ಅಲೋಕ್‌ ವರ್ಮಾಗೆ ಮತ್ತೆ ಸಿಬಿಐನಿಂದ ಗೇಟ್‌ಪಾಸ್‌, ಮೋದಿ ನೇತೃತ್ವದ ಪ್ಯಾನಲ್‌ ತೀರ್ಮಾನ
ಸುದ್ದಿ ಸಾರ

ಅಲೋಕ್‌ ವರ್ಮಾಗೆ ಮತ್ತೆ ಸಿಬಿಐನಿಂದ ಗೇಟ್‌ಪಾಸ್‌, ಮೋದಿ ನೇತೃತ್ವದ ಪ್ಯಾನಲ್‌ ತೀರ್ಮಾನ

ಭ್ರಷ್ಟಾಚಾರ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ 1979ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ವರ್ಮಾ ಅವರನ್ನು ವಜಾಗೊಳಿಸಲಾಗಿದೆ. ಸಿಬಿಐ ಸುತ್ತ ಇದು ಕಳೆದ 40 ಗಂಟೆಗಳಲ್ಲಿ ನಡೆದ ಎರಡನೇ ಪ್ರಮುಖ ಬೆಳವಣಿಗೆ. 

ಅಲೋಕ್‌ ವರ್ಮಾಗೆ ಸಿಬಿಐ ನಿರ್ದೇಶಕ ಹುದ್ದೆಯನ್ನು ಮರಳಿ ನೀಡಿದ್ದ ಸುಪ್ರೀಂ ಕೋರ್ಟ್‌ ತೀರ್ಮಾನವನ್ನು ಪ್ರಧಾನಿ ನೇತೃತ್ವದ ನೇಮಕಾತಿ ಸಮಿತಿ ಗುರುವಾರ ಬುಡಮೇಲು ಮಾಡಿದೆ.

ಅಲೋಕ್‌ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸುವ ತೀರ್ಮಾನವನ್ನು ಮೋದಿ, ನ್ಯಾ.ಎ. ಕೆ. ಸಿಕ್ರಿ (ಸಿಜೆಐ ಪ್ರತಿನಿಧಿ) ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿದ್ದ ಸಮಿತಿ 2:1 ಅನುಪಾತದಲ್ಲಿ ತೆಗೆದುಕೊಂಡಿದೆ.

ಭ್ರಷ್ಟಾಚಾರ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ 1979ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ವರ್ಮಾ ಅವರನ್ನು ವಜಾಗೊಳಿಸಲಾಗಿದೆ. ಜನವರಿ 31ರಂದು ವರ್ಮಾ ನಿವೃತ್ತರಾಗಬೇಕಾಗಿತ್ತು. ಅದಕ್ಕೂ ಮೊದಲು 21 ದಿನಗಳ ಅಧಿಕಾರವಧಿ ಬಾಕಿ ಉಳಿದಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಅವರಿಗೆ ಈ ಆಘಾತಕಾರಿ ಸುದ್ದಿ ನೀಡಿದೆ. ಈ ಮೂಲಕ ಸಿಬಿಐ ಇತಿಹಾಸದಲ್ಲೇ ವಜಾಗೊಂಡ ಮೊದಲ ನಿರ್ದೇಶಕ ಎಂಬ ಕುಖ್ಯಾತಿ ಅವರನ್ನು ಅಂಟಿಕೊಂಡಿದೆ.

