ಬಾಲಿವುಡ್‌ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಸುದ್ದಿ ಸಾರ

ಬಾಲಿವುಡ್‌ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ವಿರುದ್ಧ ಅವರ ಸಹೋದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಬಾಲಿವುಡ್‌ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಹಿರಾನಿ ನಿರ್ದೇಶನದ ‘ಸಂಜು’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಸಂದರ್ಭದಲ್ಲಿ ಹಿರಾನಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹಿರಾನಿಯೊಂದಿಗೆ ಕೆಲಸ ಮಾಡಿದ್ದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

2018ರ ಮಾರ್ಚ್‌ ಮತ್ತು ಸೆಪ್ಟೆಂಬರ್‌ ನಡುವೆ ಹಿರಾನಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆ ಹೇಳಿಕೊಂಡಿರುವುದನ್ನು ‘ಹಫಿಂಗ್ಟನ್‌ ಪೋಸ್ಟ್‌’ ವರದಿ ಮಾಡಿದೆ. ಆದರೆ, ಹಿರಾನಿ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

ರಾಜ್‌ಕುಮಾರ್‌ ಹಿರಾನಿ ಲೈಂಗಿಕ ಕಿರುಕುಳದ ಬಗ್ಗೆ ಚಿತ್ರದ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಹಾಗೂ ಅವರ ಪತ್ನಿ ಅನುಪಮಾ ಚೋಪ್ರಾಗೆ ಇಮೇಲ್‌ ಮೂಲಕ ತಿಳಿಸಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾರೆ.

ತನಗಿಂತ ಸುಮಾರು 30 ವರ್ಷ ಹಿರಿಯರಾದ ಹಿರಾನಿ ಕಿರುಕುಳವನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಗಂಭೀರ ಕಾಯಿಲೆಯಿಂದ ಬಳಸುತ್ತಿರುವ ತಂದೆಯ ಚಿಕಿತ್ಸೆಗಾಗಿ ತಾನು ದುಡಿಯಲೇಬೇಕಿತ್ತು. ಹೀಗಾಗಿ ಹಿರಾನಿ ಕಿರುಕುಳದ ಕಾರಣಕ್ಕೆ ಕೆಲಸ ಬಿಡುವ ಸ್ಥಿತಿಯಲ್ಲಿ ತಾನಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.