ಗುಜರಾತ್ ನಕಲಿ ಎನ್‌ಕೌಂಟರ್‌ಗಳ ಅಸಲಿ ವರದಿ; ಸಾರ್ವಜನಿಕಗೊಳಿಸಲು ಸುಪ್ರಿಂ ಆದೇಶ
ಸುದ್ದಿ ಸಾರ

ಗುಜರಾತ್ ನಕಲಿ ಎನ್‌ಕೌಂಟರ್‌ಗಳ ಅಸಲಿ ವರದಿ; ಸಾರ್ವಜನಿಕಗೊಳಿಸಲು ಸುಪ್ರಿಂ ಆದೇಶ

ಗುಜರಾತ್ ನಲ್ಲಿ 2004 ರಿಂದ 2006ರ ಅವಧಿಯಲ್ಲಿ 17 ಎನ್‌ಕೌಂಟರ್ ನಡೆದಿದ್ದವು. ಇದೀಗ ಇವೆಲ್ಲವೂ ನಕಲಿ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹೆಚ್. ಎಸ್. ಬೇಡಿ ವರದಿ ನೀಡಿದ್ದಾರೆ.

ಗುಜರಾತ್‌ನಲ್ಲಿ 2002ರಲ್ಲಿ ನಡೆದಿದ್ದ ನಕಲಿ ಎನ್‌ಕೌಂಟರ್‌ಗೆ ಬಲಿಯಾಗಿದ್ದ ಸಮೀರ್ ಖಾನ್ ಹತ್ಯೆ ಕುರಿತು ನಿವೃತ್ತ ನ್ಯಾಯಮೂರ್ತಿ ಹೆಚ್‌. ಎಸ್‌. ಬೇಡಿ ನೀಡಿರುವ ವರದಿಯನ್ನು ಸಾವರ್ಜನಿಕಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಆದೇಶ ನೀಡಿದೆ.

ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ಕಾರಣ ನೀಡಿ ಗುಜರಾತ್ ಪೊಲೀಸರು 2002ರಲ್ಲಿ ಸಮೀರ್ ಎಂಬವನನ್ನು ಎನ್‌ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್‌. ಎಸ್. ಬೇಡಿ ಇದು ಪೊಲೀಸ್ ಇಲಾಖೆಯ ನಕಲಿ ಎನ್‌ಕೌಂಟರ್ ಎಂದು 2018ರಲ್ಲಿ ವರದಿ ನೀಡಿದ್ದರು. ಅಲ್ಲದೆ 2004 ರಿಂದ 2006ರ ಅವಧಿಯಲ್ಲಿ 17 ಎನ್‌ಕೌಂಟರ್ ನಡೆದಿದ್ದು ಈ ಎಲ್ಲಾ ಎನ್‌ಕೌಂಟರ್‌ಗಳು ನಕಲಿ ಎಂದು ವರದಿ ನೀಡಿದ್ದರು.

ಏನಿದು ಪ್ರಕರಣ?

ಸಮೀರ್ ಖಾನ್ ಎಂಬವನನು 2002ರಲ್ಲಿ ಪೊಲೀಸರು ಎನ್‌ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡಿದ್ದರು. ಈತನನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾದ ಜೈಷ್-ಇ-ಮಹಮ್ಮದ್ ಕಳುಹಿಸಿಕೊಟ್ಟಿದ್ದು, ಈತ ಗುಜರಾತಿನ ಅಕ್ಷರಧಾಮ ದಾಳಿಯ ನಂತರ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಎನ್‌ಕೌಂಟರ್ ವರದಿ ಬರೆದು ಪ್ರಕರಣವನ್ನು ಇತ್ಯರ್ಥಗೊಳಿಸಿದ್ದರು.

ಆದರೆ ನರೇಂದ್ರ ಮೊದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಗುಮಾನಿಯ ಮೇಲೆ 2002ರಲ್ಲಿ ಗುಜರಾತ್ ಪೊಲೀಸರು ಎನ್‌ಕೌಂಟರ್ ಮಾಡಿದ್ದ ಯುವಕ ಸಮೀರ್ ಖಾನ್ ಅಮಾಯಯನಾಗಿದ್ದು, ಇದು ಪೊಲೀಸರ ನಕಲಿ ಎನ್ ಕೌಂಟರ್ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಹೆಚ್.ಎಸ್.ಬೇಡಿ 2018 ರಲ್ಲಿ ವರದಿ ಸಲ್ಲಿಸಿದ್ದರು.

ಜತೆಗೆ, ಗುಜರಾತ್‌ನಲ್ಲಿ ನಡೆದ 17 ನಕಲಿ ಎನ್‌ಕೌಂಟರ್‌ಗಳ ಕುರಿತು 2018 ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಬೇಡಿ ಒಟ್ಟು 229 ಪುಟಗಳ ವರದಿ ಸಲ್ಲಿಸಿದ್ದರು. ಈ ಪೈಕಿ ಸಮೀರ್ ಖಾನ್ ಹತ್ಯೆ ಪ್ರಕರಣ ಕೊನೆಯದು.

