ಕ್ರಿಶ್ಚಿಯನ್ ಟ್ರಂಪ್ vs ಹಿಂದೂ ತುಳಸಿ; ಅಮೆರಿಕಾ ರಾಜಕಾರಣದಲ್ಲೂ ಧರ್ಮದ ನಂಟು!
ಸುದ್ದಿ ಸಾರ

ಕ್ರಿಶ್ಚಿಯನ್ ಟ್ರಂಪ್ vs ಹಿಂದೂ ತುಳಸಿ; ಅಮೆರಿಕಾ ರಾಜಕಾರಣದಲ್ಲೂ ಧರ್ಮದ ನಂಟು!

ಮುಂದಿನ ವರ್ಷ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ವಿರುದ್ಧ ಸ್ಪರ್ಧಿಸುವ ಇಂಗಿತವನ್ನು ತುಳಸಿ ವ್ಯಕ್ತಪಡಿಸಿದ್ದಾರೆ.

ತುಳಸಿ ಗ್ಯಾಬರ್ಡ್‌ 2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಸೆನಟರ್‌ ಎಲಿಜಬೆತ್ ವಾರನ್‌ ಬಳಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿರುವ ಡೆಮಕ್ರಟಿಕ್‌ ಪಕ್ಷದ ಎರಡನೇ ಮಹಿಳೆ ತುಳಸಿ.

ಭಾರತೀಯ ಸಂಜಾತೆ ಕಮಲಾ ಹ್ಯಾರಿಸ್‌ ಸೇರಿದಂತೆ ಡೆಮಕ್ರಟಿಕ್‌ ಪಕ್ಷದ 12ಕ್ಕೂ ಹೆಚ್ಚು ಮಂದಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಮುಂದಿನ ವರ್ಷ ಚುನಾವಣೆಯಲ್ಲಿ ಸ್ಪರ್ಧೆ ಘೋಷಿಸುವ ನಿರೀಕ್ಷೆ ಇದೆ.

37 ವರ್ಷದ ತುಳಸಿ ಹವೈನಿಂದ ನಾಲ್ಕು ಅವಧಿಗೆ ಡೆಮಕ್ರಟಿಕ್‌ ಪಕ್ಷದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ವಿರುದ್ಧ ಸ್ಪರ್ಧಿಸುವ ಇಂಗಿತವನ್ನು ತುಳಸಿ ವ್ಯಕ್ತಪಡಿಸಿದ್ದಾರೆ.

ಸಿಎನ್‌ಎನ್‌ ಸುದ್ದಿವಾಹಿನಿಯೊಂದಿಗೆ ಶುಕ್ರವಾರ ಮಾತನಾಡಿರುವ ತುಳಸಿ, “ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ನಿರ್ಧರಿಸಿದ್ದೇನೆ. ಮುಂದಿನ ವಾರದೊಳಗೆ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದೇನೆ” ಎಂದಿದ್ದಾರೆ.

ತುಳಸಿ ತಂದೆ ಗೆರಾಲ್ಡ್‌ ಮೈಕಲ್‌ ಗ್ಯಾಬರ್ಡ್‌, ತಾಯಿ ಕ್ಯಾರೋಲ್‌ ಗ್ಯಾಬರ್ಡ್‌. ಇಂಡಿಯಾನದಲ್ಲಿ ಜನಿಸಿದ್ದ ಹಿಂದೂ ಧರ್ಮದ ಕ್ಯಾರೋಲ್‌ ಅವರಿಗೆ ಹಿಂದೂ ಧರ್ಮದ ಬಗ್ಗೆ ಒಲವಿತ್ತು. ಹಿಂದೂ ಧರ್ಮ ಅನುಸರಿಸುತ್ತಿದ್ದ ತಾಯಿಯ ಪ್ರಭಾವದಿಂದ ತುಳಸಿ ಯೌವನದಲ್ಲೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ತುಳಸಿ ಇರಾಕ್‌ ಯುದ್ಧದಲ್ಲಿ ಅಮೆರಿಕ ಸೇನೆಯ ವೈದ್ಯಕೀಯ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.

ಅಧ್ಯಕ್ಷ ಹುದ್ದೆಗೆ ಮರುಆಯ್ಕೆ ಬಯಸಿರುವ ಟ್ರಂಪ್ 2020ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಟ್ರಂಪ್ ವಿರುದ್ಧ ತುಳಸಿ ಜಯ ಸಾಧಿಸಿದರೆ ಅಮೆರಿಕ ಅಧ್ಯಕ್ಷ ಹುದ್ದೆಗೇರಿದ ಅತ್ಯಂತ ಕಿರಿಯ ಮಹಿಳೆ ಎನಿಸಲಿದ್ದಾರೆ.

“ಅಧ್ಯಕ್ಷೆಯಾಗಿ ಆಯ್ಕೆಯಾದರೆ ಅಮೆರಿಕದ ಜನರಿಗೆ ಸಾಕಷ್ಟು ಕೆಲಸ ಮಾಡಲು ಅವಕಾಶವಿದೆ. ಅಮೆರಿಕದ ಜನರ ಹಲವು ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಬಯಸಿದ್ದೇನೆ” ಎಂದಿದ್ದಾರೆ ತುಳಸಿ.

ಆರೋಗ್ಯ ಸೇವೆಯ ಸುಧಾರಣೆ, ಕ್ರಿಮಿನಲ್‌ ನ್ಯಾಯ ಸುಧಾರಣೆ, ತಾಪಮಾನ ಬದಲಾವಣೆಯಂಥ ಹಲವು ಸವಾಲುಗಳು ಅಮೆರಿಕದಲ್ಲಿವೆ ಎಂದಿರುವ ತುಳಸಿ ಇವುಗಳನ್ನು ಪರಿಹರಿಸುವ ಸಲುವಾಗಿ ತಾನು ಅಧ್ಯಕ್ಷೀಯ ಆಯ್ಕೆ ಬಯಸಿದ್ದೇನೆ ಎಂದಿದ್ದಾರೆ.

“ಈ ಸಮಸ್ಯೆಗಳ ಜತೆಗೆ ಯುದ್ಧ ಮತ್ತು ಶಾಂತಿ ಎಂಬ ಮುಖ್ಯ ವಿಷಯವೂ ನಮ್ಮ ಮುಂದಿದೆ. ಈ ಬಗ್ಗೆ ಆಳವಾಗಿ ಅಭ್ಯಸಿಸಿ ಚುನಾವಣೆ ಸ್ಪರ್ಧೆಯ ಅಧಿಕೃತ ಘೋಷಣೆಯಾದ ಬಳಿಕ ಮಾತನಾಡುತ್ತೇನೆ” ಎಂದಿದ್ದಾರೆ.