ಮೇವು ಹಗರಣ: ಲಾಲೂ ಪ್ರಸಾದ್‌ ಜಾಮೀನು ಅರ್ಜಿ ತಿರಸ್ಕರಿಸಿದ ಜಾರ್ಖಂಡ್‌ ಹೈಕೋರ್ಟ್‌
ಸುದ್ದಿ ಸಾರ

ಮೇವು ಹಗರಣ: ಲಾಲೂ ಪ್ರಸಾದ್‌ ಜಾಮೀನು ಅರ್ಜಿ ತಿರಸ್ಕರಿಸಿದ ಜಾರ್ಖಂಡ್‌ ಹೈಕೋರ್ಟ್‌

ಅನಾರೋಗ್ಯ ಹಾಗೂ ವೃದ್ಧಾಪ್ಯದ ಕಾರಣಕ್ಕೆ ಜಾಮೀನು ನೀಡುವಂತೆ ಲಾಲೂ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್ ಹೈಕೋರ್ಟ್‌ಗೆ ಮನವಿ ಮಾಡಿದ್ದರು.

ಬಹುಕೋಟಿ ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಷ್ಟ್ರೀಯ ಜನತಾದಳ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್‌ ತಿರಸ್ಕರಿಸಿದೆ.

ಮೇವು ಹಗರಣದಲ್ಲಿ ಜೈಲು ಸೇರಿದ್ದ ಲಾಲೂ ಪ್ರಸಾದ್‌, ಅನಾರೋಗ್ಯದ ಕಾರಣಕ್ಕೆ ಸದ್ಯ ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ (ರಿಮ್ಸ್‌) ಆಸ್ಪತ್ರೆಯ ಪೇಯಿಂಗ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅನಾರೋಗ್ಯ ಹಾಗೂ ವೃದ್ಧಾಪ್ಯದ ಕಾರಣಕ್ಕೆ ಜಾಮೀನು ನೀಡುವಂತೆ ಲಾಲೂ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, ಜಾಮೀನು ನೀಡಲು ನ್ಯಾಯಪೀಠ ನಿರಾಕರಿಸಿದೆ.

Also read: ಮೇವು ಹಗರಣದ 4ನೇ ಪ್ರಕರಣ: ಲಾಲೂಗೆ ಮತ್ತೆ 14 ವರ್ಷ ಜೈಲು

ಹೈಕೋರ್ಟ್‌ನ ಈ ನಡೆಯಿಂದ ಆರ್‌ಜೆಡಿ ಕಾರ್ಯಕರ್ತರಿಗೆ ಆಘಾತವಾಗಿದೆ ಎಂದಿರುವ ಪಕ್ಷದ ವಕ್ತಾರ ಶಕ್ತಿ ಯಾದವ್‌, ಹೈಕೋರ್ಟ್‌ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ.

90ರ ದಶಕದಲ್ಲಿ ಲಾಲು ಪ್ರಸಾದ್‌ ಬಿಹಾರದ ಮುಖ್ಯಮಂತ್ರಿಯಾಗಿದ್ದ ವೇಳೆ ಪಶುಸಂಗೋಪನಾ ಇಲಾಖೆಯಡಿ ಮೇವು ಖರೀದಿಯಲ್ಲಿ ಸುಮಾರು 900 ಕೋಟಿ ರೂಪಾಯಿ ಹಗರಣ ನಡೆದಿರುವುದು ತನಿಖೆಯಿಂದ ಸಾಬೀತಾಗಿತ್ತು. ದಿಯೊಘರ್‌ ಮೇವು ಹಗರಣದಲ್ಲಿ 2018ರ ಜನವರಿ 6ರಂದು ಲಾಲೂ ಪ್ರಸಾದ್‌ಗೆ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

Also read: ಬಹುಕೋಟಿ ಮೇವು ತಿಂದು ಜೈಲು ಪಾಲಾದ ಲಾಲೂ: ಶಿಕ್ಷೆಯಲ್ಲೂ ಅನುಕಂಪ ಗಿಟ್ಟಿಸ್ತಾರಾ ‘ಮಾಸ್ ಲೀಡರ್’?