17 ನಕಲಿ ಎನ್‌ಕೌಂಟರ್ ಪ್ರಕರಣಗಳ ಪೈಕಿ ಇನ್ನೂ ಮೂರು ಪ್ರಕರಣದಲ್ಲಿ ಬೇಡಿ ಹೆಚ್ಚಿನ ತನಿಖೆ ನಡೆಸಲು ಕೋರಿದ್ದಾರೆ. ಅಲ್ಲದೆ ಹತ್ಯೆಗೀಡಾದವರ ಕುಟುಂಬಕ್ಕೆ 10 ರಿಂದ 14 ಲಕ್ಷ ಪರಿಹಾರ ನೀಡಬೇಕು ಎಂದೂ ಉಲ್ಲೇಖಿಸಿದ್ದರು.

ನಕಲಿ ಎನ್‌ಕೌಂಟರ್ ಕುರಿತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹೆಚ್‌.ಎಸ್.ಬೇಡಿ ಸುಧೀರ್ಘ ತನಿಖೆ ನಡೆಸಿ ವರದಿ ನೀಡಿದ್ದರು. ಆದರೆ ನ್ಯಾಯಾಲಯ ಈ ಪ್ರಕರಣದ ಕುರಿತ ವಿಚಾರಣೆ ಆರಂಭಿಸಿರಲಿಲ್ಲ. ವರದಿಯನ್ನು ಮುಚ್ಚಿದ್ದ ಲಕೋಟೆಯಲ್ಲಿ ನ್ಯಾಯಾಲಯದ ನೆಲ ಮಾಳಿಗೆಯಲ್ಲಿ ಇಡಲಾಗಿತ್ತು. ಆದರೆ ಇದೀಗ ಈ ವರದಿಯಲ್ಲಿ ಸಾರ್ವಜನಿಕ ವಲಯದಲ್ಲಿ ಪ್ರಕಟಿಸಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಸಮ್ಮಿತಿ ಸೂಚಿಸಿದೆ. ಈ ಎಲ್ಲಾ ನಕಲಿ ಎನ್‌ಕೌಂಟರ್‌ಗಳೂ 2002ರಿಂದ 2006ರ ನಡುವೆ ಗುಹರಾತ್‌ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದಿದ್ದವು.

ಪೊಲೀಸ್ ವರದಿಯಲ್ಲಿ ಏನಿತ್ತು?

ಸಮೀರ್ ಖಾನ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ 2002ರಲ್ಲಿ ವರದಿ ನೀಡಿದ್ದ ಪೊಲೀಸರು "1996ರಲ್ಲಿ ಸಮೀರ್ ಖಾನ್ ಚೈನ್ ಸ್ನಾಚಿಂಗ್ ಪ್ರಕರಣದಲ್ಲಿ ಆತನ ಬಂಧನಕ್ಕೆ ಮುಂದಾದ ಪೊಲೀಸ್ ಓರ್ವನನ್ನು ಕೊಂದು, ನಕಲಿ ಪಾಸ್‌ಪೋರ್ಟ್ ಬಳಸಿಕೊಂಡು ಭೋಪಾಲ್‌ನಿಂದ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಪಾಕಿಸ್ತಾನದ ಕರಾಚಿ, ಲಾಹೋರ್‌ನಲ್ಲಿ ಬಂದೂಕು ತರಬೇತಿ ಪಡೆದ ಸಮೀರ್ ಖಾನ್ ನೇಪಾಳದ ಮೂಲಕ ಭಾರತ ಪ್ರವೇಶಿಸಿದ್ದ ಎಂದು ಕೇಂದ್ರ ಗೂಢಾಚಾರಿ ಇಲಾಖೆ ಮಾಹಿತಿ ನೀಡಿತ್ತು. ಭಾರತಕ್ಕೆ ಬಂದ ಸಮೀರ್ ನರೇಂದ್ರ ಮೋದಿಯನ್ನು ಕೊಲ್ಲುವ ಸಲುವಾಗಿ ಮುಂಬೈ ರಾಜ್‌ಕೋಟ್ ಹಾಗೂ ಭೋಪಾಲ್‌ನಲ್ಲಿ ಭೂಗತನಾಗಿದ್ದ" ಎಂದು ವರದಿ ನೀಡಿತ್ತು.

ಈ ವರದಿಯನ್ನು ಅಲ್ಲಗೆಳೆದಿರುವ ನಿವೃತ್ತ ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿ ಹೆಚ್. ಎಸ್. ಬೇಡಿ "ಪೊಲೀಸ್ ವರದಿಯಲ್ಲಿ ಎನ್‌ ಕೌಂಟರ್ ಎನ್ನಲು ಯಾವುದೇ ಪ್ರಬಲ ಸಾಕ್ಷ್ಯಗಳಿಲ್ಲ. ಇದೊಂದು ಅಪ್ಪಟ ನಕಲಿ ಎನ್‌ಕೌಂಟರ್" ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲದೆ "ಸಮೀರ್ ಖಾನ್ ಅವರ ತಂದೆ ಸರ್ಫರಾಜ್ ಖಾನ್ 30 ವರ್ಷಗಳಿಂದ ಅಹಮದಾಬಾದ್ ಮುನಿಸಿಪಲ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಈ ಪ್ರಕರಣದಿಂದ ಆತ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ. ಬದುಕಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ಹೀಗಾಗಿ ಆತನಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು" ಎಂದು ಹೇಳಿದ್ದರು.