ಎಸ್‌ಪಿ- ಬಿಎಸ್‌ಪಿ ಜಂಟಿ ಹೋರಾಟ; ಮಹಾಮೈತ್ರಿಯಿಂದ ಕಾಂಗ್ರೆಸ್‌ ಬಹುತೇಕ ಹೊರಗೆ
ಸುದ್ದಿ ಸಾರ

ಎಸ್‌ಪಿ- ಬಿಎಸ್‌ಪಿ ಜಂಟಿ ಹೋರಾಟ; ಮಹಾಮೈತ್ರಿಯಿಂದ ಕಾಂಗ್ರೆಸ್‌ ಬಹುತೇಕ ಹೊರಗೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಸ್ವತಂತ್ರ ಸ್ಪರ್ಧೆಯೊಂದಿಗೆ ಎರಡು ಪ್ರಬಲ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟದ ಸೆಣೆಸಾಟ ನಡೆಯಲಿದೆ.

ಉತ್ತರ ಪ್ರದೇಶದಲ್ಲಿ ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸೇರಿ ರಚಿಸಲು ಹೊರಟಿರುವ ಮಹಾಮೈತ್ರಿಯಿಂದ ಕಾಂಗ್ರೆಸ್‌ ಹೊರಗುಳಿಯುವ ಸಾಧ್ಯತೆಗಳು ನಿಚ್ಚಳವಾಗಿವೆ.

ಶನಿವಾರ ಉಭಯ ಪಕ್ಷಗಳ ಮುಖಂಡರು ಜಂಟಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದು, ಮಹಾಮೈತ್ರಿ ಹಾಗೂ ಚುನಾವಣಾ ರೂಪುರೇಷೆಗಳ ಬಗ್ಗೆ ಮಾತನಾಡಲಿದ್ದಾರೆ. ಆದರೆ, ಈ ಪತ್ರಿಕಾಗೋಷ್ಠಿಗೂ ಮುನ್ನಾದಿನವಾದ ಶುಕ್ರವಾರ ಕನೂಜ್‌ನಲ್ಲಿ ಮಾತನಾಡಿರುವ ಅಖಿಲೇಶ್‌ ಯಾದವ್‌ ಮಹಾಮೈತ್ರಿಗೆ ರಾಜ್ಯದ ಸಣ್ಣ ಪಕ್ಷಗಳನ್ನು ಸೇರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಳೆದ ವರ್ಷ ನಡೆದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಕ್ಷೇತ್ರಗಳೂ ಸೇರಿದಂತೆ ಮೂರೂ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದೆ. ಬಿಜೆಪಿಯ ಈ ಸೋಲು ಬಿಜೆಪಿ ವಿರುದ್ಧ ಸಮಾಜವಾದಿ ಪಕ್ಷಗಳು ಒಂದಾಗುವಂತೆ ಮಾಡಿದೆ ಎಂದಿದ್ದಾರೆ ಅಖಿಲೇಶ್‌.

Also read: 21 ಪಕ್ಷಗಳ ‘ವಿಪಕ್ಷ ಮೈತ್ರಿಕೂಟ’ ಸಜ್ಜು; ಬಿಜೆಪಿ ಮಣಿಸುವ ತಂತ್ರಕ್ಕಾಗಿ ಮಹಾಮೈತ್ರಿ ಸಭೆ

ಪಂಚರಾಜ್ಯಗಳ ಚುನಾವಣಾ ಫಲಿತಾಂಶಕ್ಕೂ ಮುನ್ನಾ ಕಾಂಗ್ರೆಸ್‌ ದೆಹಲಿಯಲ್ಲಿ ಕರೆದಿದ್ದ ಮಹಾಮೈತ್ರಿಕೂಟದ ಸಭೆಗೂ ಈ ಎರಡೂ ಪಕ್ಷಗಳ ಮುಖಂಡರು ಗೈರಾಗಿದ್ದರು. ಅಲ್ಲದೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಕೊರತೆ ಇದ್ದ ಸ್ಥಾನಗಳಿಗೆ ಈ ಎರಡೂ ಪಕ್ಷಗಳು ಬೆಂಬಲ ಸೂಚಿಸಿದ್ದವು. ಆದರೆ, ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದಲೂ ಎಸ್‌ಪಿ- ಬಿಎಸ್‌ಪಿ ಅಂತರ ಕಾಯ್ದುಕೊಂಡಿದ್ದವು.

