ಚುನಾವಣಾ ಪೂರ್ವ ಸಮೀಕ್ಷೆ; ಯಾರಿಗೂ ಇಲ್ಲ ಸರಳ ಬಹುಮತ, ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ
ಸುದ್ದಿ ಸಾರ

ಚುನಾವಣಾ ಪೂರ್ವ ಸಮೀಕ್ಷೆ; ಯಾರಿಗೂ ಇಲ್ಲ ಸರಳ ಬಹುಮತ, ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಓಲೈಸುವುದು ಅನಿವಾರ್ಯ ಎನ್ನುತ್ತಿದೆ ಚುನಾವಣಾ ಪೂರ್ವ ಸಮೀಕ್ಷೆ.

ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟಕ್ಕೆ ಅಗತ್ಯ ಸರಳ ಬಹುಮತಕ್ಕಿಂತ 15 ಸ್ಥಾನಗಳ ಕೊರತೆಯಾಗಲಿದೆ ಎಂದು ಇಂಡಿಯಾ ಟಿವಿ- ಸಿಎನ್‌ಎಕ್ಸ್‌ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯದ ನುಡಿದಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ದೊರೆಯುವುದಿಲ್ಲ ಎಂಬ ಮುನ್ಸೂಚನೆಯನ್ನು ಈ ಸಮೀಕ್ಷೆ ನೀಡಿದೆ.

ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಣ್ಣಿಸಲಾಗಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಡಿಸೆಂಬರ್‌ 15 ರಿಂದ 25ರ ಅವಧಿಯಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಭಾಗಶಃ ಇದೇ ವರ್ಷ ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, 543 ಲೋಕಸಭಾ ಸ್ಥಾನಗಳ ಪೈಕಿ ಎನ್‌ಡಿಎ ಮೈತ್ರಿಕೂಟ ಸುಮಾರು 257 ಸ್ಥಾನಗಳನ್ನು ಗಳಿಸಲಿದೆ. ಸರಳ ಬಹುಮತಕ್ಕೆ 15 ಸ್ಥಾನಗಳ ಕೊರತೆ ಎದುರಿಸಲಿದೆ. ಇನ್ನೂ ಯುಪಿಎ ಮೈತ್ರಿ ಕೂಟ 146 ಸ್ಥಾನಗಳಿಗೆ ತೃಪ್ತಿಪಡಲಿದೆ. ಸರ್ಕಾರ ರಚಿಸಲು 272 ಮ್ಯಾಜಿಕ್ ನಂಬರ್ ಆಗಿದ್ದು, ಯಾವೊಂದು ಪಕ್ಷಕ್ಕೂ ಸರಳ ಬಹುಮತ ಸಿಗುವುದಿಲ್ಲ ಎಂದು ಸಮೀಕ್ಷೆ ಹೇಳಿದೆ.

ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಮಿಝೋರಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯುವುದಕ್ಕೆ ಮುಂಚೆ ನಡೆಸಲಾದ ಸಮೀಕ್ಷೆಯಲ್ಲಿ ಎನ್‌ಡಿಎ ಮೈತ್ರಿ ಕೂಟಕ್ಕೆ ಸರಳ ಬಹುಮತ ಸಿಗಲಿದೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 281 ಸ್ಥಾನಗಳಲ್ಲಿ ಜಯಗಳಿಸಿದರೆ, ಯುಪಿಎ 124 ಸ್ಥಾನಗಳಲ್ಲೂ, ಇತರೆ ಪಕ್ಷಗಳು 128 ಸ್ಥಾನಗಳಲ್ಲೂ ಜಯಗಳಿಸಲಿವೆ ಎಂದು ಇಂಡಿಯಾ ಟಿವಿ- ಸಿಎನ್‌ಎಕ್ಸ್‌ ಸಮೀಕ್ಷೆ ವರದಿ ನೀಡಿತ್ತು.

ಆದರೆ, ಪಂಚರಾಜ್ಯಗಳ ಚುನಾವಣೆ ಬಳಿಕ ಜನಾಭಿಪ್ರಾಯ ಬದಲಾಗಿದೆ. ಹೊಸ ಸಮೀಕ್ಷೆಯಿಂದ ಎನ್‌ಡಿಎಗೆ ಸ್ಪಷ್ಟಬಹುಮತ ಸಿಗುವುದು ಕಷ್ಟ ಎಂಬ ಅಂಶ ಬಹಿರಂಗವಾಗಿದೆ. ಈ ಅವಧಿಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ 22 ಸ್ಥಾನಗಳನ್ನು ಹೆಚ್ಚಾಗಿ ಗಳಿಸಿದ್ದರೆ, ಎನ್‌ಡಿಎ ಮೈತ್ರಿ ಕೂಟ 24 ಸ್ಥಾನಗಳನ್ನು ಕಳೆದುಕೊಂಡಿದೆ.

ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ:

ಹೊಸ ಸಮೀಕ್ಷೆಯ ಪ್ರಕಾರ ಪ್ರಾದೇಶಿಕ ಪಕ್ಷಗಳು ಸುಮಾರು 146 ಸ್ಥಾನಗಳಲ್ಲಿ ಜಯಗಳಿಸಲಿದ್ದು, ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಪ್ರಾದೇಶಿಕ ಪಕ್ಷಗಳ ಬಲ ಅಧಿಕಾರದ ಚುಕ್ಕಾಣಿ ಹಿಡಿಯುವ ರಾಷ್ಟ್ರೀಯ ಪಕ್ಷಗಳಿಗೆ ಅನಿವಾರ್ಯವಾಗಲಿದೆ ಎಂದಿದೆ ಸಮೀಕ್ಷೆ.

ಉತ್ತರಪ್ರದೇಶದ ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ), ತಮಿಳುನಾಡಿನ ಡಿಎಂಕೆ ಹಾಗೂ ಎಐಎಡಿಎಂಕೆ, ಕೆ. ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌), ಆಂಧ್ರಪ್ರದೇಶದಲ್ಲಿ ಜಗಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್‌, ಅಸಾದುದ್ದೀನ್ ಓವೈಸಿ ತೇತೃತ್ವದ ಎಐಎಂಐಎಂ, ಜಮ್ಮು-ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ, ಅರವಿಂದ್ ಕೇಜ್ರಿವಾಲ್ ಅವರ ಅಮ್‌ ಆದ್ಮಿ ಪಾರ್ಟಿ, ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ (ಬಿಜೆಡಿ) ಸೇರಿದಂತೆ ಸಣ್ಣ ಪಕ್ಷಗಳು ಹಾಗೂ ಸ್ವಾತಂತ್ರ್ಯ ಅಭ್ಯರ್ಥಿಗಳು ಲೋಕಸಭಾ ಚುನಾವಣೆಯ ನಂತರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.