samachara
www.samachara.com
ಎರಡನೇ ದಿನಕ್ಕೆ ಕಾಲಿಟ್ಟ ಮುಷ್ಕರ: ಹಲವೆಡೆ ನೀರಸ ಪ್ರತಿಕ್ರಿಯೆ, ಕೆಲವೆಡೆ ಹಿಂಸಾಚಾರ 
ಸುದ್ದಿ ಸಾರ

ಎರಡನೇ ದಿನಕ್ಕೆ ಕಾಲಿಟ್ಟ ಮುಷ್ಕರ: ಹಲವೆಡೆ ನೀರಸ ಪ್ರತಿಕ್ರಿಯೆ, ಕೆಲವೆಡೆ ಹಿಂಸಾಚಾರ 

ಕರ್ನಾಟಕದ ಮಟ್ಟಿಗೆ ಎರಡನೇ ದಿನ ‘ಭಾರತ್ ಬಂದ್‌’ ನೀರಸವಾಗಿದೆ. ಹಲವು ಭಾಗಗಳಲ್ಲಿ ಇಂದು ಬಂದ್‌ ನಡೆಯುತ್ತಿಲ್ಲ. ಕೆಲವು ಕಡೆಗಳಲ್ಲಿ ಭಾಗಶಃ ಬಂದ್‌ ಆಚರಿಸಲಾಗುತ್ತಿದೆ.

10ಕ್ಕೂ ಹೆಚ್ಚು ಕೇಂದ್ರ ಕಾರ್ಮಿಕ ಒಕ್ಕೂಟಗಳು ಕರೆ ನೀಡಿದ್ದ 48 ಗಂಟೆಗಳ ಭಾರತ್‌ ಬಂದ್‌ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಹಲವೆಡೆ ಒಂದೇ ದಿನದ ಬಂದ್‌ ಸಾಕೆನಿಸಿದ ಜನರು ಜನರು ಎರಡನೇ ದಿನ ಎಂದಿನಂತೆ ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ವಾಪಸ್‌ ಆಗಿದ್ದಾರೆ. ಇನ್ನು ಕೆಲವು ರಾಜ್ಯಗಳಲ್ಲಿ ಎರಡನೇ ದಿನವೂ ಬಂದ್‌ ಮುಂದುವರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸರಕಾರದ ‘ಜನ ವಿರೋಧಿ ನೀತಿ’ಯನ್ನು ವಿರೋಧಿಸಿ ಈ ಬಂದ್‌ಗೆ ಕರೆ ನೀಡಲಾಗಿತ್ತು. ಕನಿಷ್ಠ ಸಂಬಳ, ಸಾಮಾಜಿಕ ಭದ್ರತೆ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಬಂದ್‌ನ ಮೊದಲ ದಿನ ರೈಲು, ಬಸ್‌ ತಡೆ, ಪೊಲೀಸರ ಜತೆ ಸಂಘರ್ಷ, ಕಲ್ಲು ತೂರಾಟಕ್ಕೆ ಸಾಕ್ಷಿಯಾಗಿದೆ. ರಾಜಸ್ಥಾನವೊಂದರಲ್ಲೇ ಘರ್ಷಣೆಯಲ್ಲಿ 22ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರೆ 50ಕ್ಕೂ ಹೆಚ್ಚು ನಾಗರೀಕರು ಗಾಯಗೊಂಡಿದ್ದರು.

ಎರಡನೇ ದಿನ ಮತ್ತೆ ಹಲವೆಡೆ ಹಿಂಸಾಚಾರ ಏರ್ಪಟ್ಟಿದ್ದರೆ, ಜನರಿಗೆ ಬಂದ್‌ ಬಿಸಿಯೂ ತಟ್ಟಿದೆ. ಬ್ಯಾಂಕ್‌ ನೌಕರರು ಎರಡು ದಿನಗಳಿಂದ ಮುಷ್ಕರ ನಡೆಸುತ್ತಿರುವುದರಿಂದ ಜನರು ಹಣಕ್ಕಾಗಿ ಎಟಿಎಂಗಳ ಮೊರೆ ಹೋಗಿದ್ದಾರೆ. ಹೀಗಾಗಿ ಹೆಚ್ಚಿನ ನಗರಗಳಲ್ಲಿ ಎಟಿಎಂಗಳು ಬರಿದಾಗಿವೆ ಎಂದು ‘ನ್ಯೂಸ್‌18’ ವರದಿ ಮಾಡಿದೆ.