ಮಂಗಳವಾರ, ಅಲೋಕ್‌ ವರ್ಮಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದ ಕೇಂದ್ರ ಜಾಗೃತ ಸಮಿತಿ (ಸಿವಿಸಿ)ಯ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತ್ತು. ಆದರೆ ಅವರ ಮೇಲೆ ಕೇಳಿ ಬಂದಿದ್ದ ಆರೋಪದ ಹಿನ್ನೆಲೆಯಲ್ಲಿ ಸಿವಿಸಿ ನಡೆಸಿದ್ದ ತನಿಖಾ ವರದಿಯನ್ನು ನೋಡಿ ಅವರ ಭವಿಷ್ಯದ ಬಗ್ಗೆ ಉನ್ನತ ಅಧಿಕಾರ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಸಮಿತಿ ಒಂದು ವಾರದೊಳಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಬುಧವಾರ ಮೊದಲ ಸಭೆ ನಡೆದಿತ್ತು. ಆದರೆ ಯಾವುದೇ ತೀರ್ಮಾನಕ್ಕೆ ಸಭೆ ಬಂದಿರಲಿಲ್ಲ. ಗುರುವಾರ ಮತ್ತೊಮ್ಮೆ ಸಭೆ ಸೇರಿದ ಈ ಸಮಿತಿಯಲ್ಲಿ ವರ್ಮಾ ಅವರನ್ನು ವಜಾಗೊಳಿಸುವ ಬಹುಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ವರ್ಮಾ ಅವರನ್ನು ವಜಾಗೊಳಿಸುವ ತೀರ್ಮಾನವನ್ನು ಖರ್ಗೆ ವಿರೋಧಿಸಿದ್ದರು ಎಂದು ತಿಳಿದು ಬಂದಿದೆ. ಆದರೆ ವಜಾಗೊಳಿಸುವ ತೀರ್ಮಾನವನ್ನು ಮೋದಿ ಮತ್ತು ನ್ಯಾ. ಸಿಕ್ರಿ ಬೆಂಬಲಿಸಿದ್ದರಿಂದ ವರ್ಮಾ ಅನಿವಾರ್ಯವಾಗಿ ಹುದ್ದೆ ಕಳೆದುಕೊಂಡಿದ್ದಾರೆ. ಅವರನ್ನು ಅಗ್ನಿ ಶಾಮಕ ದಳದ ಜನರಲ್‌ ಡೈರಕ್ಟರ್‌ ಸ್ಥಾನಕ್ಕೆ ವರ್ಗ ಮಾಡಲಾಗಿದೆ.

ಇದಕ್ಕೂ ಮೊದಲು ಅಕ್ಟೋಬರ್‌ನಲ್ಲಿ ಸಿಬಿಐ ನಿರ್ದೇಶಕ ವರ್ಮಾ ಮತ್ತು ಹೆಚ್ಚುವರಿ ನಿರ್ದೇಶಕ ರಾಕೇಶ್ ಆಸ್ತಾನಾ ಬಹಿರಂಗ ಕಾದಾಟಕ್ಕೆ ಇಳಿದಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 23ರ ಮಧ್ಯರಾತ್ರಿ ಇಬ್ಬರನ್ನೂ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಈ ತೀರ್ಮಾನ ಪ್ರಶ್ನಿಸಿ ವರ್ಮಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಆರಂಭಿಕ ಜಯ ಪಡೆದುಕೊಂಡಿದ್ದರು.

ಹಾಗೆ ಬುಧವಾರವೇ ಕಚೇರಿಗೆ ಹಾಜರಾದವರು ತಮ್ಮ ಅನುಪಸ್ಥಿತಿಯಲ್ಲಿ ನಡೆದಿದ್ದ ವರ್ಗಾವಣೆಗಳನ್ನು ತಡೆದಿದ್ದರು. ಮತ್ತು ಗುರುವಾರ ಐವರು ಅಧಿಕಾರಿಗಳನ್ನು ವರ್ಗಾವಣೆಯೂ ಮಾಡಿದ್ದರು. ಇದೀಗ ಎರಡೇ ದಿನಗಳ ಅಧಿಕಾರದ ಅಂತ್ಯಕ್ಕೆ ಬಂದಿದ್ದು, ಅವರು ತಮ್ಮ ಹುದ್ದೆಯನ್ನು ಕಳೆದುಕೊಂಡಿದ್ದಾರೆ.

Also read: ಕೇಂದ್ರಕ್ಕೆ ಮುಖಭಂಗ; ಸಿಬಿಐಗೆ ಮರಳಿದ ಅಲೋಕ್‌ ವರ್ಮಾ; ‘ರಜೆ ರದ್ದುಗೊಳಿಸಿದ’ ಸುಪ್ರೀಂ ಕೋರ್ಟ್‌

Also read: ಸಿಬಿಐ ಕೇಂದ್ರ ಕಚೇರಿಯಲ್ಲಿ ಮಧ್ಯರಾತ್ರಿ ನಡೆದ ಮಹಾ ನಾಟಕದ ಇಂಚಿಂಚು ವಿವರ ಇಲ್ಲಿದೆ...