samachara
www.samachara.com
ಆರ್‌ಕಾಂ ವಿರುದ್ಧ ಎರಿಕ್ಸನ್ ದೂರು; ಅನಿಲ್ ಅಂಬಾನಿಗೆ ಸುಪ್ರೀಂಕೋರ್ಟ್ ನೋಟಿಸ್
ಸುದ್ದಿ ಸಾರ

ಆರ್‌ಕಾಂ ವಿರುದ್ಧ ಎರಿಕ್ಸನ್ ದೂರು; ಅನಿಲ್ ಅಂಬಾನಿಗೆ ಸುಪ್ರೀಂಕೋರ್ಟ್ ನೋಟಿಸ್

ಅನಿಲ್‌ ಅಂಬಾನಿ ಒಡೆತನದ ಆರ್‌ಕಾಂ ಪಾವತಿಸಬೇಕಿರುವ 550 ಕೋಟಿ ರೂಪಾಯಿ ಬಾಕಿಯನ್ನು ಒಂದೇ ಕಂತಿನಲ್ಲಿ ನೀಡುವಂತೆ ಎರಿಕ್ಸನ್‌ ಕಂಪನಿ ಪಟ್ಟು ಹಿಡಿದಿದೆ.

ಎರಿಕ್ಸನ್ ಕಂಪನಿಯ ದೂರಿನ ಆಧಾರದ ಮೇಲೆ ಸುಪ್ರೀಂಕೋರ್ಟ್ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (ಆರ್‌ಕಾಂ ) ಅಧ್ಯಕ್ಷ ಅನಿಲ್ ಅಂಬಾನಿಗೆ ನೋಟಿಸ್ ಜಾರಿ ಮಾಡಿದೆ. ನೋಟಿಸ್‌ ಜಾರಿ ಮಾಡಿರುವ ನ್ಯಾಯಮೂರ್ತಿ ಆರ್‌.ಎಫ್‌. ನಾರಿಮನ್‌ ಅವರಿದ್ದ ನ್ಯಾಯಪೀಠ ನಾಲ್ಕು ವಾರಗಳಲ್ಲಿ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಿದೆ.

ಸ್ವೀಡನ್ ಮೂಲದ ದೂರ ಸಂಪರ್ಕ ಉಪಕರಣಗಳ ನಿರ್ಮಾಣ ಕಂಪನಿ ಎರಿಕ್ಸನ್‌ಗೆ ಅನಿಲ್ ಅಂಬಾನಿ ಅಧ್ಯಕ್ಷರಾಗಿರುವ ಆರ್‌ಕಾಂ 550 ಕೋಟಿ ರೂಪಾಯಿ ಬಾಕಿ ಪಾವತಿಸಬೇಕಿತ್ತು. ಅಂಬಾನಿ ಈ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಎರಿಕ್ಸನ್ ಕಂಪನಿ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯದ ಹಲವು ಬಾರಿ ಅಂಬಾನಿಗೆ ಗಡುವು ನೀಡಿದ್ದರೂ ಅಂಬಾನಿ ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಿರಲಿಲ್ಲ.

Also read: ‘ಅಂಬಾನಿಯನ್ನು ಜೈಲಿಗಾಕಿ’; ಸುಪ್ರಿಂ ಕೋರ್ಟ್‌ನಲ್ಲಿ ಎರಿಕ್ಸನ್ ಮನವಿ 

ಸೆಪ್ಟೆಂಬರ್ 30ರೊಳಗೆ ಬಾಕಿ ಹಣ ಪಾವತಿಸುವಂತೆ ಈ ಹಿಂದೆ ಕೋರ್ಟ್‌ ಗಡುವು ನೀಡಿತ್ತು. ಆದರೆ, ಅಂಬಾನಿ ಆ ಆದೇಶ ಪಾಲಿಸಿರಲಿಲ್ಲ. ಹೀಗಾಗಿ ಎರಿಕ್ಸನ್ ಕಂಪೆನಿ ಅಕ್ಟೋಬರ್‌ನಲ್ಲಿ ಪುನಃ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಡಿಸೆಂಬರ್ 15ರೊಳಗೆ ಬಾಕಿ ಪಾವತಿಸುವಂತೆ ಸುಪ್ರೀಂಕೋರ್ಟ್‌ ಅಂಬಾನಿಗೆ ಎರಡನೇ ಬಾರಿ ಗಡುವು ನೀಡಿತ್ತು. ಆದರೆ, ಅಂಬಾನಿ ಅದಕ್ಕೂ ಸೊಪ್ಪು ಹಾಕಿರಲಿಲ್ಲ. ಕೋರ್ಟ್‌ ಆದೇಶ ಪಾಲಿಸದ ಅಂಬಾನಿಯನ್ನು ಜೈಲಿಗೆ ಹಾಕಿ ಎಂದು ಎರಿಕ್ಸನ್ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು.

ಆರ್‌ಕಾಂ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ಮುಕುಲ್‌ ರೋಹ್ಟಗಿ ಪಾವತಿಸಬೇಕಾಗಿರುವ ಹಣದ ಪೈಕಿ 118 ಕೋಟಿ ರೂಪಾಯಿಯನ್ನು ಸ್ವೀಕರಿಸಲು ಎರಿಕ್ಸನ್‌ ಒಪ್ಪಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಆದರೆ, 118 ಕೋಟಿ ರೂಪಾಯಿ ಪಡೆಯಲು ಒಪ್ಪದ ಎರಿಕ್ಸನ್‌ ಪರ ವಕೀಲರು ಪೂರ್ತಿ ಹಣ ಪಾವತಿಸುವಂತೆ ನ್ಯಾಯಾಲಯದಲ್ಲಿ ಬೇಡಿಕೆ ಇಟ್ಟರು. ಆದಾಗ್ಯೂ ಆರ್‌ಕಾಂ ನೀಡಲು ಸಿದ್ಧವಿರುವ 118 ಕೋಟಿ ರೂಪಾಯಿಯನ್ನು ರಿಜಿಸ್ಟ್ರಿಯಲ್ಲಿ ಡಿಡಿ ಮೂಲಕ ಇಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.