samachara
www.samachara.com
ಶುಕ್ರವಾರದಿಂದ 3 ದಿನ ‘ಕೊಡಗು ಪ್ರವಾಸಿ ಉತ್ಸವ’; ಪ್ರವಾಸಿಗರ ಸೆಳೆಯಲು ಮುಂದಾದ ಜಿಲ್ಲಾಡಳಿತ
ಸುದ್ದಿ ಸಾರ

ಶುಕ್ರವಾರದಿಂದ 3 ದಿನ ‘ಕೊಡಗು ಪ್ರವಾಸಿ ಉತ್ಸವ’; ಪ್ರವಾಸಿಗರ ಸೆಳೆಯಲು ಮುಂದಾದ ಜಿಲ್ಲಾಡಳಿತ

ಕೊಡಗು ಪ್ರವಾಸಿ ಉತ್ಸವದ ಅಂಗವಾಗಿ ಸಾಂಸ್ಕೃತಿಕ ರಸ ಸಂಜೆ, ಶ್ವಾನ ಪ್ರದರ್ಶನ, ಓಪನ್ ಸ್ಟ್ರೀಟ್ ಫೆಸ್ಟಿವಲ್, ಜತೆಗೆ ರಾಜಾ ಸೀಟಿನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ

ಭೀಕರ ಮಳೆ, ಭೂ ಕುಸಿತಕ್ಕೆ ನಲುಗಿದ ಪುಟ್ಟ ಜಿಲ್ಲೆ ಕೊಡಗು ಇದೀಗಷ್ಟೇ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಕೊಡಗಿಗೆ ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ ಇದೇ 11ನೇ ತಾರೀಖಿನಿಂದ ಮೂರು ದಿನಗಳ ಕೊಡಗು ಪ್ರವಾಸಿ ಉತ್ಸವ ಆಯೋಜಿಸಿದೆ.

ಭೂ ಕುಸಿತದ ಕುರಿತು ದೃಶ್ಯ ಮಾಧ್ಯಮಗಳಲ್ಲಿ ದೇಶಾದ್ಯಂತ ನೀಡಿದ ಅತಿ ರಂಜಿತ ವರದಿಗಳ ಹಿನ್ನೆಲೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಬರುವುದೇ ಕಡಿಮೆಯಾಗಿತ್ತು. ಹೋಟೆಲ್, ಲಾಡ್ಜ್ , ಹೋಂ ಸ್ಟೇಗಳೆಲ್ಲ ಖಾಲಿ ಹೊಡೆಯತೊಡಗಿದ್ದವು. ನಂತರ ಪ್ರವಾಸಿಗರನ್ನು ಸೆಳೆಯಲು ಜಿಲ್ಲಾ ಹೋಂ ಸ್ಟೇ ಹಾಗೂ ಹೋಟೆಲ್ ಮಾಲೀಕರ ಸಂಘವು ಜಂಟಿಯಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಒಂದಷ್ಟು ಪ್ರಯತ್ನ ನಡೆಸಿತ್ತು.

ಹೊಸ ವರ್ಷಾಚರಣೆ ದಿನ ರಾಜಾ ಸೀಟಿನಲ್ಲಿ ಪ್ರವಾಸಿಗರ ಕಲರವ ಕೇಳಿ ಬಂದಿತ್ತಾದರೂ ಹಿಂದಿನ ವರ್ಷಗಳಷ್ಟು ಪ್ರವಾಸೀ ಜಂಗುಳಿ ಇರಲಿಲ್ಲ. ಇತೀಚಿನ ವರ್ಷಗಳಲ್ಲಿ ಕೊಡಗು ಪ್ರವಾಸೀ ಜಿಲ್ಲೆಯಾಗಿ ಮಾರ್ಪಟ್ಟಿದ್ದು ಸಾವಿರಾರು ಜನರ ಆದಾಯದ ಮೂಲವಾಗಿತ್ತು. ಇದು ಕೊಡಗು ಜಿಲ್ಲೆಯ ಜನರ ಜೀವನ ಮಟ್ಟ ಏರಲೂ ಕಾರಣವಾಗಿತ್ತು.

