samachara
www.samachara.com
‘ಮೋದಿ ವಾಜಪೇಯಿಯಲ್ಲ, ಹೋಲಿಕೆ ವೈರುಧ್ಯ’ ಎಂದ ಎಂ.ಕೆ. ಸ್ಟಾಲಿನ್
ಸುದ್ದಿ ಸಾರ

‘ಮೋದಿ ವಾಜಪೇಯಿಯಲ್ಲ, ಹೋಲಿಕೆ ವೈರುಧ್ಯ’ ಎಂದ ಎಂ.ಕೆ. ಸ್ಟಾಲಿನ್

“ಡಿಎಂಕೆ ಪಕ್ಷವು ಯಾವ ಕಾರಣಕ್ಕೂ ಬಿಜೆಪಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ಬಿಜೆಪಿಯ ಜತೆಗಿನ ಮೈತ್ರಿ ಆರೋಗ್ಯದಾಯಕವಲ್ಲ...

ಪ್ರಧಾನಿ ನರೇಂದ್ರ ಮೋದಿ ವಾಜಪೇಯಿ ಅಲ್ಲ. ಅವರು ತಮ್ಮನ್ನು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆ ಹೋಲಿಕೆ ಮಾಡಿಕೊಳ್ಳುತ್ತಿರುವುದು ವೈರುಧ್ಯ. ಮೊದಲು ಮೋದಿ ಅದನ್ನು ನಿಲ್ಲಿಸಲಿ” ಎಂದು ತಮಿಳುನಾಡಿನ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಿಗೆ ಪಕ್ಷದ ಬಾಗಿಲು ತೆರೆದಿದೆ ಎಂಬ ಮೋದಿ ಮಾತಿಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಸ್ಟಾಲಿನ್‌, “ಡಿಎಂಕೆ ಪಕ್ಷವು ಯಾವ ಕಾರಣಕ್ಕೂ ಬಿಜೆಪಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ಬಿಜೆಪಿಯ ಜತೆಗಿನ ಮೈತ್ರಿ ಆರೋಗ್ಯದಾಯಕವಲ್ಲ” ಎಂದಿದ್ದಾರೆ.

ಗುರುವಾರ ತಮಿಳುನಾಡಿನ ಐದು ಜಿಲ್ಲೆಯ ಕಾರ್ಯಕರ್ತರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಬಿಜೆಪಿ ಪಕ್ಷವು ಎಲ್ಲಾ ಸ್ಥಳೀಯ ಪಕ್ಷಗಳನ್ನೂ ಪರಿಗಣನೆಗೆ ತೆಗೆದುಕೊಂಡು ಆಡಳಿತ ನಡೆಸುವ 20 ವರ್ಷದ ದೂರದೃಷ್ಟಿಯುಳ್ಳ ವಾಜಪೇಯಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದೆ. ಈಗಲೂ ತನ್ನ ಎಲ್ಲಾ ಹಳೆಯ ಗೆಳೆಯರಿಗಾಗಿ ಬಿಜೆಪಿ ಬಾಗಿಲು ತೆರೆದಿಟ್ಟಿದೆ. ತಮಿಳುನಾಡಿನ ಡಿಎಂಕೆ ಅಥವಾ ನಟ ರಜಿನಿ ಕಾಂತ್‌ ಅವರ ಹೊಸ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗಿದೆ” ಎಂದು ಹೇಳಿದ್ದರು.

“ಮೊದಲು ನರೇಂದ್ರ ಮೋದಿ ತಮ್ಮನ್ನು ಮೇರು ನಾಯಕ ವಾಜಪೇಯಿ ಜೊತೆಗೆ ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಲಿ. ವಾಜಪೇಯಿಗೂ ಮೋದಿಗೂ ಸಾಕಷ್ಟು ವ್ಯತ್ಯಾಸವಿದೆ” ಎಂದು ಹೇಳುವ ಮೂಲಕ ಬಿಜೆಪಿ ಹಾಗೂ ಮೋದಿ ನೀಡಿದ ಮೈತ್ರಿಯ ಅವಕಾಶವನ್ನು ಸ್ಟಾಲಿನ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದ ಮುಖ್ಯಸ್ಥೆ ಹಾಗೂ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಮರಣದ ನಂತರ ಪಕ್ಷ ಇಬ್ಬಾಗವಾಗಿದೆ. ಅಲ್ಲದೆ ರಾಜ್ಯದೆಲ್ಲೆಡೆ ಆಡಳಿತ ವಿರೋಧಿ ಅಲೆ ಇದೆ. ಇದನ್ನು ಬಳಸಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗಳಿಸುವ ಆಕಾಂಕ್ಷೆ ಪ್ರಬಲ ವಿರೋಧ ಪಕ್ಷವಾದ ಡಿಎಂಕೆಗೆ ಇದೆ.

ಡಿಎಂಕೆ ಪಕ್ಷವು 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಕೂಟದ ಮೈತ್ರಿಯ ಭಾಗವಾಗಿತ್ತು. 2013 ರಲ್ಲಿ ಯುಪಿಎ ಸರ್ಕಾರದಲ್ಲೂ ಡಿಎಂಕೆ ಪಕ್ಷವು ಪ್ರಮುಖ ಪಾತ್ರ ವಹಿಸಿತ್ತು. ಈ ಬಾರಿಯ ಚುನಾವಣೆಯಲ್ಲೂ ಡಿಎಂಕೆ ಯುಪಿಎ ಜತೆಗೆ ಇರುವುದಾಗಿ ಈಗಾಗಲೇ ಘೋಷಿಸಿಕೊಂಡಿದೆ.