‘ಪಪ್ಪು’ ಅನ್ನುತ್ತಲೇ  #1 ಸ್ಥಾನಕ್ಕೆ ಏರಿಸಿದರು; ಗೂಗಲ್ ಹುಡುಕಾಟದಲ್ಲಿ ಮೋದಿ ಹಿಂದಿಕ್ಕಿದ ರಾಹುಲ್!
ಸುದ್ದಿ ಸಾರ

‘ಪಪ್ಪು’ ಅನ್ನುತ್ತಲೇ #1 ಸ್ಥಾನಕ್ಕೆ ಏರಿಸಿದರು; ಗೂಗಲ್ ಹುಡುಕಾಟದಲ್ಲಿ ಮೋದಿ ಹಿಂದಿಕ್ಕಿದ ರಾಹುಲ್!

ಕಳೆದ ಒಂದು ವರ್ಷದ ಅವಧಿಯಲ್ಲಿ ವಿಶ್ವದಾದ್ಯಂತ ಇರುವ ಭಾರತೀಯರು ಹೆಚ್ಚು ಹುಡುಕಿದ ನಾಯಕ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಎನ್ನುತ್ತಿದೆ ಗೂಗಲ್ ನ್ಯೂಸ್ ವರದಿ.

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕೆಲವು ಮೂಲಗಳ ಪ್ರಕಾರ ಭಾರತೀಯ ಚುನಾವಣಾ ಆಯೋಗ 2019ರ ಏಪ್ರಿಲ್‌ನಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಇದೆ. ಕುತೂಹಲ ಮೂಡಿಸಿರುವ ಲೊಕಸಭಾ ಚುನಾವಣೆಯನ್ನು ಬಿಜೆಪಿ ಕಾಂಗ್ರೆಸ್ ನಡುವಿನ ಫೈಟ್ ಎನ್ನುವುದಕ್ಕಿಂತ, ಮೋದಿ ಹಾಗೂ ರಾಹುಲ್ ಗಾಂಧಿ ನಡುವಿನ ಫೈಟ್ ಎಂದೇ ಬಿಂಬಿಸಲಾಗುತ್ತಿದೆ. ಈ ನಡುವೆ ಗೂಗಲ್ ನ್ಯೂಸ್ ಸಮೀಕ್ಷೆಯೊಂದನ್ನು ಬಿಡುಗಡೆ ಮಾಡಿದ್ದು, ಕಳೆದ ಒಂದು ವರ್ಷದಲ್ಲಿ ಭಾರತೀಯರು ಯಾವ ನಾಯಕನನ್ನು ಹೆಚ್ಚು ಹುಡುಕಿದರು ಎಂಬ ಕುರಿತು ಇಂಟರೆಸ್ಟಿಂಗ್ ಮಾಹಿತಿ ನೀಡಿದೆ.

ಮೋದಿಯನ್ನು ಹಿಂದಿಕ್ಕಿದ ರಾಹುಲ್

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯನ್ನು ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ‘ಪಪ್ಪು’ ಎಂದೇ ಹೀಯಾಳಿಸಿತ್ತು. ಅಲ್ಲದೆ ರಾಹುಲ್ ಗಾಂಧಿ ವಿರುದ್ಧ ಹಾಸ್ಯಾಸ್ಪದ ವಿಚಾರಗಳನ್ನು ಹರಡುವುದಕ್ಕಾಗಿಯೇ ಬಿಜೆಪಿಯ ಐಟಿ ಸೆಲ್ ಸಾಮಾಜಿಕ ಜಾಲತಾಣಗಳಲ್ಲಿ ಕೆಲಸ ಮಾಡುತ್ತಿತ್ತು. ಜನಪ್ರಿಯತೆಯಲ್ಲಿ ನರೇಂದ್ರ ಮೋದಿಯನ್ನು ಮೀರಿಸುವ ನಾಯಕನೇ ಇಲ್ಲ ಎಂಬಂತೆ ಬಿಂಬಿಸಲಾಗುತ್ತಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹುಡುಕಲ್ಪಟ್ಟ ರಾಜಕೀಯ ನಾಯಕ ಎಂಬ ಶ್ರೇಯ ಪ್ರಧಾನಿ ನರೇಂದ್ರ ಮೋದಿ ಅವರ ಪಾಲಾಗಿತ್ತು. ಆದರೆ 2019ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆ ಸ್ಥಾನವನ್ನು ಮೋದಿಯಿಂದ ರಾಹುಲ್ ಗಾಂಧಿ ಕಸಿದುಕೊಂಡಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ವಿಶ್ವದಾದ್ಯಂತ ಇರುವ ಭಾರತೀಯರು ಹೆಚ್ಚು ಹುಡುಕಿದ ನಾಯಕ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಎನ್ನುತ್ತಿದೆ ಗೂಗಲ್ ನ್ಯೂಸ್ ವರದಿ.

ಈ ಕುರಿತು ಗೂಗಲ್ ನ್ಯೂಸ್ ವರದಿ ನೀಡಿದ್ದು, "ವಿಶ್ವದಾದ್ಯಂತ ಇರುವ ಭಾರತೀಯರಲ್ಲಿ 100 ಜನರ ಪೈಕಿ 45 ಜನ ಗೂಗಲ್‌ನಲ್ಲಿ ರಾಹುಲ್ ಗಾಂಧಿಯನ್ನು ಹುಡುಕಿದರೆ, 34 ಜನ ಪ್ರಧಾನಿ ನರೇಂದ್ರ ಮೋದಿ ಕುರಿತ ಮಾಹಿತಿಯನ್ನು ಹುಡುಕಿದ್ದಾರೆ. 2018 ಜನವರಿ 1 ರಿಂದ 2019 ಜನವರಿ 6 ರವರೆಗೆ ಭಾರತೀಯರು ಗೂಗಲ್‌ನಲ್ಲಿ ನಡೆಸಿರುವ ಹುಡುಕಾಟವನ್ನು ಆಧರಿಸಿ ಈ ಮಾಹಿತಿಯನ್ನು ನೀಡಲಾಗಿದೆ" ಎಂದು ಸಂಸ್ಥೆ ಸ್ಪಷ್ಡಪಡಿಸಿದೆ.

ಭಾರತೀಯ ಚುನಾವಣೆಗಳ ಮಟ್ಟಿಗೆ ಪ್ರಚಾರ ಎಂಬುದು ಧನಾತ್ಮಕವೋ? ಅಥವಾ ಋಣಾತ್ಮಕವೋ ಎಂಬುದಕ್ಕಿಂತ, ಯಾವುದೇ ರೀತಿಯಲ್ಲಿ ಪ್ರಚಾರಕ್ಕೆ ಬಂದರೂ ಅದು ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಈ ಅಂಕಿಅಂಶಗಳೂ ಸಹ ಇದಕ್ಕೆ ಪುಷ್ಠಿ ನೀಡುತ್ತವೆ. ಒಟ್ಟಲ್ಲಿ ಸುಮ್ಮನಿದ್ದ ರಾಹುಲ್ ಗಾಂಧಿಯ ವಿರುದ್ಧ ಬಿಜೆಪಿ ಐಟಿ ಸೆಲ್ ಋಣಾತ್ಮಕ ಪ್ರಚಾರ ನಡೆಸಿಯೇ ಆತನನ್ನು ಎತ್ತರಕ್ಕೇ ಏರಿಸಿತೇ? ಅಥವಾ ರಾಹುಲ್ ಗಾಂಧಿ ನಿಜಕ್ಕೂ ಜನನಾಯಕನಾಗಿ ಬದಲಾಗುತ್ತಿದ್ದಾರಾ? ಹೊಸ ಸಮೀಕ್ಷೆ ನೀಡುತ್ತಿರುವ ಒಳನೋಟಗಳ ಪರಿಣಾಮಗಳನ್ನು ಮುಂದಿನ ಚುನಾವಣೆ ಫಲಿತಾಂಶ ನಿಚ್ಚಳವಾಗಿಸಲಿದೆ.