samachara
www.samachara.com
ಬುಲಂದ್‌ಶಹರ್‌ ಗಲಭೆ; ಏಳು ಮಂದಿ ವಿರುದ್ಧ ಎನ್‌ಎಸ್‌ಎ ಕಾಯ್ದೆಯಡಿ ಪ್ರಕರಣ ದಾಖಲು
ಸುದ್ದಿ ಸಾರ

ಬುಲಂದ್‌ಶಹರ್‌ ಗಲಭೆ; ಏಳು ಮಂದಿ ವಿರುದ್ಧ ಎನ್‌ಎಸ್‌ಎ ಕಾಯ್ದೆಯಡಿ ಪ್ರಕರಣ ದಾಖಲು

ಉತ್ತರ ಪ್ರದೇಶದ ಇತ್ತೀಚಿನ ಗೋ ಗಲಭೆಯಾದ ಬುಲಂದ್‌ಶಹರ್ ಪ್ರಕರಣದಲ್ಲಿ ಬಂಧಿತರಾಗಿರುವ 7 ಮಂದಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬುಲಂದ್‌ಶಹರ್‌ ಪ್ರಕರಣದಲ್ಲಿ ಬಂಧಿತರಾಗಿರುವ 7 ಮಂದಿ ಆರೋಪಿಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಪ್ರಕರಣ ದಾಖಲಿಸಿದ್ದಾರೆ.

2018ರ ಡಿಸೆಂಬರ್‌ 3ರಂದು ಬುಲಂದ್‌ಷರ್‌ನಲ್ಲಿ ನಡೆದಿದ್ದ ಗಲಭೆಯಲ್ಲಿ ಪೊಲೀಸ್‌ ಇನ್‌ಸ್ಟೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ ಮತ್ತು ಸುಮಿತ್‌ ಕುಮಾರ್‌ ಎಂಬುವರು ಮೃತಪಟ್ಟಿದ್ದರು. ಈ ಗಲಭೆ ಸಂಬಂಧ ಈವರೆಗೆ ಬಂಧಿತರಾಗಿರುವ 7 ಮಂದಿಯ ವಿರುದ್ಧ ಎನ್‌ಎಸ್‌ಎ ಅಡಿ ಪ್ರಕರಣ ದಾಖಲಾಗಿದೆ.

Also read: ಅಖ್ಲಾಕ್‌ ಪ್ರಕರಣದ ತನಿಖಾಧಿಕಾರಿ ಹತ್ಯೆ; ಕೊಲೆ ಹಿಂದಿರುವುದು ಬಜರಂಗ ದಳ?

ಪ್ರಕರಣಕ್ಕೆ ಸಂಬಂಧಿಸಿದಂತೆ ಸೈನ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗಿದೆ. ಗಲಭೆಯಲ್ಲಿ ಭಾಗಿಯಾಗಿದ್ದ 80 ಜನರ ಗುಂಪಿನ ವಿರುದ್ಧ ಒಂದು ಎಫ್‌ಐಆರ್ ದಾಖಲಿಸಲಾಗಿದೆ. 80 ಮಂದಿಯ ಪೈಕಿ 27 ಜನರ ಹೆಸರು ಉಲ್ಲೇಖಿಸಲಾಗಿದೆ. ಗೋ ಹತ್ಯೆ ಆರೋಪದ ಮೇಲೆ ಮತ್ತೊಂದು ಎಫ್‌ಐಆರ್‌ ದಾಖಲಿಸಲಾಗಿದೆ.

ಎನ್‌ಎಸ್‌ಎ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದನ್ನು ಜಿಲ್ಲಾಧಿಕಾರಿ ಅನೂಜ್‌ ಝಾ ಖಚಿತ ಪಡಿಸಿದ್ದಾರೆ. 80 ಮಂದಿಯ ಗುಂಪಿನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಭಜರಂಗ ದಳದ ಸ್ಥಳೀಯ ಮುಖಂಡ ಯೋಗೇಶ್‌ ರಾಜ್‌ ಹೆಸರೂ ಇದೆ. ಆದರೆ, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. ಪ್ರಕರಣದಲ್ಲಿ ಭಾರತೀಯ ಸೇನೆಯ ಯೋಧ ಜಿತೇಂದ್ರ ಮಲಿಕ್‌ ಎಂಬಾತನ ಪಾತ್ರವಿರುವ ಆರೋಪವಿದ್ದು, ಸದ್ಯ ಆತ ಪೊಲೀಸರ ವಶದಲ್ಲಿದ್ದಾನೆ.