ಹಿಂದಿನಂತೆಯೇ ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ, ಪ್ರವಾಸೋದ್ಯಮ, ತೋಟಗಾರಿಕೆ ಹಾಗೂ ಪಶುಪಾಲನೆ ಇಲಾಖೆ ಸಹಯೋಗದಲ್ಲಿ ಜ.11 ರಿಂದ ಮೂರು ದಿನಗಳ ಕಾಲ 'ಕೊಡಗು ಪ್ರವಾಸಿ ಉತ್ಸವ'ವು ರಾಜಾಸೀಟು ಉದ್ಯಾನವನ ಮತ್ತು ಗಾಂಧಿ ಮೈದಾನದಲ್ಲಿ ನಡೆಯಲಿದೆ.

ಕೊಡಗು ಪ್ರವಾಸಿ ಉತ್ಸವದ ಪೋಸ್ಟರ್‌ಗಳನ್ನು ಜಿಲ್ಲಾ ಪಂಚಾಯ್ತಿ ಸಿಇಒ ಕೆ. ಲಕ್ಷ್ಮಿಪ್ರಿಯಾ ಹಾಗೂ ಜಿಲ್ಲಾಧಿಕಾರಿ ಶ್ರೀವಿದ್ಯಾ ಮಂಗಳವಾರ ಬಿಡುಗಡೆಗೊಳಿಸಿದರು
ಕೊಡಗು ಪ್ರವಾಸಿ ಉತ್ಸವದ ಪೋಸ್ಟರ್‌ಗಳನ್ನು ಜಿಲ್ಲಾ ಪಂಚಾಯ್ತಿ ಸಿಇಒ ಕೆ. ಲಕ್ಷ್ಮಿಪ್ರಿಯಾ ಹಾಗೂ ಜಿಲ್ಲಾಧಿಕಾರಿ ಶ್ರೀವಿದ್ಯಾ ಮಂಗಳವಾರ ಬಿಡುಗಡೆಗೊಳಿಸಿದರು
- ಸಮಾಚಾರ ಚಿತ್ರ

ಮಡಿಕೇರಿಯಲ್ಲಿ ಪ್ರತೀ ವರ್ಷ ವಿಜೃಂಭಣೆಯಿಂದ ನಡೆಯುವ ದಸರಾ ಬಿಟ್ಟರೆ, ಪ್ರವಾಸಿ ಉತ್ಸವವು ಪ್ರವಾಸಿಗರನ್ನು ಆಕರ್ಷಿಕಸುವ ಅತಿ ದೊಡ್ಡ ಉತ್ಸವವಾಗಲಿದೆ. ಕಳೆದ ವರ್ಷ ಭೀಕರ ಭೂ ಕುಸಿತದ ಕಾರಣಕ್ಕೆ ದಸರಾ ಉತ್ಸವವನ್ನೂ ಸರಳವಾಗಿ ಆಚರಿಸಲಾಗಿತ್ತು.

ಕೊಡಗು ಪ್ರವಾಸಿ ಉತ್ಸವದ ಅಂಗವಾಗಿ ಸಾಂಸ್ಕೃತಿಕ ರಸ ಸಂಜೆ, ಶ್ವಾನ ಪ್ರದರ್ಶನ, ಓಪನ್ ಸ್ಟ್ರೀಟ್ ಫೆಸ್ಟಿವಲ್, ಜತೆಗೆ ರಾಜಾ ಸೀಟಿನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಇದು ಕೊಡಗಿನ ಜನ ಹಾಗೂ ಹೊರಗಿನ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆ ಇದೆ. ಈಗಾಗಲೇ ನೂರಾರು ಬಗೆಯ ಹೂವಿನ ಗಿಡಗಳ ಕುಂಡಗಳು ರಾಜಾ ಸೀಟಿಗೆ ಬಂದಿಳಿಯುತ್ತಿವೆ.

