‘ಸೇನೆಯಲ್ಲಿ ಸಲಿಂಗಾಮಕ್ಕೆ ಅವಕಾಶವಿಲ್ಲ’: ಸೇನೆಯ ಕಾನೂನೇ ಬೇರೆ ಎಂದ ಬಿಪಿನ್ ರಾವತ್
ಸುದ್ದಿ ಸಾರ

‘ಸೇನೆಯಲ್ಲಿ ಸಲಿಂಗಾಮಕ್ಕೆ ಅವಕಾಶವಿಲ್ಲ’: ಸೇನೆಯ ಕಾನೂನೇ ಬೇರೆ ಎಂದ ಬಿಪಿನ್ ರಾವತ್

“ದೇಶದ ಕಾನೂನಿಗಿಂತ ನಾವೇನೂ ದೊಡ್ಡವರಲ್ಲ. ಆದರೆ, ಸೇನೆಗೆ ಸೇರಿದ ನಂತರ ಕೆಲವು ಪ್ರತ್ಯೇಕ ನಿರ್ಬಂಧಗಳು ಅನ್ವಯವಾಗುತ್ತವೆ” ಎಂದು ಬಿಪಿನ್ ರಾವತ್‌ ಹೇಳಿದ್ದಾರೆ.

ಭಾರತೀಯ ಸೇನೆಯಲ್ಲಿ ಸಲಿಂಗ ಕಾಮಕ್ಕೆ ಅವಕಾಶ ಇಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಗುರುವಾರ ನಡೆದ ಸೇನೆಯ ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಸಲಿಂಗ ಕಾಮದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಶ್ನೆಗೆ ಉತ್ತರಿಸಿದ ಅವರು, “ದೇಶದ ಕಾನೂನಿಗಿಂತ ನಾವೇನೂ ದೊಡ್ಡವರಲ್ಲ. ಆದರೆ, ಸೇನೆಗೆ ಸೇರಿದ ನಂತರ ಕೆಲವು ವಿಶೇಷ ನಿರ್ಬಂಧಗಳು ಅನ್ವಯವಾಗುತ್ತವೆ. ಇಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಲಾಗಿರುತ್ತದೆ. ಸೈನಿಕರು ಸೈನ್ಯದ ಕಾನೂನಿಗೆ ಮಾತ್ರ ಒಳಪಟ್ಟಿರುತ್ತಾರೆ” ಎಂದಿದ್ದಾರೆ.

ಅನೈತಿಕ ಸಂಬಂಧ ಅಪರಾಧವಲ್ಲ ಎಂಬ ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ನಾವು ಬದಲಾವಣೆಗಳಿಗೆ ಅಷ್ಟೋಂದು ತೆರೆದುಕೊಂಡಿಲ್ಲ. ನಾವು ಆಧುನಿಕವೂ ಅಲ್ಲ, ಪಾಶ್ಚಾತ್ಯವೂ ಅಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಭಾರತ ದಂಡ ಸಂಹಿತೆಯ ಸೆಕ್ಷನ್ 377ರ ಪ್ರಕಾರ ಸಲಿಂಗ ಕಾಮವನ್ನು ಕಾನೂನು ಬಾಹಿರ ಎನ್ನಲಾಗಿತ್ತು. ಬ್ರಿಟಿಷ್ ಸರಕಾರದ ಈ ಕಾನೂನನ್ನು ಪರಿಷ್ಕರಿಸಲು 2018ರ ಸೆಪ್ಟೆಂಬರ್‌ನಲ್ಲಿ ಆದೇಶಿಸಿದ್ದ ಸುಪ್ರೀಂಕೋರ್ಟ್‌ನ ಐವರು ಸದಸ್ಯರ ಸಾಂವಿಧಾನಿಕ ಪೀಠ, ಒಪ್ಪಿತ ಸಲಿಂಗ ಕಾಮ ಅಪರಾಧವಲ್ಲ ಎಂದಿತ್ತು.

ಒಪ್ಪಿತ ಸಲಿಂಗಕಾಮವನ್ನು ವಿರೋಧಿಸುವುದು ಎಂದರೆ ಸಮಾನತೆಯ ಹಕ್ಕುಗಳನ್ನು ಕಸಿದುಕೊಳ್ಳುವಂತೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.