‘ನಾನು ಮಹಿಳಾ ವಿರೋಧಿಯಲ್ಲ, ನಿಮ್ಮ ನೀತಿಗಳನ್ನು ನನ್ನ ಮೇಲೆ ಹೇರಬೇಡಿ’: ರಾಹುಲ್‌ ಗಾಂಧಿ
ಸುದ್ದಿ ಸಾರ

‘ನಾನು ಮಹಿಳಾ ವಿರೋಧಿಯಲ್ಲ, ನಿಮ್ಮ ನೀತಿಗಳನ್ನು ನನ್ನ ಮೇಲೆ ಹೇರಬೇಡಿ’: ರಾಹುಲ್‌ ಗಾಂಧಿ

“ಮೋದಿ ಸಂಸತ್‌ನಲ್ಲಿ ಉತ್ತರಿಸದೆ ಮತ್ತೊಬ್ಬ ವ್ಯಕ್ತಿಯ ಹಿಂದೆ ಅವಿತುಕೊಳ್ಳುತ್ತಿದ್ದಾರೆ. ಆ ವ್ಯಕ್ತಿ ಮಹಿಳೆಯಾಗಿದ್ದಾರೆ, ಅವರು ಪುರುಷರಾಗಿದ್ದರೂ ಇದೇ ಮಾತನ್ನು ಹೇಳುತ್ತಿದ್ದೆ...

“ನಾನು ಮಹಿಳಾ ವಿರೋಧಿಯಲ್ಲ. ನಿಮ್ಮ ಮಹಿಳಾ ವಿರೋಧಿ ನೀತಿಯನ್ನು ನನ್ನ ಮೇಲೆ ಹೇರಬೇಡಿ. ನನಗೆ ಬೇಕಿದಿದ್ದು ರಫೇಲ್‌ ಡೀಲ್‌ ಬಗ್ಗೆ ಪ್ರಧಾನಮಂತ್ರಿಗಳ ಉತ್ತರ ಅಷ್ಟೆ” ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ರಫೇಲ್‌ ಡೀಲ್‌ ಕುರಿತಂತೆ ಪ್ರಧಾನಿ ಮೋದಿಯನ್ನು ಟೀಕಿಸುವ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಬಗ್ಗೆ ಉಲ್ಲೇಖಿಸಿದ್ದ ರಾಹುಲ್‌, ಪ್ರಧಾನಿ ತಾವು ಸಂಸತ್‌ನಲ್ಲಿ ಉತ್ತರಿಸಲಾಗದೆ ಮಹಿಳೆಯೊಬ್ಬರ ಹಿಂದೆ ಬಚ್ಚಿಟ್ಟುಕೊಳ್ಳುತ್ತಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದರು.

ಈ ಬಗ್ಗೆ ದುಬೈನಲ್ಲಿ ಸ್ಪಷ್ಟನೆ ನೀಡಿರುವ ರಾಹುಲ್‌, “ರಫೇಲ್‌ ಹಗರಣದ ಬಗ್ಗೆ ಪ್ರಧಾನಿ ಮೋದಿ ಸಂಸತ್‌ನಲ್ಲಿ ಉತ್ತರಿಸಬೇಕಿತ್ತು. ಇದೇ ನಮ್ಮ ಒತ್ತಾಯವಾಗಿತ್ತು. ನನ್ನ ಈ ನಿಲುವಿಗೆ ನಾನು ಈಗಲೂ ಬದ್ಧ” ಎಂದು ಹೇಳಿದ್ದಾರೆ.

“ಅನಿಲ್‌ ಅಂಬಾನಿಗೆ 30 ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆಯಲು ಮೋದಿ ಸಹಾಯ ಮಾಡಿದ್ದಾರೆ. ಸಂಸತ್ತು ಮೋದಿಯಿಂದ ಈ ಬಗ್ಗೆ ಸ್ಪಷ್ಟನೆ ಬಯಸುತ್ತಿದೆ. ಆದರೆ, ಮೋದಿ ಸಂಸತ್‌ನಲ್ಲಿ ಉತ್ತರಿಸದೆ ಮತ್ತೊಬ್ಬ ವ್ಯಕ್ತಿಯ ಹಿಂದೆ ಅವಿತುಕೊಳ್ಳುತ್ತಿದ್ದಾರೆ. ಆ ವ್ಯಕ್ತಿ ಮಹಿಳೆಯಾಗಿದ್ದಾರೆ, ಅವರು ಪುರುಷರಾಗಿದ್ದರೂ ನಾನು ಇದೇ ಮಾತನ್ನು ಹೇಳುತ್ತಿದ್ದೆ” ಎಂದಿದ್ದಾರೆ.

ಕಳೆದ ಬುಧವಾರ ರಾಜಸ್ತಾನದ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್‌, “56 ಇಂಚಿನ ಎದೆಯ ಸೇವಕ ಒಬ್ಬ ಮಹಿಳೆಯ ಬಳಿಗೆ ಓಡಿ ಹೋಗಿ, ‘ಸೀತಾರಾಮನ್ ಜಿ, ನನ್ನನ್ನು ನಾನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನನ್ನು ರಕ್ಷಿಸಿ’ ಎಂದು ಮೊರೆ ಇಟ್ಟಿದ್ದರು. ಸದನದಲ್ಲಿ 2.30 ಗಂಟೆಗಳ ಕಾಲ ಮಾತನಾಡಿದರೂ ಆ ಮಹಿಳೆಯಿಂದ ಆ ಸೇವಕನನ್ನು ರಕ್ಷಿಸಲು ಆಗಲಿಲ್ಲ. ಹೌದು ಅಥವಾ ಇಲ್ಲ ಎಂಬ ಉತ್ತರದ ನೇರವಾದ ಪ್ರಶ್ನೆಯನ್ನು ನಾನು ಕೇಳಿದ್ದೆ. ಆದರೆ, ಆ ಮಹಿಳೆಯಿಂದ ಅದಕ್ಕೆ ಉತ್ತರಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದರು.

ರಾಹುಲ್‌ ಗಾಂಧಿ ಈ ಹೇಳಿಕೆಯ ಮೂಲಕ ದೇಶದ ಮಹಿಳೆಯರನ್ನು ಅಪಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಅಲ್ಲದೆ, ರಾಷ್ಟ್ರೀಯ ಮಹಿಳಾ ಆಯೋಗದ ಈ ಬಗ್ಗೆ ವಿವರಣೆ ನೀಡುವಂತೆ ರಾಹುಲ್‌ಗೆ ನೋಟಿಸ್‌ ಜಾರಿ ಮಾಡಿತ್ತು.

Also read: ನಿರ್ಮಲಾ ಸೀತಾರಾಮನ್‌ ಬಗ್ಗೆ ವ್ಯಂಗ್ಯ; ರಾಹುಲ್‌ಗೆ ಮಹಿಳಾ ಆಯೋಗದ ನೋಟಿಸ್‌