ತೋಟಗಾರಿಕೆ ಇಲಾಖೆಯು ಸುಮಾರು 7 ಸಾವಿರ ಬಗೆಯ ಫಲಪುಷ್ಪಗಳ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ. ಜನವರಿ 11ರಿಂದ ಮೂರು ದಿನಗಳ ಕಾಲವೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗಾಯಕಿ ಎಂ.ಡಿ. ಪಲ್ಲವಿ ತಂಡದಿಂದ ಭಾವ ಸಂಗಮ , ಡಿ. ಹರ್ಷ ತಂಡದಿಂದ ಸಂಗೀತ ರಸ ಸಂಜೆ ನಡೆಯಲಿದೆ. ಸ್ಥಳೀಯ ಅರೆ ಭಾಷೆ ಹಾಗೂ ಕೊಡವ ಕಲಾವಿದರಿಂದ ಜಾನಪದ ಸಂಸ್ಕೃತಿ, ಸೊಗಡನ್ನು ಬಿಂಬಿಸುವ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಜನವರಿ 13 ರಂದು ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರ ಸಂಘದ ವತಿಯಿಂದ ಓಪನ್ ಸ್ಟ್ರೀಟ್ ಫೆಸ್ಟಿವಲ್ ಆಯೋಜಿಸಲಾಗಿದ್ದು ಗಾಂದಿ ಮೈದಾನದಲ್ಲಿ ಹತ್ತಾರು ಮಳಿಗೆಗಳಲ್ಲಿ ಬಗೆ ಬಗೆಯ ಭಕ್ಷ್ಯ ಭೋಜನಗಳು ಜಿಹ್ವಾ ಚಾಪಲ್ಯ ತಣಿಸಲಿವೆ. ಕಳೆದ ದಸರಾ ಸಮಯದಲ್ಲಿ ವ್ಯಾಪಾರವಿಲ್ಲದೇ ಕಂಗಾಲಾಗಿದ್ದ ಹೋಟೆಲ್ ಹಾಗೂ ಹೋಂ ಸ್ಟೇ ಮಾಲೀಕರು ತಮ್ಮ ವಹಿವಾಟಿಗೆ ಟಾನಿಕ್ ನೀಡಲಿರುವ ಈ ಉತ್ಸವವನ್ನೇ ಎದುರು ನೋಡುತಿದ್ದಾರೆ.

ಪಶುಪಾಲನಾ ಇಲಾಖೆಯ ವತಿಯಿಂದ ಜನವರಿ 12ರಂದು ಶ್ವಾನ ಪ್ರದರ್ಶನ ಏರ್ಪಡಿಸಲಾಗಿದೆ. ಹೊರ ಜಿಲ್ಲೆಗಳಿಂದಲೂ ಉತ್ತಮ ದರ್ಜೆಯ ಶ್ವಾನಗಳು ಆಗಮಿಸಲಿದ್ದು 5 ಬಹುಮಾನಗಳನ್ನು ನೀಡಲಾಗುವುದು ಎಂದು ಇಲಾಖೆಯ ಉಪನಿರ್ದೆಶಕ ತಮ್ಮಯ್ಯ ಹೇಳಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಹಂಪಿ, ಕರಾವಳಿ, ಬಾದಾಮಿ ಉತ್ಸವಗಳನ್ನು ಯಶಸ್ವಿಯಾಗಿ ನಡೆಸಿ ಪ್ರವಾಸೋದ್ಯಮ ಅಭಿವೃದ್ಧಿಯ ಪ್ರಯತ್ನ ನಡೆಸಿದೆ. ವಿದೇಶಗಳಲ್ಲಿ ಪ್ರವಾಸಿಗರನ್ನು ಸೆಳೆಯಲು ಹಲವು ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. ಮೆಕ್ಸಿಕೋದಲ್ಲಿ ಮೂಲಂಗಿ ಹಬ್ಬ, ಚೀನಾದಲ್ಲಿ ಐಸ್ ಪ್ರತಿಮೆಗಳ ಹಬ್ಬ, ಬ್ರೆಜಿಲ್‌ನಲ್ಲಿ ಮಡ್ ಫೆಸ್ಟ್, ಸ್ಪೇನ್‌ನಲ್ಲಿ ಟೊಮ್ಯಾಟೋ ಫೆಸ್ಟಿವಲ್, ಮೊರಾಕ್ಕೋದಲ್ಲಿ ಮ್ಯೂಸಿಕ್ ಫೆಸ್ಟಿವಲ್, ಸ್ವಿಟ್ಜರ್ಲೆಂಡ್‌ನಲ್ಲಿ ಝಾಜ್ ಸಂಗೀತ ಹಬ್ಬಗಳು ನಡೆಯುತ್ತಿರುವುದು ಪ್ರವಾಸೋದ್ಯಮ ಅಭಿವೃದ್ಧಿಯ ಭಾಗವಾಗಿಯೇ. ಅದೇ ರೀತಿ ಕೊಡಗು ಜಿಲ್ಲಾಡಳಿತ ಉತ್ಸವಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳಬಹುದು.