ಮೇಲ್ಜಾತಿ ಬಡವರಿಗೆ 10% ಮೀಸಲಾತಿ; ಮಸೂದೆ ಅಂಗೀಕಾರ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ
ಸುದ್ದಿ ಸಾರ

ಮೇಲ್ಜಾತಿ ಬಡವರಿಗೆ 10% ಮೀಸಲಾತಿ; ಮಸೂದೆ ಅಂಗೀಕಾರ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಮೀಸಲಾತಿ ಕುರಿತಂತೆ 1992ರಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ಮೀಸಲಾತಿಗೆ ಆರ್ಥಿಕತೆ ಮಾನದಂಡವಲ್ಲ.

ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಜಾತಿಗಳನ್ನು ಹೊರತು ಪಡಿಸಿ ಉಳಿದ ಜಾತಿಗಳ ಆರ್ಥಿಕ ದುರ್ಬಲರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ 10% ಮೀಸಲಾತಿ ನೀಡಲು ಕೇಂದ್ರ ಸರಕಾರ ಅಂಗೀಕರಿಸಿರುವ ಸಂವಿಧಾನದ (124ನೇ ತಿದ್ದುಪಡಿ) ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಸಂವಿಧಾನದ 15 ಮತ್ತು 16ನೇ ವಿಧಿಗಳಿಗೆ ಸಂವಿಧಾನದಲ್ಲಿ ಹೇಳಿರುವ ಮೀಸಲಾತಿ ತತ್ವಕ್ಕೇ ವಿರೋಧಿಯಾದುದು. ಅಲ್ಲದೆ, ಮೀಸಲಾತಿ ಕುರಿತಂತೆ ಈ ಹಿಂದೆ ಸುಪ್ರೀಂಕೋರ್ಟ್‌ ನೀಡುರುವ ತೀರ್ಪುಗಳಿಗೆ ಈ ಮಸೂದೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮೀಸಲಾತಿ ಕುರಿತಂತೆ 1992ರಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ಮೀಸಲಾತಿಗೆ ಆರ್ಥಿಕತೆ ಮಾನದಂಡವಲ್ಲ. ಆರ್ಥಿಕ ಮೀಸಲಾತಿಯನ್ನು ಕೇವಲ ಸಾಮಾನ್ಯ ವರ್ಗಕ್ಕೆ ಮಾತ್ರ ಮೀಸಲಾಗಿಡುತ್ತಿರುವುದು ಕೂಡಾ ಈ ಹಿಂದೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪುಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Also read: ಮೇಲ್ಜಾತಿ ಬಡವರಿಗೆ 10% ಮೀಸಲಾತಿ: ಮಂಡನೆಯಾದ ಮಸೂದೆಯಲ್ಲೇನಿದೆ?

ಮೀಸಲಾತಿ ಮಿತಿ 50% ಮೀರುವಂತಿಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪನ್ನೂ ಈ ಮಸೂದೆಯು ಉಲ್ಲಂಘಿಸುತ್ತಿದೆ. ಅಲ್ಲದೆ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸರಿಯಾದ ಚರ್ಚೆ ನಡೆಸದೆ ಮಸೂದೆ ಅಂಗೀಕರಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಕಾಂಗ್ರೆಸ್, ಆರ್‌ಜೆಡಿ ಸೇರಿದಂತೆ ಹಲವು ವಿಪಕ್ಷಗಳು ಈ ಮಸೂದೆಯನ್ನು ಸಂಸದೀಯ ಆಯ್ಕೆ ಸಮಿತಿಯ ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದವು. ಆದರೆ, ಯಾವುದೇ ಪರಿಷ್ಕರಣೆ ಇಲ್ಲದೆ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ.