ಅರ್ಧ ಪರ್ಸೆಂಟ್‌ ಜಿಡಿಪಿ ಅಭಿವೃದ್ಧಿ; ಆರ್‌ಬಿಐ ಹಳೇ ಭವಿಷ್ಯ ಮತ್ತು ಸಿಎಸ್‌ಒ ಹೊಸ ಲೆಕ್ಕಾಚಾರ!
ಸುದ್ದಿ ಸಾರ

ಅರ್ಧ ಪರ್ಸೆಂಟ್‌ ಜಿಡಿಪಿ ಅಭಿವೃದ್ಧಿ; ಆರ್‌ಬಿಐ ಹಳೇ ಭವಿಷ್ಯ ಮತ್ತು ಸಿಎಸ್‌ಒ ಹೊಸ ಲೆಕ್ಕಾಚಾರ!

ಕಳೆದ ವರ್ಷ ಆರ್‌ಬಿಐ ಹೇಳಿದ್ದ 7.4% ಜಿಡಿಪಿ ದರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೇಂದ್ರೀಯ ಸಾಂಖ್ಯಿಕ ಸಂಸ್ಥೆಯ (ಸಿಎಸ್‌ಒ) ಅಂದಾಜು ಹೇಳಿದೆ.

2018ರ ಏಪ್ರಿಲ್‌ ತಿಂಗಳಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ ಅಂದರೆ ಜಿಡಿಪಿಯ ಬಗ್ಗೆ ಭವಿಷ್ಯ ನುಡಿದಿದ್ದ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) 2018-19ನೇ ಆರ್ಥಿಕ ವರ್ಷದಲ್ಲಿ ದೇಶದ ಜಿಪಿಡಿ 7.4%ಕ್ಕೆ ಹೆಚ್ಚಾಗಲಿದೆ ಎಂದು ಅಂದಾಜಿಸಿತ್ತು. ಆದರೆ, 7.4% ಜಿಡಿಪಿ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೇಂದ್ರೀಯ ಸಾಂಖ್ಯಿಕ ಸಂಸ್ಥೆಯ (ಸಿಎಸ್‌ಒ) ಅಂದಾಜು ಹೇಳಿದೆ.

ಆರ್ಥಿಕ ವರ್ಷ ಕೊನೆಯಾಗಲು ಸರಿಯಾಗಿ 83 ದಿನಗಳು ಬಾಕಿ ಇರುವಾಗ ತನ್ನ ವಾರ್ಷಿಕ ಅಂದಾಜು ವರದಿ ಬಿಡುಗಡೆ ಮಾಡಿರುವ ಸಿಎಸ್‌ಒ ಜಿಡಿಪಿ ದರ 7.2%ಕ್ಕೆ ತಲುಪಬಹುದಷ್ಟೆ ಎಂದು ಅಂದಾಜಿಸಿದೆ. ಅಂದರೆ, ದೇಶದ ಜಿಡಿಪಿ ಕಳೆದ ವರ್ಷಕ್ಕಿಂತ ಈ ಆರ್ಥಿಕ ವರ್ಷದಲ್ಲಿ ಅರ್ಧ ಪರ್ಸೆಂಟ್‌ (0.5%) ಹೆಚ್ಚಾಗಲಿದೆ.

2017-18ನೇ ಆರ್ಥಿಕ ವರ್ಷದಲ್ಲಿ 130.11 ಲಕ್ಷ ಕೋಟಿ ರೂಪಾಯಿ ಇದ್ದ ಜಿಡಿಪಿ, 2018-19ರ ಆರ್ಥಿಕ ವರ್ಷದಲ್ಲಿ 139.52 ಲಕ್ಷ ಕೋಟಿ ರೂಪಾಯಿಯಷ್ಟಿರಲಿದೆ ಎಂದು ಸಿಎಸ್‌ಒ ಅಂದಾಜಿಸಿದೆ. ಅಂದರೆ ಈ ವರ್ಷದ ಜಿಡಿಪಿ ಸಾಧನೆಯ ಅಂದಾಜು ಕೇವಲ 9.41 ಲಕ್ಷ ಕೋಟಿ.

