ಜ. 29ಕ್ಕೆ ಮುಂದೂಡಿಕೆಯಾದ ಅಯೋಧ್ಯೆ ಪ್ರಕರಣ; ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಲಲಿತ್‌
ಸುದ್ದಿ ಸಾರ

ಜ. 29ಕ್ಕೆ ಮುಂದೂಡಿಕೆಯಾದ ಅಯೋಧ್ಯೆ ಪ್ರಕರಣ; ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಲಲಿತ್‌

ವಿಚಾರಣೆ ಮುಂದೂಡಲು ದಾಖಲೆಗಳ ಅನುವಾದವೂ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಸಂಸ್ಕೃತ, ಹಿಂದಿ, ಉರ್ದು, ಪರ್ಶಿಯನ್‌, ಗುರ್ಮುಖಿ, ಅರೇಬಿಯನ್‌ ಮೊದಲಾದ ಭಾಷೆಗಳಲ್ಲಿವೆ.

ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಇಂದು ಪ್ರಕರಣದ ವಿಚಾರಣೆ ಆರಂಭಿಸಿದ ಮುಖ್ಯನ್ಯಾಯಮೂರ್ತಿ ನೇತೃತ್ವದ ಸಾಂವಿಧಾನಿಕ ಪೀಠ ನ್ಯಾಯಮೂರ್ತಿಯೊಬ್ಬರ ನಿರ್ಗಮನದಿಂದ ಪ್ರಕರಣದ ವಿಚಾರಣೆಯನ್ನು ಅನಿವಾರ್ಯವಾಗಿ ಜನವರಿ 29ಕ್ಕೆ ಮುಂದೂಡಬೇಕಾಯಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಸಾಂವಿಧಾನಿಕ ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿಯು. ಉದಯ್‌ ಲಲಿತ್‌ 1994ರಲ್ಲಿ ಆಗಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ಪರ ವಕೀಲರಾಗಿದ್ದರು ಎಂಬುದನ್ನು ಮುಸ್ಲಿಂ ಪಾರ್ಟಿ ಪರ ಹಾಜರಾಗಿದ್ದ ವಕೀಲ ರಾಜೀವ್‌ ಧವನ್‌ ನ್ಯಾಯಾಲಯದ ಗಮನಕ್ಕೆ ತಂದರು. ಧವನ್‌ ನ್ಯಾ. ಲಲಿತ್‌ ಪ್ರಕರಣದಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿಕೊಳ್ಳಲಿಲ್ಲವಾದರೂ ನ್ಯಾಯಮೂರ್ತಿಗಳು ತಾವಾಗಿಯೇ ವಿಚಾರಣೆಯಿಂದ ಹಿಂದೆ ಸರಿದರು. ಇದೀಗ ಅವರ ಸ್ಥಾನಕ್ಕೆ ಹೊಸಬರನ್ನು ನೇಮಿಸಿ ಜನವರಿ 29ರಿಂದ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಆದೇಶ ನೀಡಿದೆ.

ವಿಚಾರಣೆ ಮುಂದೂಡಲು ದಾಖಲೆಗಳ ಅನುವಾದವೂ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಸಂಸ್ಕೃತ, ಹಿಂದಿ, ಉರ್ದು, ಪರ್ಶಿಯನ್‌, ಗುರ್ಮುಖಿ, ಅರೇಬಿಯನ್‌ ಮೊದಲಾದ ಭಾಷೆಗಳಲ್ಲಿವೆ. ಇದನ್ನು ಭಾಷಾಂತರ ಮಾಡಬೇಕಿದ್ದು, ಅಧಿಕೃತ ತರ್ಜುಮೆದಾರರ ಸಹಾಯ ಪಡೆಯುವಂತೆ ನ್ಯಾಯಾಲಯ ರಿಜಿಸ್ಟಾರ್‌ಗೆ ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 88 ಸಾಕ್ಷಿಗಳ ಹೇಳಿಕೆಯನ್ನು ಅಲಹಾಬಾದ್‌ ಹೈಕೋರ್ಟ್‌ ದಾಖಲು ಮಾಡಿಕೊಂಡಿದೆ. ಇವುಗಳು 2,886 ಪುಟಗಳಿವೆ. 257 ದಾಖಲೆಗಳನ್ನೂ ಹೈಕೋರ್ಟ್‌ ಪರಿಶೀಲನೆಗೆ ಒಳಪಡಿಸಿದೆ. ಇದರ ಹೈಕೋರ್ಟ್‌ ಆದೇಶವೇ 4,304 ಪುಟಗಳಿದ್ದು ಅನುಬಂಧಗಳು ಸೇರಿ 8,000 ಪುಟಗಳನ್ನು ಮೀರಿವೆ. ಇದರತ್ತಲೂ ನ್ಯಾಯಮೂರ್ತಿಗಳು ಕಣ್ಣಾಡಿಸಬೇಕಿದೆ.

ಎರಡು ದಿನಗಳ ಹಿಂದೆ ಅಯೋಧ್ಯೆ ಭೂ ವಿವಾದದ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ಸಾಂವಿಧಾನಿಕ ಪೀಠವನ್ನು ರಚಿಸಿದ್ದರು. ಆದರೆ ಇದೀಗ ಅದರಿಂದ ಓರ್ವ ನ್ಯಾಯಮೂರ್ತಿ ಹೊರ ಬಂದಿರುವುದರಿಂದ ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಕ ಮಾಡಬೇಕಾಗಿದೆ. 2010ರ ಸೆಪ್ಟೆಂಬರ್‌ 30ರಂದು ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 14 ಮೇಲ್ಮನವಿಗಳನ್ನು ಈ ಪೀಠ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

Also read: ರಾಮ ಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ; ವಿಚಾರಣೆಗೆ ಸಾಂವಿಧಾನಿಕ ಪೀಠ ರಚನೆ