ಕಾಂಗ್ರೆಸ್‌ ಶಾಸಕರಿಗೆ 100 ಕೋಟಿ ಆಮಿಶ & ಮಧ್ಯಪ್ರದೇಶದಲ್ಲಿ ಬಿಜೆಪಿ ‘ಬಾಸ್‌’ ಬಯಕೆ!
ಸುದ್ದಿ ಸಾರ

ಕಾಂಗ್ರೆಸ್‌ ಶಾಸಕರಿಗೆ 100 ಕೋಟಿ ಆಮಿಶ & ಮಧ್ಯಪ್ರದೇಶದಲ್ಲಿ ಬಿಜೆಪಿ ‘ಬಾಸ್‌’ ಬಯಕೆ!

ಮಧ್ಯಪ್ರದೇಶದಲ್ಲೂ ಆಪರೇಷನ್‌ ಕಮಲದ ಆರೋಪ ಎದುರಿಸುತ್ತಿರುವ ಬಿಜೆಪಿ, ಕಾಂಗ್ರೆಸ್‌ ಶಾಸಕರ ಸೆಳೆಯಲು 100 ಕೋಟಿ ಆಮಿಶ ಒಡ್ಡಿದೆ ಎಂಬುದು ದಿಗ್ವಿಜಯ್‌ ಸಿಂಗ್ ದೂರು.

“ಮಧ್ಯಪ್ರದೇಶದಲ್ಲಿ ಬಿಜೆಪಿಯ ಕರುಣೆಯಿಂದ ಕಾಂಗ್ರೆಸ್‌ ಸರಕಾರ ನಡೆಯುತ್ತಿದೆ. ಮಧ್ಯಪ್ರದೇಶದಲ್ಲಿ ಸರಕಾರ ರಚಿಸಬೇಕೆಂದು ಬಾಸ್‌ ಇಚ್ಛೆ ಪಟ್ಟರೆ ಸರಕಾರ ರಚಿಸುವುದು ಬಿಜೆಪಿಗೆ ಕಷ್ಟವೇನಲ್ಲ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯ ಹೇಳಿದ್ದಾರೆ.

ಬಿಜೆಪಿ ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕರಿಗೆ 100 ಕೋಟಿ ರೂಪಾಯಿಯ ಆಮಿಶ ಒಡ್ಡಿದೆ ಎಂಬ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಆರೋಪದ ಬೆನ್ನಲ್ಲೇ ಕೈಲಾಸ್‌ ಈ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿ ನಾಯಕರನ್ನು ಉಲ್ಲೇಖಿಸಿ ಮಾತನಾಡಿರುವ ಕೈಲಾಸ್‌, ಬಿಜೆಪಿ ನಾಯಕರು ಬಯಸಿದರೆ ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರ ರಚಿಸುತ್ತದೆ ಎಂದಿದ್ದಾರೆ.

ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಕಾಂಗ್ರೆಸ್‌ ಶಾಸಕರನ್ನು ಸೆಳೆದು ಸರಕಾರ ರಚಿಸಲು 100 ಕೋಟಿ ರೂಪಾಯಿಯ ಆಮಿಷ ಒಡ್ಡಿದೆ ಎಂದು ದಿಗ್ವಿಜಯ್‌ ಸಿಂಗ್‌ ಆರೋಪಿಸಿದ್ದರು. ಪಂಚ ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಬಿಜೆಪಿ, ಮಧ್ಯಪ್ರದೇಶದಲ್ಲಿ ಆಪರೇಷನ್‌ ಕಮಲಕ್ಕೆ ಮುಂದಾಗಿದೆ ಎಂಬ ಆರೋಪ ಎದುರಿಸುತ್ತಿದೆ.

ಆದರೆ, ಸರಕಾರ ರಚಿಸಲೇಬೇಕೆಂದು ಬಿಜೆಪಿಯ ದೆಹಲಿ ನಾಕಯತ್ವ ಬಯಸಿದರೆ ಮಧ್ಯಪ್ರದೇಶದಲ್ಲಿ ಸರಕಾರ ರಚಿಸುವುದು ಕಷ್ಟವೇನಲ್ಲ ಎಂದಿರುವ ಕೈಲಾಸ್‌, “ಕಮಲ್‌ನಾಥ್‌ ನಡೆಸುತ್ತಿರುವುದು ಯಾವ ಬಗೆಯ ಸರಕಾರ? ಈ ಸರಕಾರ ನಡೆಯುತ್ತಿರುವುದು ಬಿಜೆಪಿಯ ಕರುಣೆಯಿಂದ. ಬಿಜೆಪಿ ನಾಯಕರು ಸರಕಾರ ರಚಿಸಲೇಬೇಕೆಂದು ತೀರ್ಮಾನಿಸುವವರೆಗೆ ಕಮಲ್‌ನಾಥ್‌ ಸರಕಾರ ನಡೆಯುತ್ತದೆಯಷ್ಟೆ” ಎಂದಿದ್ದಾರೆ.

ಕೈಲಾಸ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಕಾಂಗ್ರೆಸ್‌ ವಕ್ತಾರ ನೀಲಬ್‌ ಶುಕ್ಲಾ, “ಕಾಂಗ್ರೆಸ್‌ ಶಾಸಕರನ್ನು ಬಿಜೆಪಿ ಸೆಳೆಯಲು ಪ್ರಯತ್ನ ನಡೆಸಿರುವುದು ಕೈಲಾಸ್‌ ವಿಜಯವರ್ಗೀಯ ಮಾತುಗಳಿಂದ ಸ್ಪಷ್ಟವಾಗಿದೆ. ಈ ಹೇಳಿಕೆಯ ಮೂಲಕ ಬಿಜೆಪಿ ರಾಜ್ಯದ ಜನತೆಯ ಚುನಾವಣಾ ಜನಾದೇಶವನ್ನು ಸಾರ್ವಜನಿಕವಾಗಿ ಅಪಮಾನಿಸಿದೆ” ಎಂದಿದ್ದಾರೆ.

“ಅಲ್ಲದೆ ವಿಜಯವರ್ಗೀಯ ರಾಜ್ಯದ ಸರಕಾರಿ ಅಧಿಕಾರಿಗಳ ಮೇಲೆ ಬೆದರಿಕೆ ಹಾಕಿದ್ದು, ಬಿಜೆಪಿ ಮುಖಂಡರ ಅಕ್ರಮ ಕೆಲಸಗಳನ್ನು ಅಧಿಕಾರಿಗಳು ಮಾಡಿಕೊಡುವಂತೆ ಒತ್ತಡ ತಂದಿದ್ದಾರೆ” ಎಂದು ನೀಲಬ್‌ ಆರೋಪಿಸಿದ್ದಾರೆ.