ಸೋಮವಾರ 2018-19ನೇ ಆರ್ಥಿಕ ವರ್ಷದ ಅಂದಾಜು ವರದಿ ಬಿಡುಗಡೆ ಮಾಡಿರುವ ಸಿಎಸ್‌ಒ, 2017-18ರ ಆರ್ಥಿಕ ವರ್ಷದಲ್ಲಿ 6.7% ಇದ್ದ ಜಿಡಿಪಿ, 2018-19ನೇ ಆರ್ಥಿಕ ವರ್ಷದಲ್ಲಿ 7.2%ರಷ್ಟು ಇರುವ ನಿರೀಕ್ಷೆ ಇದೆ ಎಂದು ಹೇಳಿದೆ. ಜಿಡಿಪಿ ದರ ಹೆಚ್ಚಾಗದಿರಲು ಹಲವು ಕಾರಣಗಳನ್ನು ಸಿಎಸ್‌ಒ ಮುಂದಿಟ್ಟಿದೆ.

ಒಟ್ಟು ಮೌಲ್ಯ ಸೇರ್ಪಡೆ (ಜಿವಿಎ) ದರದಲ್ಲೂ ಹೆಚ್ಚಿನ ನಿರೀಕ್ಷೆ ಇಲ್ಲ. ಜಿವಿಎ 6.5%ರಿಂದ 7%ಕ್ಕೆ ಹೆಚ್ಚಳವಾಗಲಿದೆ ಎಂದು ಸಿಎಸ್‌ಒ ಹೇಳಿದೆ. ಬಹುತೇಕ ಖಾಸಗಿ ಉದ್ದಿಮೆಗಳು ಈ ಆರ್ಥಿಕ ವರ್ಷದಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿಲ್ಲ. ಅಲ್ಲದೆ ಜಿಎಸ್‌ಟಿ ಜಾರಿಯ ಪರಿಣಾಮಗಳೂ ನಿರೀಕ್ಷಿತ ಅಭಿವೃದ್ಧಿ ಗುರಿ ಸಾಧನೆಗೆ ಅಡ್ಡಿಯಾಗಿವೆ. ಹೀಗಾಗಿ ಆರ್‌ಬಿಐ ಅಂದಾಜಿಸಿದ್ದ 7.4% ಜಿಡಿಪಿ ಅಭಿವೃದ್ಧಿ ಸಾಧ್ಯವಾಗುವುದು ಕಷ್ಟ ಎಂದಿದೆ ಸಿಎಸ್‌ಒ.

ಇಂಧನ ವಲಯ, ನಿರ್ಮಾಣ ವಲಯ, ರಕ್ಷಣೆ ಹಾಗೂ ಇತರೆ ಸೇವಾ ವಲಯಗಳಿಂದ ಶೇಕಡ 7ರಷ್ಟು ಅಭಿವೃದ್ಧಿಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಅಷ್ಟು ಸಾಧನೆಯನ್ನು ಸಾಧಿಸುವುದು ಕಷ್ಟ ಎಂದು ಸಿಎಸ್‌ಒ ಹೇಳಿದೆ. ಹೀಗಾಗಿ 0.5% ಜಿಡಿಪಿ ಅಭಿವೃದ್ಧಿಯನ್ನು ಮಾತ್ರ ನಿರೀಕ್ಷಿಸಲು ಸಾಧ್ಯ ಎನ್ನಲಾಗಿದೆ. ಇದೂ ಕೂಡಾ ನಿರೀಕ್ಷೆಯೇ ಆಗಿದ್ದು ಅಂತಿಮ ಲೆಕ್ಕಾಚಾರ ಸಿಗುವುದು ಮಾರ್ಚ್‌ ಅಂತ್ಯದ ವೇಳೆಗೆ ಮಾತ್ರ.