‘ಹೆಚ್ಚು ಉದ್ಯೋಗಳಿದ್ದರೆ ಮೀಸಲಾತಿ ಏಕೆ?’; ಮೋದಿ ಹಳೇ ಮಾತು ನೆನಪಿಸಿದ ಟಿಎಂಸಿ ಸಂಸದ!
ಸುದ್ದಿ ಸಾರ

‘ಹೆಚ್ಚು ಉದ್ಯೋಗಳಿದ್ದರೆ ಮೀಸಲಾತಿ ಏಕೆ?’; ಮೋದಿ ಹಳೇ ಮಾತು ನೆನಪಿಸಿದ ಟಿಎಂಸಿ ಸಂಸದ!

“ನಿಮಗೆ ಕೆಲಸ ಇಲ್ಲವಾದರೆ ಬಿಜೆಪಿ ನಿಮ್ಮನ್ನು ಟ್ರೋಲ್‌ ಆರ್ಮಿಗೆ ಸೇರಿಸಿಕೊಳ್ಳುತ್ತದೆ” ಎಂದಿದ್ದಾರೆ ಒ’ಬ್ರಾಯಿನ್‌.

“ಉದ್ಯೋಗಾವಕಾಶಗಳು ಹೆಚ್ಚಾಗಿದ್ದರೆ ಜನ ಮೀಸಲಾತಿ ಏಕೆ ಕೇಳುತ್ತಾರೆ. ನಾವು ಕೊರತೆಯ ವ್ಯವಸ್ಥೆ ಬಿಟ್ಟು ಸಮೃದ್ಧತೆಯ ವ್ಯವಸ್ಥೆಯ ಕಡೆಗೆ ಹೋಗಬೇಕು…”

ಹೀಗೆಂದು ಹೇಳಿದ್ದು ಖುದ್ದು ನರೇಂದ್ರ ಮೋದಿ. ಈಗ ಮೇಲ್ಜಾತಿಗಳಿಗೆ 10% ಮೀಸಲಾತಿ ಜಾರಿಗೆ ಮುಂದಾಗಿರುವ ಇದೇ ಮೋದಿ 2013ರಲ್ಲಿ ಆಡಿದ್ದ ಮಾತುಗಳು ಇವು. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೀಸಲಾತಿಯ ಬಗ್ಗೆ ಹೀಗೆ ಮಾತನಾಡಿದ್ದ ಮೋದಿಯ ಹಳೆಯ ಮಾತುಗಳನ್ನು ಬುಧವಾರ ರಾಜ್ಯಸಭೆಯಲ್ಲಿ ನೆನಪಿಸಿದ್ದು ತೃಣಮೂಲ ಕಾಂಗ್ರೆಸ್‌ನ ಸಂಸದ ದೆರೆಕ್‌ ಒ’ಬ್ರಾಯಿನ್‌.

ಮೇಲ್ಜಾತಿಗಳಿಗೆ 10% ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ನೀಡಲು ಸಂವಿಧಾನದ (124ನೇ ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿರುವ ಎನ್‌ಡಿಎ ಸರಕಾರ, ಬುಧವಾರ ರಾಜ್ಯಸಭೆಯ ಒಪ್ಪಿಗೆಗಾಗಿ ಸದನದಲ್ಲಿ ಮಂಡಿಸಿದೆ.

ಮಸೂದೆಯ ಮೇಲಿನ ಚರ್ಚೆ ವೇಳೆ ಮಾತನಾಡಿದ ದೆರೆಕ್‌ ಒ’ಬ್ರಾಯಿನ್‌, ಮೀಸಲಾತಿಯ ಬಗ್ಗೆ ಮೋದಿ ಈ ಹಿಂದೆ ಹೇಳಿದ್ದ ಮಾತು ಹಾಗೂ ಮೀಸಲಾತಿಯ ಮಿತಿ 50% ಮೀರುವುದಿಲ್ಲ ಎಂದಿದ್ದ ಅರುಣ್‌ ಜೇಟ್ಲಿ ಮಾತುಗಳನ್ನು ಸದನದಲ್ಲಿ ಉಲ್ಲೇಖಿಸಿದ್ದಾರೆ.

2017ರ ಡಿಸೆಂಬರ್‌ ತಿಂಗಳಲ್ಲಿ ಅರುಣ್‌ ಜೇಟ್ಲಿ ಮಾತನಾಡಿದ್ದನ್ನು ಉಲ್ಲೇಖಿಸಿದ ಅವರು, ಸರಕಾರ ಹೊಸ ಮಸೂದೆಯಲ್ಲಿ ಬಡತನ ರೇಖೆಯ ಮಿತಿಯನ್ನು ದಿನಕ್ಕೆ 2,100 ರೂಪಾಯಿಗೆ ಹೆಚ್ಚಿಸಿದೆ. ಮೀಸಲಾತಿ ಮಾನದಂಡವಾಗಿರುವ ವಾರ್ಷಿಕ 8 ಲಕ್ಷ ರೂಪಾಯಿ ಮಿತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

“ಈ ಮಸೂದೆಯ ಮೂಲಕ ಬಿಜೆಪಿ ಭಾರತವನ್ನು ಮೋಸ ಮಾಡಲು ಹೊರಟಿದೆ. ದೇಶದಲ್ಲಿ ಒಂದು ಕಡೆಗೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ನಿರುದ್ಯೋಗಿ ಯುವಕರನ್ನು ‘ನಮೋ’ ಆಂದೋಲನಕ್ಕೆ ಬಳಸಿಕೊಳ್ಳಲಾಗುತ್ತಿದೆ. ನಿಮಗೆ ಕೆಲಸ ಇಲ್ಲವಾದರೆ ನಿಮ್ಮನ್ನು ಟ್ರೋಲ್‌ ಆರ್ಮಿಗೆ ಸೇರಿಸಿಕೊಳ್ಳುತ್ತಾರೆ” ಎಂದಿದ್ದಾರೆ ಒ’ಬ್ರಾಯಿನ್‌.

ಸಂಸದೀಯ ಪ್ರಕ್ರಿಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, “ಸಂಸತ್ತಿನಲ್ಲಿ ಕಾನೂನು ರೂಪಿಸುವ ಪ್ರಕ್ರಿಯೆಯ ಉಲ್ಲಂಘನೆಯಾಗುತ್ತಿದೆ. ಸಂಸದೀಯ ವ್ಯವಸ್ಥೆಯ ಈಗಿನ ಪ್ರಕ್ರಿಯೆ ನಮ್ಮಲ್ಲಿ ಆಕ್ರೋಶ ಹುಟ್ಟಿಸುವಂತಿದೆ. ಹಿಂದೆ ಶೇಕಡ 65ರಿಂದ 70ರಷ್ಟು ಮಸೂದೆಗಳು ಸಂಸತ್ತಿನಲ್ಲಿ ಪರಿಶೀಲನೆಗೆ ಒಳಪಡುತ್ತಿದ್ದವು. ಈಗ ಐದರಲ್ಲಿ ನಾಲ್ಕು ಮಸೂದೆಗಳು ಯಾವುದೇ ಪರಿಶೀಲನೆ ಇಲ್ಲದೆ ಅಂಗೀಕಾರವಾಗುತ್ತಿವೆ” ಎಂದಿದ್ದಾರೆ.