samachara
www.samachara.com
ಮೇಲ್ಜಾತಿ ಬಡವರಿಗೆ 10% ಮೀಸಲಾತಿ: ಮಂಡನೆಯಾದ ಮಸೂದೆಯಲ್ಲೇನಿದೆ?
ಸುದ್ದಿ ಸಾರ

ಮೇಲ್ಜಾತಿ ಬಡವರಿಗೆ 10% ಮೀಸಲಾತಿ: ಮಂಡನೆಯಾದ ಮಸೂದೆಯಲ್ಲೇನಿದೆ?

ಮೋದಿ ಸರಕಾರಕ್ಕೆ ನಿಜವಾಗಿಯೂ ಆರ್ಥಿಕವಾಗಿ ದುರ್ಬಲರಾಗಿರುವವರ ಬಗ್ಗೆ ಕಾಳಜಿ ಇದ್ದಿದ್ದರೆ ಈ ಮಸೂದೆಯನ್ನು ಸಂಸತ್ತಿನ ಮೊದಲ ಅಧಿವೇಶನದಲ್ಲೇ ಮಂಡಿಸಬೇಕಿತ್ತು ಎಂದು ವಿಪಕ್ಷಗಳು ಟೀಕಿಸಿವೆ.

ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಜಾತಿಗಳನ್ನು ಹೊರತು ಪಡಿಸಿ, ಉಳಿದ ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ 10% ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ನೀಡಲು ಸಂವಿಧಾನದ 15 ಮತ್ತು 16ನೇ ವಿಧಿಗಳಿಗೆ ತಿದ್ದುಪಡಿ ತರುವ ‘ಸಂವಿಧಾನದ 124ನೇ ತಿದ್ದುಪಡಿ ಮಸೂದೆ-2019’ ಅನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ತಾವರ್‌ಚಂದ್‌ ಗೆಹ್ಲೋಟ್‌ ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿದ್ದಾರೆ.

ಹೊಸ ಕರಡು ಮಸೂದೆಯ ಪ್ರಕಾರ ಈಗ ಮೀಸಲಾತಿ ಪಡೆಯುತ್ತಿರುವ ಜಾತಿಗಳನ್ನು ಹೊರತು ಪಡಿಸಿ ಉಳಿದ ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ 10% ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.

ಕರಡು ಮಸೂದೆಯಲ್ಲಿ ಎಲ್ಲೂ ಮೇಲ್ಜಾತಿಗಳು ಎಂಬ ಉಲ್ಲೇಖವಿಲ್ಲ. ಸಂವಿಧಾನದ ಪ್ರಕಾರ ಈಗಾಗಲೇ ಮೀಸಲಾತಿ ಪಡೆಯುತ್ತಿರುವವರನ್ನು ಹೊರತು ಪಡಿಸಿ, ಉಳಿದ ವರ್ಗದ ಆರ್ಥಿಕ ದುರ್ಬಲರನ್ನು ಸಾಮಾಜಿಕವಾಗಿ ಮೇಲೆತ್ತುವ ಸಲುವಾಗಿ ಈ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಕರಡು ಮಸೂದೆಯಲ್ಲಿ ಹೇಳಲಾಗಿದೆ.

ಕರಡು ಮಸೂದೆಯಲ್ಲಿ ಆರ್ಥಿಕವಾಗಿ ದುರ್ಬಲರನ್ನು ಗುರುತಿಸುವ ಮಾನದಂಡಗಳ ಪ್ರಸ್ತಾವವಿಲ್ಲ. ಆದರೆ, ಯಾವ ಕಾರಣಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರಲಾಗುತ್ತಿದೆ ಎಂಬ ಬಗ್ಗೆ ಕರಡಿನಲ್ಲಿ ಉಲ್ಲೇಖಿಸಲಾಗಿದೆ. “ಕುಟುಂಬದ ಆದಾಯ ಹಾಗೂ ಇತರೆ ಆರ್ಥಿಕ ಮಾನದಂಡಗಳ ಆಧಾರದ ಮೇಲೆ ‘ಆರ್ಥಿಕವಾಗಿ ದುರ್ಬಲ ವರ್ಗ’ ಎಂದರೆ ಯಾರು ಎಂಬುದನ್ನು ಸರಕಾರ ಕಾಲಕಾಲಕ್ಕೆ ನಿರ್ಧರಿಸಬಹುದು” ಎಂದು ಮಸೂದೆಯಲ್ಲಿ ಹೇಳಲಾಗಿದೆ.

“ಆರ್ಥಿಕವಾಗಿ ಸಬಲರಾಗಿರುವವರ ಜತೆಗೆ ಸ್ಪರ್ಧಿಸಲಾಗದೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸರಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ಹಿಂದುಳಿದವರು ಪ್ರಾತಿನಿಧ್ಯಗಳಿಂದ ದೂರವೇ ಉಳಿದಿದ್ದಾರೆ. ಸಂವಿಧಾನದ 15ನೇ ವಿಧಿಯ 4 ಮತ್ತು 5ನೇ ಉಪವಿಧಿಗಳು ಹಾಗೂ 16ನೇ ವಿಧಿಯ ಮೀಸಲಾತಿ ಸೌಲಭ್ಯಗಳಿಂದ ಈ ಆರ್ಥಿಕ ದುರ್ಬಲ ವಂಚಿತವಾಗಿದೆ” ಎಂದು ಕರಡು ಮಸೂದೆಯ ‘ಆಶಯ’ಗಳಲ್ಲಿ ಹೇಳಲಾಗಿದೆ.

“ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ 46ನೇ ವಿಧಿಯಲ್ಲಿ ಹೇಳಿರುವಂತೆ ಸಮಾಜದ ದುರ್ಬಲ ವರ್ಗವನ್ನು ಮೇಲೆತ್ತಲು ಸರಕಾರ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ. ದೇಶದಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಶೈಕ್ಷಣಿಕವಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು ಸಂವಿಧಾನದ 15ನೇ ವಿಧಿಯ 5ನೇ ಉಪವಿಧಿಯಡಿ ಅವಕಾಶವಿದೆ. ಹಾಗೆಯೇ 16ನೇ ವಿಧಿಯ 4ನೇ ಉಪವಿಧಿಯಡಿ ಆರ್ಥಿಕ ದುರ್ಬಲ ವರ್ಗಕ್ಕೆ ಉದ್ಯೋಗದಲ್ಲಿ ಪ್ರಾತಿನಿಧ್ಯ ನೀಡಬಹುದಾಗಿದೆ” ಎಂದು ಹೇಳಲಾಗಿದೆ.

“ಸಂವಿಧಾನದ 46ನೇ ವಿಧಿಯ ಆಶಯಗಳನ್ನು ಈಡೇರಿಸಲು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮೇಲೆತ್ತಲು ಸಂವಿಧಾನಕ್ಕೆ ತಿದ್ದುಪಡಿ ತರಲಾಗುತ್ತಿದೆ. ಈ ತಿದ್ದುಪಡಿ ಮಸೂದೆಯ ಮೂಲಕ ದೇಶದ ಯಾವ ಯಾವ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಮೀಸಲಾತಿ ಇದೆಯೋ ಅಲ್ಲೆಲ್ಲಾ ಹಾಗೂ ಸರಕಾರದ ನೇಮಕಾರಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲಾಗುವುದು” ಎನ್ನಲಾಗಿದೆ.