ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ.
ಸುದ್ದಿ ಸಾರ

ನಿರ್ಮಲಾ ಸೀತಾರಾಮನ್‌ ಬಗ್ಗೆ ವ್ಯಂಗ್ಯ; ರಾಹುಲ್‌ಗೆ ಮಹಿಳಾ ಆಯೋಗದ ನೋಟಿಸ್‌

ರಾಹುಲ್ ಗಾಂಧಿ ನೀಡಿದ ಹೇಳಿಕೆಯಿಂದಾಗಿ ಮಹಿಳೆಯರ ಗೌರವಕ್ಕೆ ಧಕ್ಕೆಯಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಅಭಿಪ್ರಾಯಪಟ್ಟಿದೆ. ಅಲ್ಲದೆ ಈ ಕುರಿತು ರಾಹುಲ್‌ಗೆ ನೋಟಿಸ್ ಜಾರಿ ಮಾಡಿದೆ.

ರಫೇಲ್ ಡೀಲ್‌ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ನೀಡಿದ ಹೇಳಿಕೆ ಈಗ ಅವರಿಗೆ ಕಂಟಕವಾಗಿದೆ. ರಾಹುಲ್ ತಮ್ಮ ಹೇಳಿಕೆಯ ಮೂಲಕ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ರಾಹುಲ್‌ಗೆ ನೊಟೀಸ್ ಜಾರಿ ಮಾಡಿದೆ.

ಬುಧವಾರ ರಾಜಸ್ತಾನ್‌ದ ರ್ಯಾಲಿಯಲ್ಲಿ ರಫೇಲ್ ಡೀಲ್ ಬಗ್ಗೆ ಮಾತನಾಡಿದ್ದ ರಾಹುಲ್, ರಫೇಲ್ ಡೀಲ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲಾಗದ ಪ್ರಧಾನಿ ನರೇಂದ್ರ ಮೋದಿ ನನ್ನನ್ನು ರಕ್ಷಿಸಿ ಎಂದು ಓರ್ವ ಮಹಿಳೆಯ ಮೊರೆ ಹೋಗಿದ್ದರು ಎಂದು ಹೇಳಿದ್ದರು.

“56 ಇಂಚಿನ ಎದೆಯ ಸೇವಕ ಒಬ್ಬ ಮಹಿಳೆಯ ಬಳಿಗೆ ಓಡಿ ಹೋಗಿ, ‘ಸೀತಾರಾಮನ್ ಜಿ, ನನ್ನನ್ನು ನಾನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನನ್ನು ರಕ್ಷಿಸಿ’ ಎಂದು ಮೊರೆ ಇಟ್ಟಿದ್ದರು. ಸದನದಲ್ಲಿ 2.30 ಗಂಟೆಗಳ ಕಾಲ ಮಾತನಾಡಿದರೂ ಆ ಮಹಿಳೆಯಿಂದ ಆ ಸೇವಕನನ್ನು ರಕ್ಷಿಸಲು ಆಗಲಿಲ್ಲ. ಹೌದು ಅಥವಾ ಇಲ್ಲ ಎಂಬ ಉತ್ತರದ ನೇರವಾದ ಪ್ರಶ್ನೆಯನ್ನು ನಾನು ಕೇಳಿದ್ದೆ. ಆದರೆ, ಆ ಮಹಿಳೆಯಿಂದ ಅದಕ್ಕೆ ಉತ್ತರಿಸಲು ಸಾಧ್ಯವಾಗಲಿಲ್ಲ” ಎಂದು ರಾಹುಲ್ ಹೇಳಿದ್ದರು

ರಾಹುಲ್ ಗಾಂಧಿಯ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಈ ಹೇಳಿಕೆಯಿಂದ ಮಹಿಳೆಯರ ಗೌರವಕ್ಕೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಈ ಕುರಿತು ರಾಹುಲ್‌ಗೆ ನೋಟೀಸ್ ನೀಡಿದೆ.

“ರಾಹುಲ್‌ ಗಾಂಧಿ ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಬೇಕು. ನಿರ್ಮಲಾ ಸೀತಾರಾಮನ್‌ ಈ ದೇಶದ ರಕ್ಷಣಾ ಸಚಿವೆ. ದೇಶಕ್ಕೆ ಮೊದಲ ಮಹಿಳಾ ಪ್ರಧಾನಿಯನ್ನು ಕೊಟ್ಟ ಪಕ್ಷದ ಅಧ್ಯಕ್ಷರಿಂದ ನಾವು ಇಂಥ ಮಾತುಗಳನ್ನು ನಿರೀಕ್ಷಿಸಿರಲಿಲ್ಲ” ಎಂದಿದ್ದಾರೆ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ.

ರಾಹುಲ್‌ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ದೇಶದಲ್ಲಿ ಮೊದಲ ಬಾರಿಗೆ ಓರ್ವ ಮಹಿಳೆ ರಕ್ಷಣಾ ಸಚಿವೆಯಾಗಿದ್ದಾರೆ. ಸದನದಲ್ಲಿ ವಿರೋಧ ಪಕ್ಷಗಳ ಸುಳ್ಳುಗಳನ್ನು ಬಹಿರಂಗಗೊಳಿಸಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂತಹ ಹೇಳಿಕೆ ನೀಡುವ ಮೂಲಕ ಸಚಿವೆಗೆ ಮಾತ್ರವಲ್ಲ ಇಡೀ ದೇಶದ ಮಹಿಳೆಯರನ್ನು ಅವಮಾನಿಸಿದ್ದಾರೆ” ಎಂದು ಕಿಡಿಕಾರಿದ್ದಾರೆ.

ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ರಕ್ಷಣಾ ಇಲಾಖೆಯನ್ನೂ ನಿಭಾಯಿಸಿದ್ದರು. ಆದರೆ, ಪೂರ್ಣ ಪ್ರಮಾಣದಲ್ಲಿ ರಕ್ಷಣಾ ಖಾತೆಯ ಹೊಣೆ ಹೊತ್ತಿರುವ ಮೊದಲ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌.

ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, “ರಾಹುಲ್‌ ಗಾಂಧಿ ರಕ್ಷಣಾ ಸಚಿವೆಯ ಉತ್ತರಗಳಿಗೆ ಪ್ರತಿಕ್ರಿಯೆ ನೀಡಿ ಹೇಳಿರುವ ಮಾತುಗಳು ಭಾರತದ ರಾಜಕೀಯ ಇತಿಹಾಸದಲ್ಲೇ ಕೀಳು ಮಟ್ಟದ ಹೇಳಿಕೆಯಾಗಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

#MisogynistRahul ಎಂಬ ಹ್ಯಾಷ್‌ ಟ್ಯಾಗ್ ಬಳಸಿ ಟ್ವೀಟ್‌ ಮಾಡಿರುವ ಸ್ಮೃತಿ ಇರಾನಿ, ರಾಹುಲ್‌ ಗಾಂಧಿ ಅಹಂ ಹೆಚ್ಚಾಗಿದೆ ಎಂದಿದ್ದಾರೆ.