ಬರಿದಾದ ಪಾಕ್ ಖಜಾನೆ; ಜಾಗತಿಕ ಭಿಕ್ಷಾಟನೆಗೆ ಹೊರಟ ಇಮ್ರಾನ್‌ ಖಾನ್‌!
ಸುದ್ದಿ ಸಾರ

ಬರಿದಾದ ಪಾಕ್ ಖಜಾನೆ; ಜಾಗತಿಕ ಭಿಕ್ಷಾಟನೆಗೆ ಹೊರಟ ಇಮ್ರಾನ್‌ ಖಾನ್‌!

ಪಾಕಿಸ್ತಾನ 10.5 ಲಕ್ಷ ಕೋಟಿ ರೂ. ಸಾಲದಲ್ಲಿದೆ. ಈ ಸಾಲ ಕಟ್ಟುವುದು ಒತ್ತಟ್ಟಿಗಿರಲಿ ಅಕ್ಟೋಬರ್ ಅಂತ್ಯಕ್ಕೆ ಪಾಕಿಸ್ತಾನ ಅನುಭವಿಸುತ್ತಿದ್ದ ನಗದು ಕೊರತೆ ಪ್ರಮಾಣ ಬರೋಬ್ಬರಿ 2.52 ಲಕ್ಷ ಕೋಟಿ ರೂ.!

ಪಾಕಿಸ್ತಾನ ತೀವ್ರ ಹಣದ ಕೊರತೆ ಎದುರಿಸುತ್ತಿದೆ. ಅಭಿವೃದ್ಧಿ ಕಾರ್ಯಗಳು ಬಿಟ್ಟಾಕಿ, ಸರಕಾರ ನಡೆಸಲೂ ದೇಶದ ಬಳಿಯಲ್ಲಿ ದುಡ್ಡಿಲ್ಲ. ಹೀಗಾಗಿ ಜಾಗತಿಕ ಭಿಕ್ಷೆ ಎತ್ತಲು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಸಜ್ಜಾಗಿದ್ದಾರೆ.

ಪಾಕಿಸ್ತಾನ ಆರ್ಥಿಕ ಸಂಕಷ್ಟದಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೇ ಕಾರಣಕ್ಕಾಗಿ ಅಧಿಕಾರ ವಹಿಸಿಕೊಂಡ ನಂತರದ ಮೊದಲ ಭಾಷಣದಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, ತಮ್ಮ ಸಚಿವಾಲಯದ ಐಷಾರಾಮಿ ಕಾರ್ಯ ವೈಖರಿಯನ್ನೇ ವಿಮರ್ಶೆಗೆ ಒಳಪಡಿಸಿದ್ದರು. ದುಬಾರಿ ವಸ್ತುಗಳನ್ನು ಮಾರಾಟ ಮಾಡುವ, ಐಷಾರಾಮಿ ಸೇವೆಗಳನ್ನು ರದ್ದುಗೊಳಿಸುವ ಮಾತುಗಳನ್ನಾಡಿದ್ದರು. ಆದರೆ ಇವೆಲ್ಲಾ ಕುಂಭಕರ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಗಳಷ್ಟೇ.

ಅಂತರಾಷ್ಟ್ರೀಯ ವಲಯದಿಂದ ಸಾಲ ಎತ್ತಿರುವ ಪಾಕಿಸ್ತಾನ 10.5 ಲಕ್ಷ ಕೋಟಿ ರೂ. (ಪಾಕಿಸ್ತಾನ ರೂಪಾಯಿ) ಬಾಕಿ ಉಳಿಸಿಕೊಂಡಿದ್ದು ಕಟ್ಟಲು ಪರದಾಡುತ್ತಿದೆ. ಇದರಲ್ಲಿ ಹೆಚ್ಚಿನ ಹಣ ಚೀನಾಕ್ಕೆ ನೀಡಬೇಕಾಗಿದೆ. ಸಾಲ ಕಟ್ಟುವುದು ಒತ್ತಟ್ಟಿಗಿರಲಿ ಅಕ್ಟೋಬರ್ ಅಂತ್ಯಕ್ಕೆ ಬರೋಬ್ಬರಿ 2.52 ಲಕ್ಷ ಕೋಟಿ ರೂ. ನಗದು ಕೊರತೆಯನ್ನು ಪಾಕಿಸ್ತಾನ ಅನುಭವಿಸುತ್ತಿದೆ. ವಿದೇಶಿ ನಗದು ಮೀಸಲು ಪಾತಾಳಕ್ಕೆ ಕುಸಿದಿದೆ. ಇದನ್ನು ಸರಿದೂಗಿಸಲು ಇಮ್ರಾನ್‌ ಖಾನ್‌ ಒದ್ದಾಡುತ್ತಿದ್ದಾರೆ.