ಮುಂಬೈನಲ್ಲಿ ಮಂಗಳವಾರ ಬಂದ್‌ ಆರಂಭಿಸಿದ್ದ ‘ಬೆಸ್ಟ್‌ ಎಂಪ್ಲಾಯೀಸ್‌’ ನೌಕರರು ಬುಧವಾರವೂ ಬಂದ್‌ ಮುಂದುವರಿಸಿದ್ದಾರೆ. ಈ ಕಾರಣದಿಂದ ವಾಣಿಜ್ಯ ನಗರಿ ಮುಂಬೈನಲ್ಲಿ ಬೆರಳೆಣಿಕೆಯ ಬಸ್‌ಗಳು ಮಾತ್ರ ರಸ್ತೆಗೆ ಇಳಿದಿವೆ. ಮಹಾರಾಷ್ಟ್ರದಲ್ಲಿ ಮೊದಲ ದಿನದ ಬಂದ್‌ಗೆ ಬೆಂಬಲ ನೀಡಿದ್ದ ಶಿವ ಸೇನೆಯ ಕಾರ್ಮಿಕ ಒಕ್ಕೂಟ ಎರಡನೇ ದಿನದ ಬಂದ್‌ನಿಂದ ದೂರ ಸರಿದಿದೆ.

ಬಸ್‌ ಮುಷ್ಕರದ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗಲು ಕೇಂದ್ರ ರೈಲ್ವೇ ವಿಭಾಗವು ಥಾಣೆ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್‌, ಶಿವಾಜಿ ಟರ್ಮಿನಸ್‌ ಮತ್ತು ವಾಶಿ ಹಾಗೂ ಶಿವಾಜಿ ಟರ್ಮಿನಸ್‌ ಮತ್ತು ಪನ್ವೇಲಿ ನಡುವೆ ಹೆಚ್ಚುವರಿ ರೈಲುಗಳನ್ನು ಓಡಿಸುತ್ತಿದೆ.

ಇನ್ನು ಎಡ ಪಕ್ಷಗಳ ಅಸ್ತಿತ್ವದಲ್ಲಿರುವ ಪ್ರಮುಖ ರಾಜ್ಯ ಪಶ್ಚಿಮ ಬಂಗಾಳದಲ್ಲಿಯೂ ಜನರಿಗೆ ಬಂದ್‌ನ ಬಿಸಿ ತಟ್ಟಿದೆ. ಇಲ್ಲಿ ಮೊದಲ ದಿನ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸುವ, ಬಸ್‌ಗಳನ್ನು ಜಖಂಗೊಳಿಸುವ ಬೆಳವಣಿಗೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಎರಡನೇ ದಿನ ಹೆಲ್ಮೆಟ್‌ ಧರಿಸಿ ಬಸ್‌ ಚಲಾಯಿಸುವಂತೆ ಪಶ್ಚಿಮ ಬಂಗಾಳ ಸರಕಾರ ಬಸ್‌ ಚಾಲಕರಿಗೆ ಸೂಚನೆ ನೀಡಿದೆ. ಹೀಗಾಗಿ ಬಸ್‌ನೊಳಗೂ ಹೆಲ್ಮೆಟ್‌ ಧರಿಸಿ ಚಾಲಕರು ಇಲ್ಲಿ ಬಸ್‌ ಓಡಿಸುತ್ತಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳಾಚೆಗೂ ಹಿಂಸಾಚಾರಕ್ಕೆ ಪಶ್ಚಿಮ ಬಂಗಾಳ ಸಾಕ್ಷಿಯಾಗಿದೆ. ಹೌರಾದಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸದ್ಯ ಇಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ಬರುವ ಹೆಬ್ರಾದ ರೈಲ್ವೇ ಹಳಿ ಮೇಲೆ 5 ಕಚ್ಛಾ ಬಾಂಬ್‌ಗಳು ಪತ್ತೆಯಾಗಿವೆ. ಹೀಗಾಗಿ ಇಲ್ಲಿ ರೈಲ್ವೇ ಸಂಚಾರವನ್ನು ರದ್ದುಗೊಳಿಸಲಾಗಿದೆ. ರಾಜಧಾನಿ ಕೊಲ್ಕತ್ತಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಿಪಿಎಂ ನಾಯಕ ಸುಜನ್‌ ಚಕ್ರವರ್ತಿ ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದಾರೆ.