ಎಸ್‌ಪಿ- ಬಿಎಸ್‌ಪಿ ಹೀಗೆ ಕಾಂಗ್ರೆಸ್‌ನ ಮಹಾಮೈತ್ರಿಕೂಟದಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ಕಾರಣ ಈಗ ಬಹುತೇಕ ಸ್ಪಷ್ಟವಾಗಿದೆ. ಪ್ರಾದೇಶಿಕ ಬಲದ ಮೇಲೆ ಚುನಾವಣೆ ಎದುರಿಸುವ ನಿರ್ಧಾರಕ್ಕೆ ಬಂದಿರುವ ಈ ಎರಡೂ ಪಕ್ಷಗಳು ತಮಗೆ ರಾಷ್ಟ್ರೀಯ ಪಕ್ಷದ ಅಗತ್ಯ ಹೆಚ್ಚಾಗಿಲ್ಲ ಎಂಬ ಸಂದೇಶ ರವಾನಿಸಿವೆ. ಆದರೆ, ಕಾಂಗ್ರೆಸ್‌ ಇಚ್ಛೆ ಪಟ್ಟಲ್ಲಿ ನಮ್ಮ ಮೈತ್ರಿಕೂಟಕ್ಕೆ ಸೇರಬಹುದು ಎಂದು ಬಾಗಿಲನ್ನೂ ತೆರೆದಿಟ್ಟಿವೆ.

Also read: 2019ರವರೆಗೂ ಉರಿಯಲಿದೆಯೇ ಅಡ್ಡಗೋಡೆ ಮೇಲಿನ ಬಿಎಸ್‌ಪಿ- ಎಸ್‌ಪಿ ಬುಡ್ಡಿ ದೀಪ?

ಬಿಜೆಪಿಯನ್ನು ಸೋಲಿಸಬೇಕೆಂಬ ಕಾರಣಕ್ಕೆ ಸಮಾಜವಾದಿ ಪಕ್ಷಗಳು ಒಂದಾಗುತ್ತಿವೆ. ಸಮಾಜವಾದಿ ಪಕ್ಷಗಳು ಒಂದಾಗಲು ಇಂಥ ಸಂದರ್ಭದ ಅಗತ್ಯವಿತ್ತು ಎಂದು ಅಖಿಲೇಶ್‌ ಹೇಳಿದ್ದಾರೆ. ಎಸ್‌ಪಿ-ಬಿಎಸ್‌ಪಿಯ ಮಹಾಮೈತ್ರಿಕೂಟಕ್ಕೆ ರಾಷ್ಟ್ರೀಯ ಲೋಕ ದಳ (ಆರ್‌ಜೆಡಿ), ನಿಶಾದ್‌ ಪಕ್ಷ ಸೇರಿದಂತೆ ಹಲವು ಸಣ್ಣ ಪಕ್ಷಗಳು ಸೇರುವ ಸಾಧ್ಯತೆ ಇದೆ.

ಆದರೆ, ಮಹಾಮೈತ್ರಿಕೂಟದೊಂದಿಗೆ ಕಾಂಗ್ರೆಸ್‌ ಸೇರುವುದು ಬಹುತೇಕ ಅನುಮಾನವಾಗಿದೆ. ಎಸ್‌ಪಿ- ಬಿಎಸ್‌ಪಿ ಮಹಾಮೈತ್ರಿಕೂಟದ ರಚನೆ ಘೋಷಿಸಿದ್ದ ಸಂದರ್ಭದಲ್ಲೇ ಮೈತ್ರಿಕೂಟ ಸೇರುವುದು ಬಿಡುವುದು ಕಾಂಗ್ರೆಸ್‌ ಇಚ್ಛೆ ಎಂದು ಹೇಳಿದ್ದವು. ಆದರೆ, ಕಾಂಗ್ರೆಸ್‌ ಜತೆಗೆ ಮೈತ್ರಿಕೂಟ ರಚಿಸುವ ಆಸಕ್ತಿಯನ್ನು ಎರಡೂ ಪಕ್ಷಗಳು ತೋರಿರಲಿಲ್ಲ.

ಕಾಂಗ್ರೆಸ್‌ ಈವರೆಗೆ ಮೈತ್ರಿಕೂಟ ಸೇರುವ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಅಲ್ಲದೆ, ಎರಡು ಪ್ರಬಲ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ಸೇರಿ ಸೀಟು ಹಂಚಿಕೆಯ ಬಿಕ್ಕಟ್ಟಿಗೆ ಸಿಲುಕುವುದಕ್ಕಿಂತ ಕಾಂಗ್ರೆಸ್‌ ಸ್ವತಂತ್ರವಾಗಿ ಚುನಾವಣೆಗೆ ಇಳಿಯುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಸ್ವತಂತ್ರ ಸ್ಪರ್ಧೆಯೊಂದಿಗೆ ಎರಡು ಪ್ರಬಲ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟದ ಸೆಣೆಸಾಟ ನಡೆಯಲಿದೆ.

Also read: ಉತ್ತರಪ್ರದೇಶದಲ್ಲಿ ಒಂದಾದ ‘ಸಮಾಜ’ ಪಕ್ಷಗಳು; ಕಾಂಗ್ರೆಸ್‌ಗೆ ಮೈತ್ರಿ ಗೊಂದಲ