samachara
www.samachara.com
ಬಿಜೆಪಿ ಸೋಲಿಸಲು ಮಹಾಮೈತ್ರಿ; ನವೀನ್ ಪಟ್ನಾಯಕ್ ಮನಸ್ಸಿನಲ್ಲೇನಿದೆ?
ಸುದ್ದಿ ಸಾರ

ಬಿಜೆಪಿ ಸೋಲಿಸಲು ಮಹಾಮೈತ್ರಿ; ನವೀನ್ ಪಟ್ನಾಯಕ್ ಮನಸ್ಸಿನಲ್ಲೇನಿದೆ?

“ಮೋದಿ ನೇತೃತ್ವದ ಬಿಜೆಪಿ ಸರಕಾರ 2014ರ ಚುನಾವಣೆಯಲ್ಲಿ ತಾನು ನೀಡಿದ ಎಲ್ಲಾ ಭರವಸೆಗಳನ್ನು ಹುಸಿಗೊಳಿಸಿದೆ. ಜನರು ಸರ್ಕಾರದ ಮೇಲಿಟ್ಟಿದ್ದ ಭರವಸೆಯನ್ನೇ ಕಳೆದುಕೊಂಡಿದ್ದಾರೆ” ಎಂದು ನವೀನ್ ಪಟ್ನಾಯಕ್  ಕೇಂದ್ರ ಸರಕಾರವನ್ನು ದೂರಿದ್ದಾರೆ.

ಆಡಳಿತರೂಢ ಬಿಜೆಪಿ ಪಕ್ಷದ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿರುವ ಮಹಾಘಟಬಂಧನ್ ಜೊತೆ ಕೈಜೋಡಿಸುವ ಕುರಿತು ಯೋಚಿಸಲು ಇನ್ನೂ ಕಾಲಾವಕಾಶ ಬೇಕಿದೆ ಎಂದು ಬಿಜು ಜನತಾ ದಳ (ಬಿಜೆಡಿ) ಪಕ್ಷದ ಮುಖ್ಯಸ್ಥ ಹಾಗೂ ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.

ಭತ್ತದ ಬೆಳೆಗೆ ಕೇಂದ್ರ ಸರಕಾರ ಕ್ವಿಂಟಾಲ್‌ಗೆ ಕನಿಷ್ಟ 2,930 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಬಿಜೆಡಿ ಪಕ್ಷದ ಬೆಂಬಲದೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ರೈತರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, "ಬಿಜೆಡಿ ಪಕ್ಷವು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳ ಜೊತೆಗೆ ಸಮಾನ ಅಂತರ ಕಾಯ್ದುಕೊಂಡಿದೆ. ಆದರೆ ಬಿಜೆಪಿ ಪಕ್ಷಕ್ಕೆ ವಿರುದ್ಧವಾಗಿ ವಿರೋಧ ಪಕ್ಷಗಳು ಒಟ್ಟಾಗಿರುವ ಮಹಾಘಟಬಂಧನದ ಭಾಗವಾಗಬೇಕೆ? ಅಥವಾ ಬೇಡವೇ? ಎಂಬ ಕುರಿತು ಯೋಚಿಸಲು ಇನ್ನೂ ಸಮಯಾವಕಾಶಬೇಕು," ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದ ನವೀನ್ ಪಟ್ನಾಯಕ್, "ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಘೋಷಿಸುವುದು, ರೈತರ ಹಿತ ಕಾಪಾಡುವುದು ಕೇಂದ್ರ ಸರಕಾರದ ಜವಾಬ್ದಾರಿ. ಆದರೆ ಕೇಂದ್ರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಮೋದಿ ನೇತೃತ್ವದ ಬಿಜೆಪಿ ಸರಕಾರ 2014ರ ಲೋಕಸಭಾ ಚುನಾವಣೆಯಲ್ಲಿ ತಾನು ನೀಡಿದ ಎಲ್ಲಾ ಭರವಸೆಗಳನ್ನು ಹುಸಿಗೊಳಿಸಿದೆ. ಜನರು ಸರಕಾರದ ಮೇಲಿಟ್ಟಿದ್ದ ಭರವಸೆಯನ್ನೇ ಕಳೆದುಕೊಂಡಿದ್ದಾರೆ. " ಎಂದು ದೂರಿದರು.

ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನಾ ರ್ಯಾಲಿಯಲ್ಲಿ ಒಡಿಸ್ಸಾರೈತರು "ಸುಳ್ಳು ಭರವಸೆಗಳ ಸರ್ಕಾರ" ಎಂದು ಘೋಷಣೆ ಕೂಗುತ್ತಾ ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.