ಪತ್ರಕರ್ತ ಛತ್ರಪತಿ ಕೊಲೆ ಪ್ರಕರಣದಲ್ಲಿ ‘ದೇವಮಾನವ’ ದೋಷಿ; ಜ.17ಕ್ಕೆ ಶಿಕ್ಷೆ ಪ್ರಕಟ
ಸುದ್ದಿ ಸಾರ

ಪತ್ರಕರ್ತ ಛತ್ರಪತಿ ಕೊಲೆ ಪ್ರಕರಣದಲ್ಲಿ ‘ದೇವಮಾನವ’ ದೋಷಿ; ಜ.17ಕ್ಕೆ ಶಿಕ್ಷೆ ಪ್ರಕಟ

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡೇರಾ ಸಚ್ಛಾ ಸೌದಾದ ಮಾಜಿ ಮುಖ್ಯಸ್ಥ ರಾಮ್‌ ರಹೀಮ್‌ ಸಿಂಗ್‌ ವಿರುದ್ಧ 2002ರಲ್ಲಿ ನಡೆದಿದ್ದ ಛತ್ರಪತಿ ಕೊಲೆ ಆರೋಪವಿತ್ತು.

ಪತ್ರಕರ್ತ ರಾಮಚಂದ್ರ ಛತ್ರಪತಿ ಕೊಲೆ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್‌ ಸಿಂಗ್ ಹಾಗೂ ಆತನ ಮೂವರು ಸಹಚರರ ತಪ್ಪಿತಸ್ಥರು ಎಂದು ಹರಿಯಾಣದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡೇರಾ ಸಚ್ಛಾ ಸೌದಾದ ಮಾಜಿ ಮುಖ್ಯಸ್ಥ ರಾಮ್‌ ರಹೀಮ್‌ ಸಿಂಗ್‌ ವಿರುದ್ಧ 2002ರಲ್ಲಿ ನಡೆದಿದ್ದ ಛತ್ರಪತಿ ಕೊಲೆ ಆರೋಪವಿತ್ತು. 16 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಕೊನೆಗೂ ರಾಮ್‌ ರಹೀಮ್‌ ವಿರುದ್ಧದ ಆರೋಪ ಸಾಬೀತಾಗಿದೆ.

2002ರ ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ಛತ್ರಪತಿ ಕೊಲೆ ಪ್ರಕರಣದಲ್ಲಿ ರಾಮ್ ರಹೀಮ್‌ ಹಾಗೂ ಆತನ ಮೂವರು ಸಹಚರರಾದ ಕುಲ್ದೀಪ್ ಸಿಂಗ್, ನಿರ್ಮಲ್ ಸಿಂಗ್ ಹಾಗೂ ಕೃಷ್ಣ ಲಾಲ್ ಅವರನ್ನು ನ್ಯಾಯಾಧೀಶ ಜಗದೀಪ್ ಸಿಂಗ್ ತಪ್ಪಿತಸ್ಥರು ಎಂದು ಘೋಷಿಸಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಜನವರಿ 17ಕ್ಕೆ ಕಾಯ್ದಿರಿಸಿದೆ.

ಮನೆ ಎದುರೆ ಗುಂಡಿಕ್ಕಿದ್ದರು:

ಪತ್ರಕರ್ತ ರಾಮಚಂದ್ರ ಛತ್ರಪತಿ ಸಂಪಾದಕತ್ವದ ‘ಪೂರಾ ಸಚ್’ ಪತ್ರಿಕೆಯ ಮೂಲಕ ರಾಮ್ ರಹೀಮ್‌ ಲೈಂಗಿಕ ಹಗರಣ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ರಾಮ್‌ ರಹೀಮ್‌ ತನ್ನ ಆಶ್ರಮದಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಪತ್ರಿಕಾ ಕಚೇರಿಗೆ ಬಂದಿದ್ದ ಅನಾಮಧೇಯ ಪತ್ರವೊಂದನ್ನು ಆಧರಿಸಿ ‘ಪೂರಾ ಸಚ್‌’ ವರದಿ ಪ್ರಕಟಿಸಿತ್ತು.

ಈ ವರದಿಯಿಂದ ಕೆರಳಿದ್ದ ರಾಮ್ ರಹೀಮ್‌ನ ಸಹಚರರು ಛತ್ರಪತಿ ಅವರನ್ನು ಅವರ ಮನೆಯ ಎದುರೇ ಗುಂಡಿಟ್ಟು ಕೊಂದಿದ್ದರು. 2003ರಲ್ಲಿ ದಾಖಲಾಗಿದ್ದ ಈ ಪ್ರಕರಣದ ತನಿಖೆಯನ್ನು 2006ರಲ್ಲಿ ಸಿಬಿಐಗೆ ವಹಿಸಲಾಗಿತ್ತು. ತನಿಖೆ ನಡೆಸಿದ ಸಿಬಿಐ ರಾಮ್ ರಹೀಮ್‌ ಪ್ರಮುಖ ಅಪರಾಧಿ ಹಾಗೂ ಆತನ ಇತರೆ ಮೂರು ಮಂದಿ ಸಹಚರರು ತಪ್ಪಿತಸ್ಥರು ಎಂದು ದೋಷಾರೋಪ ಮಾಡಿತ್ತು.

ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರ ಆಗಸ್ಟ್‌ನಲ್ಲಿ ಪಂಚಕುಲಾ ನ್ಯಾಯಾಲಯ ರಾಮ್ ರಹೀಮ್‌ಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ಈ ತೀರ್ಪಿನ ನಂತರ ಆತನ ಆಶ್ರಮಕ್ಕೆ ದಾಳಿ ಮಾಡಿದ್ದ ಅಧಿಕಾರಿಗಳು ಮೂವತ್ತಕ್ಕೂ ಹೆಚ್ಚು ಮಾನವ ಅಸ್ತಿಪಂಜರಗಳು ಹಾಗೂ ಅಪಾರ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದ್ದರು.