samachara
www.samachara.com
‘ಮಹಾಮೈತ್ರಿ ವಿಫಲ ಪ್ರಯೋಗ, ಕರ್ನಾಟಕದಲ್ಲಿ ಟ್ರೈಲರ್‌ ಕಾಣುತ್ತಿದೆ’ ಎಂದ ಪ್ರಧಾನಿ ಮೋದಿ
ಸುದ್ದಿ ಸಾರ

‘ಮಹಾಮೈತ್ರಿ ವಿಫಲ ಪ್ರಯೋಗ, ಕರ್ನಾಟಕದಲ್ಲಿ ಟ್ರೈಲರ್‌ ಕಾಣುತ್ತಿದೆ’ ಎಂದ ಪ್ರಧಾನಿ ಮೋದಿ

“ಬಿಜೆಪಿಗೆ ಹೆದರಿರುವ ಪಕ್ಷಗಳೆಲ್ಲಾ ಸೇರಿ ಮಹಾಮೈತ್ರಿ ಮಾಡಿಕೊಳ್ಳಲು ಹೊರಟಿವೆ. ಈ ಮಹಾಮೈತ್ರಿಯ ಮೂಲಕ ಬಿಜೆಪಿಯನ್ನು ಸೋಲಿಸಬಹುದು ಎಂಬುದು ಹುಸಿ ಪ್ರಯತ್ನ...

“ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಬಿಜೆಪಿ ವಿರೋಧಿ ಮೈತ್ರಿಕೂಟಗಳು ‘ಹುಸಿ ಪ್ರಯೋಗ’ ನಡೆಸುತ್ತಿವೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕುಹಕವಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ ಮೋದಿ, “ವಿಪಕ್ಷಗಳು ಭ್ರಷ್ಟಚಾರದ ‘ಮಜ್ಬೂರ್‌’ (ದುರ್ಬಲ) ಸರಕಾರ ರಚನೆಗೆ ಹೊರಟಿವೆ. ಆದರೆ, ಬಿಜೆಪಿ ಎಲ್ಲಾ ವಲಯದ ಅಭಿವೃದ್ಧಿಯ ‘ಮಝ್ಬೂತ್‌’ (ಸುಭದ್ರ) ಸರಕಾರ ರಚಿಸಲಿದೆ” ಎಂದಿದ್ದಾರೆ.

“ದುರ್ಬಲ ಸರಕಾರ ರಚಿಸಲು ಅವರೆಲ್ಲರೂ ಒಂದಾಗಿದ್ದಾರೆ. ಅದಕ್ಕಾಗಿ ಮಹಾಮೈತ್ರಿ ಕೂಟ ರಚಿಸಿಕೊಂಡಿದ್ದಾರೆ. ಅವರಿಗೆ ಸುಭದ್ರ ಸರಕಾರ ಬೇಕಾಗಿಲ್ಲ. ಅವರಿಗೆ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ನಡೆಸಲು ಅನುಕೂಲವಾಗುವಂಥ ದುರ್ಬಲ ಸರಕಾರ ಬೇಕಾಗಿದೆ” ಎಂದಿದ್ದಾರೆ.

“ಭ್ರಷ್ಟಾಚಾರ ಸಂಸ್ಕೃತಿಯ ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನ್‌ ರಚಿಸಿಕೊಂಡು ಕಾಂಗ್ರೆಸ್‌ ಪಕ್ಷವನ್ನು ಮೈತ್ರಿಯಿಂದ ಹೊರಗಿಟ್ಟಿವೆ. ಬಿಜೆಪಿಗೆ ಹೆದರಿರುವ ಪಕ್ಷಗಳೆಲ್ಲಾ ಸೇರಿ ಮಹಾಮೈತ್ರಿ ಮಾಡಿಕೊಳ್ಳಲು ಹೊರಟಿವೆ. ಈ ಮಹಾಮೈತ್ರಿಯ ಮೂಲಕ ಬಿಜೆಪಿಯನ್ನು ಸೋಲಿಸಬಹುದು ಎಂಬುದು ಹುಸಿ ಪ್ರಯತ್ನ” ಎಂದು ಹೇಳಿದ್ದಾರೆ.

“ಕರ್ನಾಟಕದ ಮುಖ್ಯಮಂತ್ರಿ ತಾವು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿಲ್ಲ, ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ರಾಜಸ್ತಾನ, ಮಧ್ಯಪ್ರದೇಶಗಳಲ್ಲೂ ಸರಕಾರ ರಚಿಸಿರುವ ಪಕ್ಷಕ್ಕೆ ಬೆಂಬಲ ನೀಡಿರುವ ಪಕ್ಷಗಳ ಬೆದರಿಕೆ ಇದ್ದೇ ಇದೆ. ಇದು ಮಹಾಮೈತ್ರಿಯ ಟ್ರೈಲರ್‌” ಎಂದಿದ್ದಾರೆ ಮೋದಿ.