ಅವರು ಅಧ್ಯಕ್ಷರಾದ ಬಳಿಕ ಮಿತ್ರ ರಾಷ್ಟ್ರ ಸೌದಿ ಅರೇಬಿಯಾ ಒಂದಷ್ಟು ನೆರವು ನೀಡಿತ್ತು. ಕಳೆದ ವಾರ ಯುಎಇ ಕೂಡ 6.2 ಬಿಲಿಯನ್‌ ಡಾಲರ್‌ ನೆರವು ಘೋಷಿಸಿತ್ತು. 3.2 ಬಿಲಿಯನ್‌ ಡಾಲರ್‌ ಮೊತ್ತದ ತೈಲ ಮತ್ತು 3 ಬಿಲಿಯನ್‌ ಡಾಲರ್‌ (41.93 ಸಾವಿರ ಕೋಟಿ ರೂ.) ಹಣ ನೀಡುವುದಾಗಿ ಅದು ಹೇಳಿತ್ತು. ಇದೀಗ ಇಂಥಹದ್ದೇ ಒಂದಷ್ಟು ನೆರವುಗಳನ್ನು ಸಂಗ್ರಹಿಸಿ ಪಾಕಿಸ್ತಾನವನ್ನು ತುರ್ತು ಅಪಾಯದಿಂದ ತಪ್ಪಿಸುವ ಯೋಜನೆಯನ್ನು ಇಮ್ರಾನ್‌ ಖಾನ್‌ ಹಾಕಿಕೊಂಡಿದ್ದಾರೆ. ಅದಕ್ಕಾಗಿ ಕತಾರ್‌ ಜತೆ ನೈಸರ್ಗಿಕ ಅನಿಲ ಆಮದು ದರದಲ್ಲಿ ರಿಯಾಯಿತಿ ಕೋರಿ ಚರ್ಚೆ ನಡೆಸುತ್ತಿದ್ದಾರೆ. ಇದಲ್ಲದೆ, ಇನ್ನೂ ಒಂದಷ್ಟು ಹಣ ಸಂಗ್ರಹಿಸಲು, “ಅವರು ಭಿಕ್ಷಾಟನೆಗೆ ಜಾಗತಿಕ ಪ್ರವಾಸ ಕೈಗೊಳ್ಳಲಿದ್ದಾರೆ,” ಎಂದು ಸಿಂಧ್‌ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್‌ ಅಲಿ ಶಾ ಭಾನುವಾರ ತಿಳಿಸಿದ್ದಾರೆ. ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ನಾಯಕರೂ ಆಗಿರುವ ಅವರು ಮಟ್ಲಿಯಲ್ಲಿ ನಡೆದ ರ್ಯಾಲಿಯಲ್ಲಿ ಈ ವಿಚಾರ ಬಹಿರಂಗ ಪಡಿಸಿದ್ದಾರೆ.

ಎಲ್ಲೆಲ್ಲೂ ಬರಿದಾದ ಖಜಾನೆ:

ಇದು ಪಾಕಿಸ್ತಾನ ಕೇಂದ್ರ ಸರಕಾರದ ಕಥೆ ಮಾತ್ರವಲ್ಲ. ಇಲ್ಲಿನ ಪ್ರಾಂತೀಯ ಸರಕಾರಗಳ ಬಳಿಯೂ ಹಣವಿಲ್ಲ. ಇಮ್ರಾನ್‌ ಅವರ ಪಕ್ಷಕ್ಕೇ ಸೇರಿದ ಪಂಜಾಬ್‌ ಪ್ರಾಂತ್ಯದ ಸರಕಾರದ ಕೈ ಕೂಡ ಬರಿದಾಗಿದೆ. ಒಂದಷ್ಟು ಅಭಿವೃದ್ಧಿ ಯೋಜನೆಗಳಿಗೆ ಅಲ್ಲಿನ ಮುಖ್ಯಮಂತ್ರಿ ಉಸ್ಮಾನ್‌ ಬಜ್ದಾರ್‌ ಯೋಜನೆ ರೂಪಿಸಿದ್ದಾರಾದರೂ ಅದಕ್ಕೆ ಬೇಕಾದಷ್ಟು ಹಣ ಸಂಗ್ರಹಿಸಲು ಅವರಿಂದಾಗುತ್ತಿಲ್ಲ.

ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತುವ, 35 ಲಕ್ಷ ಮನೆಗಳನ್ನು ನಿರ್ಮಿಸುವ, 60 ಲಕ್ಷ ಉದ್ಯೋಗ ಸೃಷ್ಟಿಯ ಕನಸಿನೊಂದಿದೆ 1 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಅವರು ಮುಂದಾಗಿದ್ದಾರೆ. ಹಾಗಂಥ ಇದಕ್ಕೆ ಬೇಕಾದ ಹಣ ಅವರ ಬಳಿಯಲ್ಲಿ ಇಲ್ಲ. ಈಗಾಗಲೇ ಈ ವರ್ಷದ ಆದಾಯದಲ್ಲಿ ಕುಸಿತವಾಗಿದ್ದು, ಹಾಕಿಕೊಂಡ ಗುರಿಗಿಂತ ಕಡಿಮೆ ಸಂಗ್ರಹವಾಗಿದೆ. ಇಂಥಹದ್ದೊಂದು ಸವಾಲಿನ ಸಂದರ್ಭದಲ್ಲಿ ಪ್ರಾಂತೀಯ ತೆರಿಗೆ ಆದಾಯವನ್ನು ಅವರು ಹೆಚ್ಚಿಸಲೇಬೇಕಾಗಿದೆ. ಆದರೆ ಉದ್ದಿಮೆ ಇಲ್ಲದ ಊರಲ್ಲಿ, ಜನರು ಬೆಲೆ ಏರಿಕೆಯಿಂದ ಬಳಲುತ್ತಿರುವಾಗ ತೆರಿಗೆ ಏರಿಕೆ ಕಷ್ಟ ಸಾಧ್ಯ.

ಪಂಜಾಬ್‌ ಅತ್ಯಂತ ಹೆಚ್ಚಿನ ಜನ ವಾಸಿಸುವ ಪಾಕಿಸ್ತಾನದ ಅತೀ ದೊಡ್ಡ ಪ್ರಾಂತ್ಯ. ಹೀಗಾಗಿ ಇಲ್ಲಿನ ಜನರ ಜೀವನ ಮಟ್ಟ ಸುಧಾರಣೆ, ಆದಾಯ ಹೆಚ್ಚಳ ಸಹಜವಾಗಿಯೇ ದೇಶದ ಆರ್ಥಿಕ ಚಿತ್ರಣವನ್ನೂ ನಿರ್ಧರಿಸುತ್ತದೆ. ಪಾಕಿಸ್ತಾನದ ದುರದೃಷ್ಟಕ್ಕೆ ದೇಶವೂ ಸಂಕಷ್ಟದಲ್ಲಿದೆ; ಪಂಜಾಬ್‌ ರಾಜ್ಯವೂ ನಗದು ಕೊರತೆ ಅನುಭವಿಸುತ್ತಿದೆ. ಹೀಗೊಂದು ಸವಾಲಿನ ಸಂದರ್ಭದಲ್ಲಿ ದೇಶವನ್ನು ಜೋಳಿಗೆ ಹಿಡಿದು ಎಷ್ಟರ ಮಟ್ಟಿಗೆ ಇಮ್ರಾನ್‌ ಖಾನ್‌ ಮೇಲೆತ್ತಬಲ್ಲರು ಎಂಬುದನ್ನು ಕಾದು ನೋಡಬೇಕಿದೆ.

Also read: ಇಮ್ರಾನ್ ಖಾನ್: ಮೇಕಿಂಗ್ ಆಫ್ ಪಾಕಿಸ್ತಾನ್ ‘ಪ್ಲೇಬಾಯ್’ ಪ್ರೈಮ್‌ ಮಿನಿಸ್ಟರ್!