ಎಡಪಕ್ಷಗಳ ಆಡಳಿತವಿರುವ ಕೇರಳದಲ್ಲಿಯೂ ಪ್ರತಿಭಟನೆ ಮುಂದುವರಿದಿದೆ. ಇಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳು ಎರಡನೇ ದಿನವೂ ರಸ್ತೆ ಇಳಿದಿಲ್ಲ. ಇನ್ನೊಂದು ಕಡೆ ರೈಲು ತಡೆಯೂ ಮುಂದುವರಿದಿದೆ. ಹೀಗಾಗಿ ರಾಜ್ಯದ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ರಾಜಧಾನಿ ತಿರುವನಂತಪುರಂನಲ್ಲಿ ಸರ್ಕಾರಿ ಕಾರ್ಯಾಲಯದ ಸಮೀಪದಲ್ಲೇ ತೆರೆದುಕೊಂಡಿದ್ದ ಎಸ್‌ಬಿಐ ಟ್ರೆಷರಿ ಶಾಖೆ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದು ಬ್ಯಾಂಕ್‌ ಮ್ಯಾನೇಜರ್‌ರನ್ನು ಎಳೆದಾಡಿದ್ದಾರೆ.

ಕರ್ನಾಟಕದಲ್ಲಿ ಬಂದ್‌:

ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ಕಲ್ಲು ತೂರಾಟ.
ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ಕಲ್ಲು ತೂರಾಟ.
/ನ್ಯೂಸ್‌18

ಕರ್ನಾಟಕದ ಮಟ್ಟಿಗೆ ಎರಡನೇ ದಿನ ಬಂದ್‌ ನೀರಸವಾಗಿದೆ. ಹಲವು ಭಾಗಗಳಲ್ಲಿ ಇಂದು ಬಂದ್‌ ನಡೆಯುತ್ತಿಲ್ಲ. ಕೆಲವು ಕಡೆಗಳಲ್ಲಿ ಭಾಗಶಃ ಬಂದ್‌ ಆಚರಿಸಲಾಗುತ್ತಿದೆ. ರಾಜ್ಯ ಸಾರಿಗೆ ಸಂಸ್ಥೆಯ ಶೇಕಡಾ 80 ರಷ್ಟು ಬಸ್‌ಗಳು ಇಂದು ರಸ್ತೆಗಿಳಿದಿದ್ದು 12 ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು ವರದಿಯಾಗಿದೆ.

ಬೆಂಗಳೂರಿನ ವಿಲ್ಸನ್‌ ಗಾರ್ಡನ್‌, ನೆಲಮಂಗಲ ರೋಡ್‌, ಮೈಸೂರು ರಸ್ತೆ, ಆಡುಗೋಡಿ ಮತ್ತು ಮಾದನಾಯನಹಳ್ಳಿಯಲ್ಲಿ ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಬಿಎಂಟಿಸಿಯ ಕೇವಲ ಶೇಕಡಾ 10-15ರಷ್ಟು ಬಸ್‌ಗಳು ಮಾತ್ರ ರಸ್ತೆಗೆ ಇಳಿದಿವೆ.

ದೇಶದಾದ್ಯಂತ ನಡೆಯುತ್ತಿರುವ ಬಂದ್‌ನ ಕೇಂದ್ರ ಭಾಗವಾಗಿ ಇಂದು ಮಧ್ಯಾಹ್ನ ದೆಹಲಿಯ ಮಂಡಿ ಹೌಸ್‌ನಿಂದ ಸಂಸತ್‌ ಭವನದವರೆಗೆ ಪಾದಯಾತ್ರೆ ನಡೆಸಲು ಕಾರ್ಮಿಕ ಒಕ್ಕೂಟಗಳು ಸಜ್ಜಾಗಿವೆ.