ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವುದು ನಿಜವೇ ಆಗಿದ್ದರೆ, ದೆಹಲಿ ಪೊಲೀಸ್ ಕಮಿಷನರ್ ಹಾಗೂ ಪ್ರಧಾನಿ ಮೋದಿ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ಮೂರು ವರ್ಷಗಳ ನಂತರ ಸರಿಯಾಗಿ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಈ ಪ್ರಕರಣದ ಚಾರ್ಚ್‌ಶೀಟ್‌ ಸಲ್ಲಿಸಿರುವುದೇ ಈ ಪ್ರಕರಣ ರಾಜಕೀಯ ಪ್ರೇರಿತ ಎಂಬುದಕ್ಕೆ ಸಾಕ್ಷಿ. ಆದರೆ ಭಾರತೀಯ ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ” ಎಂದಿದ್ದಾರೆ.