ರಾಮ ಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ; ವಿಚಾರಣೆಗೆ ಸಾಂವಿಧಾನಿಕ ಪೀಠ ರಚನೆ
ಸುದ್ದಿ ಸಾರ

ರಾಮ ಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ; ವಿಚಾರಣೆಗೆ ಸಾಂವಿಧಾನಿಕ ಪೀಠ ರಚನೆ

ಸೆಪ್ಟೆಂಬರ್‌ 30, 2010ರಂದು ಅಲಹಾಬಾದ್‌ ಹೈಕೋರ್ಟ್‌ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಈ ಪೀಠ ಕೈಗೆತ್ತಿಕೊಳ್ಳಲಿದೆ.

ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ರಚಿಸಿದೆ. ಮುಖ್ಯ ನ್ಯಾಯಮೂರ್ತಿ ನೇತೃತ್ವದ ಐವರು ಸದಸ್ಯರ ಈ ನ್ಯಾಯಪೀಠದಲ್ಲಿ ನ್ಯಾ. ಎಸ್‌. ಎ. ಬೊಬ್ಡೆ, ಎನ್‌. ವಿ. ರಮಣ, ಯು. ಯು. ಲಲಿತ್‌ ಮತ್ತು ಡಿ. ವೈ. ಚಂದ್ರಚೂಡ್ ಇರಲಿದ್ದಾರೆ.

ಈ ಸಂಬಂಧ ಸುಪ್ರೀಂ ಕೋರ್ಟ್‌ ಸುತ್ತೋಲೆ ಹೊರಡಿಸಿದ್ದು, ಇದೇ ಜನವರಿ 10ರಂದು ಬೆಳಿಗ್ಗೆ 10.30ಕ್ಕೆ ವಿಚಾರಣೆ ಆರಂಭವಾಗಲಿದೆ. ಈ ಹಿಂದೆ ಜನವರಿ 4ರಂದು 60 ಸೆಕೆಂಡುಗಳ ಆದೇಶ ನೀಡಿದ್ದ ಮುಖ್ಯ ನ್ಯಾಯಮೂರ್ತಿ ಗೊಗೋಯಿ ನೇತೃತ್ವದ ತ್ರಿ ಸದಸ್ಯ ಪೀಠ ಇದೇ ಜನವರಿ 10ರಿಂದ ಅಯೋಧ್ಯೆ ಪ್ರಕರಣದ ವಿಚಾರಣೆ ಆರಂಭವಾಗಲಿದೆ. ಅದಕ್ಕಾಗಿ ಪ್ರತ್ಯೇಕ ಪೀಠ ಸ್ಥಾಪಿಸುವುದಾಗಿ ಆದೇಶ ನೀಡಿತ್ತು. ಅದರಂತೆ ಇದೀಗ ಸಾಂವಿಧಾನಿಕ ಪೀಠವನ್ನು ರಚನೆ ಮಾಡಲಾಗಿದೆ.

ಸೆಪ್ಟೆಂಬರ್‌ 30, 2010ರಂದು ಅಲಹಾಬಾದ್‌ ಹೈಕೋರ್ಟ್‌ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಈ ಪೀಠ ಕೈಗೆತ್ತಿಕೊಳ್ಳಲಿದೆ. ಈ ಹಿಂದಿನ ಆದೇಶದಲ್ಲಿ ಅಲಹಾಬಾದ್‌ ಹೈಕೋರ್ಟ್‌ 2.77 ಎಕರೆಗಳ ರಾಮ ಜನ್ಮಭೂಮಿ - ಬಾಬರಿ ಮಸೀದಿ ವಿವಾದಿತ ಜಾಗವನ್ನು ನಿರ್ಮೋಹಿ ಅಖಾರಾ, ಸುನ್ನಿ ಸೆಂಟ್ರಲ್‌ ವಕ್ಫ್‌ ಬೋರ್ಡ್‌ ಮತ್ತು ರಾಮ್‌ಲಲ್ಲಾ ವಿರಾಜ್‌ಮಾನ್‌ಗೆ ಸಮಾನವಾಗಿ ಹಂಚುವಂತೆ ಆದೇಶಿಸಿತ್ತು.

ಇದರ ವಿರುದ್ಧ ಒಟ್ಟು 14 ಮೇಲ್ಮನವಿಗಳು ಸಲ್ಲಿಕೆಯಾಗಿವೆ. ಕಳೆದ ವರ್ಷದ ಅಕ್ಟೋಬರ್‌ 29ರಂದು ಜನವರಿ ಮೊದಲ ವಾರದಲ್ಲಿ ಈ ಪ್ರಕರಣಗಳ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಇದೇ ಸಂದರ್ಭದಲ್ಲಿ ಪ್ರಕರಣದ ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿ ಅಖಿಲ ಭಾರತ ಹಿಂದೂ ಮಹಾಸಭಾ ಸಲ್ಲಿಸಿದ್ದ ಅರ್ಜಿಯನ್ನು ಅದು ತಿರಸ್ಕರಿಸಿತ್ತು.

Also read: ‘ಮಸೀದಿ ಮುಸ್ಲಿಂ ಧರ್ಮದ ಅವಿಭಾಜ್ಯ ಅಂಗವಲ್ಲ’: ನೆನಪಿಸಿದ ಸುಪ್ರಿಂ ಕೋರ್ಟ್‌

Also read: ಜ.10ರಿಂದ ಅಯೋಧ್ಯೆ ಭೂ ವಿವಾದ ವಿಚಾರಣೆ: 60 ಸೆಕೆಂಡ್‌ ಕಲಾಪದಲ್ಲಿ ಸುಪ್ರೀಂಕೋರ್ಟ್‌ ಹೇಳಿದ್ದಿಷ್ಟೆ